ತುಳುನಾಡ ಸಂಸ್ಕೃತಿ, ಮೆರುಗು ಸವಿಯಲು ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ ಅರ್ಥಪೂರ್ಣ ಸ್ಥಳ: ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅಭಿಮತ: ಗುಜರಾತ್‍, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಮರಣಾ ಗ್ರಂಥ `ಸಿರಿಕಂಡ’ ಲೋಕಾರ್ಪಣೆ:

 

 

 

ಗುಜರಾತ್: ಜನರ ಮನಸ್ಥಿತಿಯನ್ನು ಸಮರ್ಥವಾಗಿ ಬದಲಾಯಿಸುವಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರ ಮಹತ್ತರವಾದುದು. ಯಾವುದೇ ಸಂಸ್ಕೃತಿ, ಭಾಷೆಗಳ ವಿನಾಶ ತಡೆಗಟ್ಟುವಲ್ಲಿ ಮತ್ತು ಒಂದು
ಸಂಸ್ಕೃತಿಯನ್ನು ಗೌರವಿಸಲು ಮತ್ತು ಜಾಗತೀಕರಣದಿಂದ ಬದುಕುಳಿಸಲು ಮೊಗಸಾಲೆಗಳ ಪಾತ್ರವೂ
ನಿರ್ಣಾಯಕ ಎಂದು ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹೇಳಿದರು.
ಅವರು ಗುಜರಾತ್ ಬಿಲ್ಲವರ ಸಂಘ (ಜಿಬಿಎಸ್)ವು ಬರೋಡಾದ ಅಲ್ಕಾಪುರಾ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ರಜತೋತ್ಸವದ ಸಂಸ್ಮರಣಾ ಗ್ರಂಥ ‘ಸಿರಿಕಂಡ’ ಅನಾವರಣಗೊಳಿಸಿ ಮಾತನಾಡಿದರು.

 

 

 

ಗತವೈಭವವನ್ನು ಮರಳಿ ಪಡೆಯಲು ಡಾ. ತುಕಾರಾಮ ಪೂಜಾರಿ ಖಾಸಗಿತ್ವದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಾಧನೆ ಅದ್ಭುತವಾದುದು. ತುಳುನಾಡ
ಸಂಸ್ಕೃತಿ ಮೆರುಗನ್ನು ಸವಿಯಲು ಇದೊಂದು ಅರ್ಥಪೂರ್ಣ ಮತ್ತು ಆಕರ್ಷಕ ಕೇಂದ್ರವಾಗಿದೆ. ಸ್ವ-ಉತ್ಸಾಹಿತರಾಗಿ ಅವಕಾಶಗಳನ್ನು ಬಳಸಿಕೊಂಡು ಇದನ್ನು ಮುಖತಃ ವೀಕ್ಷಿಸಿದಾಗ ನಮ್ಮ ಕಳೆದುಹೋದ
ವೈಶಿಷ್ಟ್ಯ ಪೂರ್ಣ ಪರಂಪರೆಯ ಅನುಭವವಾಗುವುದು. ಆವಾಗಲೇ ಸಂಸ್ಕೃತಿ ಸಿರಿಯ ಕಣಜ ಎಂದೆಣಿಸಿ
ಶ್ರೀಗಂಧದ ಪರಿಮಳವನ್ನು ಪಸರಿಸುವ ಈ ‘ಸಿರಿಕಂಡ’ ಸಂಸ್ಮರಣಾ ಗ್ರಂಥದ ಪುನರ್ವಶವಾಗುವುದು ಎಂದರು.

 

 

ಡಾ ತುಕಾರಾಮ ಪೂಜಾರಿ ಪ್ರಸ್ತಾವನೆಗೈದು ಮಾತನಾಡಿ, ಕಣ್ಮರೆಯಾಗುತ್ತಿರುವ ಸಂಸ್ಕೃತಿಗೆ ಜೀವಾಳ ನೀಡುವ ಪ್ರಯತ್ನ
ನಮ್ಮದಾಗಿದೆ. ಆಧುನಿಕ ಸಮಾಜದ ಬದುಕಿನಲ್ಲಿ ನಮ್ಮ ಪರಂಪರೆಗಳ ಅಧ್ಯಯನ ಅಗತ್ಯವಾಗಿದೆ. ಸಂಸ್ಕೃತಿಗಳ ಉಳಿವು ಮತ್ತು ಸುಧಾರಿಸಲು ಸಾಕಷ್ಟು ಅವಕಾಶಗಳಿದ್ದು ನಾವು ಅಂತಹ ಪ್ರಯತ್ನ ಬಯಸುತ್ತೇವೆ. ಅದಕ್ಕಾಗಿ
ಭಾವೀ ಜನಾಂಗಕ್ಕೆ ಗತ ಪರಂಪರೆ ಪರಿಚಯಿಸಲು ನಾವು ರಾಣಿ ಅಬ್ಬಕ್ಕರನ್ನು ಮಾದರಿಯನ್ನಾಗಿಸಿ
ಸಾಂಸ್ಕೃತಿಕ ಪರಂಪರೆಯ ವಸ್ತುಗಳನ್ನು ಸಂಗ್ರಹಿಸಿ ಗ್ಯಾಲರಿ ಸ್ಥಾಪಿಸಿದ್ದೇವೆ. ಸಂಸ್ಕೃತಿ ಪ್ರಿಯರೊಂದಿಗೆ
ಸರಕಾರಗಳೂ ಇದನ್ನು ಪ್ರೋತ್ಸಾಹಿಸಿ ಪೂರ್ವಜರ ಜೀವನ ವಿಧಾನದ ಬಗ್ಗೆ ಶಿಕ್ಷಣ ನೀಡಿದ್ದಲ್ಲಿ ಕ್ಷೀಣಿಸುತ್ತಿರುವ ಸಂಸ್ಕೃತಿಯನ್ನು ಹತೋಟಿಯಲ್ಲಿಡಲು ಸಾಧ್ಯ ಎಂದು ರಾಣಿ ಅಬ್ಬಕ್ಕರ ಜೀವನ ಚರಿತ್ರೆ ವಿವರಿಸಿದರು.

 

 

ಡಾ. ಆಶಾಲತ ಸುವರ್ಣ, ನಮ್ಮ ಪರಂಪರೆ, ಸಾಂಸ್ಕೃತಿಕ ಆಸ್ತಿಯ ಪ್ರದರ್ಶನವು ಸಂಸ್ಥೆಗಳು ಬಳಸುವ ಒಂದು ಅಭ್ಯಾಸವಾಗಿದೆ. ಸಂಗ್ರಹಿಸಿದ ವಸ್ತುಗಳನ್ನು ಸಾರ್ವಜನಿಕರಿಗೆ ತೋರ್ಪಡಿಸಿ
ಅವುಗಳ ಮಹತ್ವ, ಉದ್ದೇಶ, ಬಳಕೆ ಏನೆಂಬುವುದನ್ನು ಮನವರಿಸುತ್ತದೆ. ಶೈಕ್ಷಣಿಕ ಮೌಲ್ಯವನ್ನು ನೀಡಲು ಮತ್ತು ಆಗಾಗ್ಗೆ ಕಥೆಯನ್ನು ಹೇಳಲು ಪುರಾತನ ವಸ್ತು ಸಂಗ್ರಹಾಲಯ ಮಾದರಿಯ ಸಾಂಸ್ಕೃತಿಕ ಕೇಂದ್ರಗಳ ಅಗತ್ಯವಿದೆ. ಇದನ್ನು ಮನವರಿಸಿಕೊಂಡ ಡಾ. ತುಕಾರಾಮ ಪೂಜಾರಿ ಅವರ ಕನಸು ಅಬ್ಬಕ್ಕ ಗ್ಯಾಲರಿ ಮೂಲಕ ಪರಂಪರೆ ಅಧ್ಯಯನಗೈಯುವ ಮತ್ತು ಸಂರಕ್ಷಿಸುವಲ್ಲಿ ಯಶ ಕಂಡಿದೆ ಎಂದು ಅಧ್ಯಯನ ಕೇಂದ್ರದ ಬಗ್ಗೆ ತಿಳಿಸಿದರು.

 

 

ಸಂಸ್ಕೃತಿಯೊಳಗೆ ದೈನಂದಿನ ಜೀವನವನ್ನು ದಾಖಲಿಸಿ ಅದನ್ನು ಪ್ರಾಚೀನ ವಸ್ತುಗಳ ಸಂರಕ್ಷಿಸುವ ಪ್ರಮುಖ ಭಾಗಗಳಲ್ಲಿ ವಸ್ತುಸಂಗ್ರಹಾಲಯ ಒಂದಾಗಿದೆ. ಸಂಸ್ಕೃತಿಗಳು ಕಣ್ಮರೆಯಾಗುತ್ತಿರುವ ಈ ಕಾಲಘಟದಲ್ಲಿ, ದೈನಿಕ
ಜೀವನವನ್ನು ಎಚ್ಚರಿಕೆಯಿಂದ ಸಂರಕ್ಷಿಸುವ ಅಗತ್ಯವಿದೆ. ನಮ್ಮ ಪುರಾತನ ಸಂಸ್ಕೃತಿ, ತುಳುನಾಡ ವೈಭವವನ್ನು ಮತ್ತೆ ಪಡೆಯಲು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಭರವಸೆಯಾಗಿದೆ. ಇವುಗಳ ವೀಕ್ಷಣೆಗೈದು ಪುರಾತನ
ಅರಿವುವನ್ನು ಮೈಗೂಡಿಸುವ ಆಸಕ್ತಿ ಬೆಳೆಸಿಕೋಂಡಾಗ ಮಾತ್ರ ಭಾರತೀಯ ಇತಿಹಾಸ ಮಹತ್ವ ಪಡೆಯುವುದು. ಸಾಂಸ್ಕೃತಿಕ ನಷ್ಟಗಳನ್ನು ತಡೆಗಟ್ಟಲು ಇಂತಹ ಅಧ್ಯಾಯನ ಕೇಂದ್ರಗಳು ಉಪಯುಕ್ತ ಎಂದು ದಯಾನಂದ
ಬೊಂಟ್ರ ಅಭಿಪ್ರಾಯಪಟ್ಟರು

 

 

ವಿಶ್ವನಾಥ್ ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿ, ವಿಭಿನ್ನ ದೃಷ್ಟಿಕೋನ, ಸಂಸ್ಕೃತಿಪ್ರಿಯ ತಿಳುವಳಿಕೆಯುಳ್ಳ ವ್ಯಕ್ತಿಗಳ ಸೇವಾ ಭಾವನೆಗಳಿಂದ ಮಾತ್ರ ನಮ್ಮ ಮೂಲ ಸಂಸ್ಕೃತಿಯ ಉಳಿವು ಸಾಧ್ಯ. ಪ್ರದರ್ಶನಾಲಯಗಳು
ಸಂಸ್ಕೃತಿ ಕೇಂದ್ರೀಕರಿಸಿದಾಗಲೇ ಇತಿಹಾಸಗಳ ಅನಾವರಣ ಸಾಧ್ಯ ಎಂಬುವುದನ್ನು ಡಾ. ತುಕಾರಾಮ
ಪೂಜಾರಿ ದಂಪತಿ ತೋರಿಸಿ ಕೊಟ್ಟಿದ್ದಾರೆ. ಇದೂ ಒಂದು ಇತಿಹಾಸವೇ ಸರಿ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.
ಮುಂಬಯಿ ಪ್ರತಿಷ್ಠಿತ ಚಿತ್ರಕಲಾವಿದ ವಾಸುದೇವ ಕಾಮತ್ ರಚಿತ ರಾಣಿ ಅಬ್ಬಕ್ಕ ವರ್ಣಚಿತ್ರ ಮತ್ತು ಪೋಸ್ಟಲ್ ಕವರ್ ಅನ್ನು ಗುಜರಾತ್ ಬಿಲ್ಲವರ ಸಂಘಕ್ಕೆ ಜಿಬಿಎಸ್ ಗೌರವಾಧ್ಯಕ್ಷ ದಯಾನಂದ ಬೊಂಟ್ರ ಇವರಿಗೆ ಅಬ್ಬಕ್ಕ ಗ್ಯಾಲರಿ ಪರವಾಗಿ ತುಕಾರಾಮ ಪೂಜಾರಿ ನೀಡಿ ಅಭಿವಂದಿಸಿದರು

ಮುಖ್ಯ ಅತಿಥಿಗಳಾಗಿ ಉದ್ಯಮಿ ಶಿವರಾಮ ಬಿ.ಶೆಟ್ಟಿ ಹಾವಂಜೆ, ತುಳು ಸಂಘ ಅಂಕ್ಲೇಶ್ವರ್ ಅಧ್ಯಕ್ಷ ರವಿನಾಥ್ ಶೆಟ್ಟಿ, ಉದ್ಯಮಿ ಅಜಿತ್ ಶೆಟ್ಟಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳದ ಸ್ಥಾಪಕಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಫ್ರೋ ಡಾ. ತುಕಾರಾಮ ಪೂಜಾರಿ,
ಪ್ರಾಧ್ಯಾಪಕಿ, ರಾಣಿ ಅಬ್ಬಕ್ಕ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಎಸ್.ಸುವರ್ಣ, ಶೋಭಾ ದಯಾನಂದ
ಬೋಂಟ್ರಾ, ಸದಾನಂದ ಅವಿೂನ್ ಬನ್ನಂಜೆ, ಜಿಬಿಎಸ್ ಗೌರವಾಧ್ಯಕ್ಷ ದಯಾನಂದ ಬೊಂಟ್ರ, ಮಾಜಿ ಅಧ್ಯಕ್ಷ ಮೋಹನ್ ಸಿ.ಪೂಜಾರಿ ನಿಕಟಪೂರ್ವಅಧ್ಯಕ್ಷ ಮನೋಜ್ ಸಿ.ಪೂಜಾರಿ, ಪ್ರ ಕಾರ್ಯದರ್ಶಿ
ವಾಸು ವಿ.ಸುವರ್ಣ, ಪ್ರ, ಕೋಶಾಧಿಕಾರಿ ಸುದೇಶ್ ವೈ.ಕೋಟ್ಯಾನ್, ಮತ್ತಿತರ ಪದಾಧಿಕಾರಿಗಳು, ಮುಖ್ಯ
ಸಂಚಾಲಕ ಜಿನರಾಜ್ ಪೂಜಾರಿ, ಪ್ರಾದೇಶಿಕ ಸಂಚಾಲಕರು ವೇದಿಕೆಯಲ್ಲಿದ್ದರು. ಜಿಬಿಎಸ್ ಗೌ. ಪ್ರ. ಕಾರ್ಯದರ್ಶಿ ವಾಸು ವಿ.ಸುವರ್ಣ ಸ್ವಾಗತಿಸಿ, ನಿರೂಪಿಸಿದರು. ಮಹಿಳಾ ವಿಭಾಗಧ್ಯಕ್ಷೆ ಸರಿತಾ ಸೋಮನಾಥ ಪೂಜಾರಿ ವಂದಿಸಿದರು.

error: Content is protected !!