ಕುಂಭಶ್ರೀ ಶಾಲೆ: ಜ 06 ರಂದು ಮಾತಾ-ಪಿತಾ ಗುರುದೇವೋಭವ ಕಾರ್ಯಕ್ರಮ

 

ಬೆಳ್ತಂಗಡಿ: ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆಯಲ್ಲಿ 7 ಮತ್ತು 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮಾತಾ-ಪಿತಾ ಗುರುದೇವೋಭವ ವೈಶಿಷ್ಠಪೂರ್ಣ ಕಾರ್ಯಕ್ರಮವು ಶಾಲೆಯ ವಠಾರದಲ್ಲಿ ಜ. 06 ರಂದು ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ ಎಂದು ಶಾಲೆಯ ಸಂಚಾಲಕ ಅಶ್ವಿತ್ ಕುಲಾಲ್ ಹೇಳಿದರು.

ಅವರು ಜ‌ 03 ಸೋಮವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಂಭಶ್ರೀ 9 ವರ್ಷಗಳಲ್ಲಿ ಎಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ಸಂಸ್ಥೆಯಾಗಿದೆ. ಮೌಲ್ಯಧಾರಿತ ಮತ್ತು ಗುರುಕುಲ ಪದ್ದತಿ ಶಿಕ್ಷಣದಿಂದ ಗುರುತಿಸಿಕೊಂಡಿರುವ ಸಂಸ್ಥೆಗೆ 2017 ರಲ್ಲಿ ರಾಷ್ಟ್ರೀಯ ವಿದ್ಯಾ ಗೌರವ್ ಪ್ರಶಸ್ತಿ ಲಭಿಸಿದೆ. ಶಾಲೆಯ ಸಂಸ್ಥಾಪಕ ಕೆ.ಎಚ್. ಗಿರೀಶ್ ಅವರಿಗೆ ಸ್ಟಾರ್ ಆಫ್ ಏಷ್ಯಾ ಪ್ರಶಸ್ತಿ, 2019 ರಲ್ಲಿ ಮೈಸೂರು ಅರಮನೆಯಿಂದ ಶಾಲೆಗೆ ಪ್ರಬುದ್ಧ ಭಾರತ ರಾಜ್ಯಪ್ರಶಸ್ತಿಯ ಜತೆಗೆ 2020 ರಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಂಸ್ಥೆಯ ಹೆಸರು ನೋಂದಣಿ ಆಗಿದೆ ಎಂದರು.

ಸಂಸ್ಥೆಯ ಸಂಸ್ಥಾಪಕ ಕೆ.ಹೆಚ್. ಗಿರೀಶ್ ಅವರು ಮಾತನಾಡಿ, ಮಾತಾ-ಪಿತಾ ಕಾರ್ಯಕ್ರಮವು ಒಂದು ಹೃದಯಸ್ಪರ್ಶಿ ಕಾರ್ಯಕ್ರಮವಾಗಿದ್ದು, ಪೋಷಕರು ಮತ್ತು ಮಕ್ಕಳ ಮಧ್ಯೆ ಪ್ರೀತಿ ಮತ್ತು ಭಾಂದವ್ಯವನ್ನು ವೃದ್ಧಿಗೊಳಿಸುವ ರೋಮಾಂಚನಕಾರಿ ಕಾರ್ಯಕ್ರಮ ಇದಾಗಿದೆ ಎಂದರು. ವಿಧಾನಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಖ್ಯಾತ ವಾಗ್ಮಿ ಸಹನಾ ಕುಂದರ್ ಸೂಡ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ., ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ, ಮಾಜಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಸೇರಿದಂತೆ ಹಲವು ಅತಿಥಿ ಗಣ್ಯರು ಮುಸ್ಸಂಜೆಯ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕುಂಭಶ್ರೀ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಜಿ., ಪ್ರಾಥಮಿಕ ಶಾಲಾ ವಿಭಾಗದ ಸಹಾಯಕ ಮುಖ್ಯಶಿಕ್ಷಕಿ ಪವಿತ್ರಾ ಕುಮಾರಿ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ರಾವ್, ಕಾಲೇಜು ವಿಭಾಗದ ಉಪ ಪ್ರಾಂಶುಪಾಲೆ ವಿಂದ್ಯಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!