ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಛೇರಿಗೆ ನುಗ್ಗಲು ಯತ್ನ, ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಪ್ರಧಾನಿ ನರೇಂದ್ರ ಮೋದಿ ಛದ್ಮವೇಷಧಾರಿ, ಇನ್ನೊಬ್ಬರ ಹೋಲಿಕೆಯ ವೇಷ ಧರಿಸುವುದು ಸಮಂಜಸವಲ್ಲ: ಕುಡಿವ ನೀರಿಗಾಗಿ ಕಾಂಗ್ರೆಸ್ ಪಕ್ಷದಿಂದ ಜ.9ರಿಂದ 19ರವರೆಗೆ ಮೇಕೆದಾಟು ಪಾದಯಾತ್ರೆ, ದ.ಕ.ದಿಂದ 2,500 ಮಂದಿ‌ ಭಾಗಿ: ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ ಹೇಳಿಕೆ

 

 

 

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಮುಖಂಡರ ನಡುವೆ ಗೌರವದ ವಾತಾವರಣವಿತ್ತು. ರಾಜಕೀಯ ಸಂದರ್ಭಗಳಲ್ಲಿ ಆರೋಪ, ಪ್ರತ್ಯಾರೋಪ ಸಹಜ. ಆದರೆ ರಾಷ್ಟ್ರೀಯ ಪಕ್ಷವಾಗಿದ್ದುಕೊಂಡು ಶಿಸ್ತು, ಸಂಸ್ಕೃತಿ, ಪರಿವಾರ ಸಂಘಟನೆಯ ಪಕ್ಷವೆಂದು ಹೇಳಿಕೊಂಡಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೇಸ್ ಪಕ್ಷದ ಕಛೇರಿಗೆ ನುಗ್ಗಲು ಯತ್ನಿಸಿರುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ. ಧಾಂದಲೆಗೆ ಚಿಂತಕರಿರುವ ಕೇಶವ ಕೃಪಾದಿಂದ ಅನುಮತಿ ಬಂದಿದೆಯಾ ಅಥವಾ ಕುಮ್ಮಕ್ಕು ಇತ್ತೆ. ಇಂತಹ ಸಂಪ್ರದಾಯ ಮುಂದಿನ ದಿನಗಳಲ್ಲಿ ಪಾಠ ಆಗಬಹುದು ಎಂದು ವಿಧಾನ ಪರಿಷತ್ ಶಾಸಕ, ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಬಿಜೆಪಿ ಕಾರ್ಯಕರ್ತರ ನಡೆಯನ್ನು ಖಂಡಿಸಿ, ಬೇಸರ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ‌ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಧಾನಿ ಯಾವ ಪಕ್ಷದವರೇ ಅಗಲಿ ಅವರಿಗೆ ಭದ್ರತೆ ನೀಡುವುದು ಕರ್ತವ್ಯ. ಆದರೆ ಪ್ರಧಾನಿಯವರ ಭದ್ರತೆಯ ಜವಾಬ್ದಾರಿ ಕೇಂದ್ರದ ಎಸ್.ಪಿ.ಜಿ ತಂಡದ ಕರ್ತವ್ಯ. ಭದ್ರತಾ ವೈಫಲ್ಯ ಹೊಣೆ ಎಸ್.ಪಿ.ಜಿ ತಂಡವೇ ಹೊರಬೇಕಾಗಿದೆ. ರಾಜ್ಯಗಳ ಪೋಲೀಸ್ ಇಲಾಖೆ ಎಸ್.ಪಿ.ಜಿ ತಂಡದ ಆದೇಶದಂತೆ ಭದ್ರತೆಯನ್ನು ಮಾಡಬೇಕಾಗಿತ್ತು. ಒಂದು ತಿಂಗಳ ಹಿಂದೆಯೇ ಭದ್ರತೆ ಕುರಿತು ಎಸ್‌ಪಿಜಿ ಮುತುವರ್ಜಿ ವಹಿಸುತ್ತದೆ. ಆದರೆ ಪಂಜಾಬ್‌ನಲ್ಲಿ ಯಾಕೆ ಮಾಡಿಲ್ಲ. ಮಂಗಳೂರಿನಲ್ಲಿ ನಡೆದ ಘಟನೆ ಖಂಡನೀಯ. ಭ್ರಮನಿರಸರಾಗಿರುವ ಬಿಜೆಪಿ ಕಾರ್ಯಕರ್ತರು ಕೆಟ್ಟ ಸಂಪ್ರಾದಾಯ ಹುಟ್ಟು ಹಾಕಿರುವುದು ಬೇಸರದ ವಿಷಯ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಹುನ್ನಾರ. ಬಿಜೆಪಿಯವರ ಬಲ ಕುಸಿಯುತ್ತಿದೆ. ಇದರಿಂದ ಹತಾಶರಾಗಿ, ಪಂಜಾಬ್‌ನಲ್ಲಿ ಪ್ರಧಾನಿಯವರ ಭದ್ರತಾ ವೈಫಲ್ಯದ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ್ದು ಖಂಡನೀಯ ಎಂದರು.

ಬಿಜೆಪಿ ಕಾರ್ಯಕರ್ತರು ಭ್ರಮನಿರಸನರಾಗಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆ ಹಾಗೂ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಇದ್ದರೂ, ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ತೋರಿಸಿದೆ. ರಾಜ್ಯದಲ್ಲಿ ಮತದಾರರ ಒಲವು ಕಾಂಗ್ರೆಸ್ಸಿನತ್ತ ವಾಲುತ್ತಿದೆ. ಬಿಜೆಪಿಯ ಮತಬ್ಯಾಂಕ್ ಹಂತಹಂತವಾಗಿ ಕುಸಿಯುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡುತ್ತೇವೆ, ಮುಳುಗುತ್ತಿರುವ ಹಡಗು ಅಂತ ಹೀಯಾಳಿಸುತ್ತಿದ್ದ ಬಿಜೆಪಿಗೆ ಮುಖ್ಯಮಂತ್ರಿಯ ತವರೂರಿನಲ್ಲೇ ಮುಖಭಂಗವಾಗಿದೆ. ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ಬಿಜೆಪಿ ಮುಳುತ್ತಿರುವ ಹಡಗಿನಂತಾಗಿದೆ ಎಂದರು.
ಪಂಚರಾಜ್ಯಗಳ ಚುನಾವಣೆ ಬರುತ್ತಿದೆ. ಒಂದೊಂದು ಚುನಾವಣೆ ಬಂದಾಗ ಆಯಾಯ ರಾಜ್ಯಕ್ಕೆ ತೆರಳಿ ಮೋದಿ ಒಂದೊಂದು ವೇಷ ಧರಿಸುತ್ತಾರೆ. ಅವರು ಓರ್ವ ಛದ್ಮವೇಷಧಾರಿ. ಪ್ರಧಾನಿಯಾದವರಿಗೆ ಘನತೆ, ಗೌರವ ಬೇಕು. ಇನ್ನೊಬ್ಬರನ್ನು ಹೋಲಿಕೆ ಮಾಡಿಕೊಂಡು ವೇಷ ಧರಿಸುವುದು ಸಮಂಜಸವಲ್ಲ. ಮತದಾರರನ್ನು ಕೆರಳಿಸಿ ಮತ ಪಡೆಯುತ್ತಿದ್ದಾರೆ. ಇಂತವರಿಂದ ದೇಶದ ಉದ್ಧಾರ ಸಾಧ್ಯವೇ ಎಂದು ಪ್ರಶ್ನಿಸಿದರು.
ರೈತರನ್ನು ಕಡೆಗಾಣಿಸಿದ್ದ ಪ್ರಧಾನಿಗೆ ರೈತರು ತಮ್ಮ ಶಕ್ತಿಯನ್ನು  ತೋರಿಸಿದ್ದಾರೆ. ರೈತ ಮಸೂದೆಯನ್ನು ವಿರೋಧಿಸಿದ್ದ ರೈತರನ್ನು ಹಿಮ್ಮೆಟ್ಟಿಸುವ ಕೆಲಸ ಕೇಂದ್ರ ಸರಕಾರ ಮಾಡಿತ್ತು. ಕಳೆದ ರೈತರ ಪ್ರತಿಭಟನೆ ಸಂದರ್ಭ ಹತ್ತಿಕ್ಕಲು ರಸ್ತೆಯಲ್ಲಿ ಕಬ್ಬಿಣದ ಮುಳ್ಳನ್ನು ಹಾಕುವ ಮೂಲಕ , ರಸ್ತೆ ಅಗೆಯುವ ಮೂಲಕ ತಡೆ, ಅಲ್ಲದೆ ಬಲವಾದ ನೀರು ಎರಚುವ ಮೂಲಕ ರೈತರನ್ನು ಹತ್ತಿಕ್ಕಲು ಯತ್ನಿಸುತ್ತಿದ್ದ ಕೇಂದ್ರ ಸರಕಾರ ಇದರಿಂದಾಗಿ ಸುಮಾರು 600ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ.
ಆದರೆ ದೇಶದ ಅನ್ನದಾತರು ಪ್ರಧಾನಿಯನ್ನು ಪ್ರಶ್ನಿಸಬಲ್ಲರು. ಅವರು ತಮ್ಮ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಸೂಚ್ಯವಾಗಿ ತಮ್ಮ ಸಂದೇಶವನ್ನು ರವಾನಿಸಿದ್ದಾರೆ ಎಂದರು.

ಮೇಕೆದಾಟು ಯೋಜನೆ ಒತ್ತಾಯಿಸಿ ದ.ಕ.ದಿಂದ 2500 ಮಂದಿ

ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವಂತೆ ಕಾಂಗ್ರೆಸ್ ಪಕ್ಷದಿಂದ ಜ.9 ರಿಂದ 19ರವರೆಗೆ ಮೇಕೆದಾಟು ಪಾದಯಾತ್ರೆ- ಯೋಜನೆಗೆ ಒತ್ತಯಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದರಿಂದ ಬಿಜೆಪಿಗೆ ಸಮಸ್ಯೆ ಬರಬಹುದು ಎಂದು ಕೊರೊನದ ನೆಪವೊಡ್ಡಿ ಲಾಕ್‌ಡೌನ್ ಮಾಡಲು ಮುಂದಾಗಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿಯಲ್ಲಿದೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖಂಡರುಗಳು ತಿಳಿಸಿದ್ದು ರಾಜ್ಯದ ಜನತೆಗೆ ನೀರಿನ ಸೌಲಭ್ಯ ಒದಗಿಸಲು ಈ ಪಾದಯಾತ್ರೆಯಲ್ಲಿ ದ.ಕ. ಜಿಲ್ಲೆಯ ಸುಮಾರು 2500ರಷ್ಟು ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ. ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಿ.ಜಿ., ಎಸ್‌ಸಿ ಘಟಕದ ಅಧ್ಯಕ್ಷ ಬಿ.ಕೆ. ವಸಂತ್, ಯೂತ್ ಕಾಂಗ್ರೇಸ್ ಮುಖಂಡ ಅಭಿನಂದನ್ ಹರೀಶ್ ಕುಮಾರ್ ಉಪಸ್ಥಿತರಿದ್ದರು.

error: Content is protected !!