ಬೆಳ್ತಂಗಡಿ: ಕೊರೊನಾ 3ನೇ ಅಲೆಯ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಪ್ಯೂ ಘೋಷಿಸಿರುವ ಸರಕಾರದ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದಿಂದ ತಾಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಸರಕಾರ ವಾರಾಂತ್ಯ ಲಾಕ್ ಡೌನ್ ವಿಧಿಸಿ ಶನಿವಾರ ಮತ್ತು ಆದಿತ್ಯವಾರ ಕೆಲವು ವ್ಯಾಪಾರ ವಹಿವಾಟು ಹೊರತುಪಡಿಸಿ ಬಾಕಿ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಲು ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳ ಲಾಕ್ ಡೌನ್ ನಿಂದಾಗಿ ಸಮಸ್ಥ ವ್ಯಾಪಾರ ವಹಿವಾಟುದಾರರು ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಮತ್ತೆ ಲಾಕ್ ಡೌನ್ ಆದೇಶ ಎಲ್ಲಾ ವ್ಯಾಪಾರೋದ್ಯಮಿಗಳ ಪಾಲಿಗೆ ಕೊಡಲಿ ಏಟು ನೀಡಿದಂತಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಇಲ್ಲಿಯವರೆಗೂ ನಾವೆಲ್ಲರೂ ಸರಕಾರದ ಜೊತೆ ಕೈಜೋಡಿಸಿದ್ದೇವೆ, ಜೊತೆಗೂ ಇನ್ನು ಮುಂದಕ್ಕೂ ಸಹಕಾರ ನೀಡಲಿದ್ದೇವೆ. ಆದರೆ ಸರಕಾರ ಕೆಲವು (ದಿನಸಿ, ತರಕಾರಿ, ಮಾಂಸ, ಮದ್ಯದಂಗಡಿ ಇತ್ಯಾದಿ)ಅಂಗಡಿಯವರಿಗೆ ಮಾತ್ರ ಅವಕಾಶ ನೀಡಿ ಹಲವರಿಗೆ ಅಂಗಡಿ ತೆರೆಯುವುದನ್ನು ನಿರಾಕರಿಸಿ ತಾರತಮ್ಯವೆಸಗುತ್ತಿದ್ದು, ಇದಕ್ಕೆ ನಮ್ಮೆಲ್ಲರ ವಿರೋಧವಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಸಮಸ್ಯೆ ಇಲ್ಲದೆ ಇರುವುದರಿಂದ ಇಲ್ಲಿ ವೀಕೆಂಡ್ ಕರ್ಫ್ಯೂ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಹಿತಕ್ಕಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಕಾರ್ಯದರ್ಶಿ ರೊನಾಲ್ಡ್ ಲೋಬೊ, ಸಂಘದ ಪದಾಧಿಕಾರಿಗಳಾದ ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಪ.ಪಂ ಸದಸ್ಯ ಜಗದೀಶ್ ಡಿ,ಶಶಿಧರ್ ಪೈ,ರಾಜೇಶ್ ಶೆಟ್ಟಿ, ಶೀತಲ್ ಜೈನ್, ಜಯರಾಮ ಗೌಡ, ಯೇಸುದಾಸ್, ಉಮೇಶ್ ಮದ್ದಡ್ಕ, ರಘುನಂದನ್, ಜೂಡೋ ಲೋಬೊ, ಮೊದಲಾದವರು ಉಪಸ್ಥಿತರಿದ್ದರು.