ಬೆಳ್ತಂಗಡಿ:ಈಗಿನ ಕಾಲಘಟ್ಟದಲ್ಲಿ ಹೃದಯ ತಪಾಸಣೆ ಮಾಡಿಕೊಳ್ಳಲೇಬೇಕು ಯಾಕೆಂದರೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿದೆ ಎಂದು ಬೆಳ್ತಂಗಡಿ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕುಯಿ ಹೇಳಿದರು. ಅವರು ನೂರುಲ್ ಹುದಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ,ಲಾಯಿಲ, ನೂರುಲ್ ಹುದಾ ಜುಮ್ಮಾ ಮಸೀದಿ, ಲಾಯಿಲ, ಗ್ರಾಮ ಪಂಚಾಯತ್ ಲಾಯಿಲ,ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಮತ್ತು ಕೆ ಎಂ ಸಿ ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ ಲಾಯಿಲದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೂರುಲ್ ಹುದಾ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಸಾಂ ಗವಾಗಿ ನಡೆಯಲಿ ಊರಿನ ಜನರು ಆರೋಗ್ಯದಲ್ಲಿ ಇರುವಂತೆ ದೇವರ ಆಶೀರ್ವಾದ ಬೇಡುತ್ತೇನೆ ಎಂದು ಶುಭಾಶೀರ್ವಾದಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪದ್ಮಪ್ರಸಾದ ಅಜಿಲರು ಮಾತನಾಡಿ ಕೆಲವೊಂದು ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ ಅದರೆ ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಮಾಡಬೇಕು ಎಂಬ ಉದ್ಧೇಶದಿಂದ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವಂತದ್ದು ಅಭಿನಂದನೀಯ . ನಮ್ಮ ಸಂಪಾದನೆಯಲ್ಲಿ ಒಂದು ಪಾಲನ್ನು ಇಂತಹ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂಬಂತೆ ನೂರುಲ್ ಹುದಾ ಟ್ರಸ್ಟ್ ಮಾಡುತ್ತಿರುವ ಇಂತಹ ದೊಡ್ಡ ಮಟ್ಟದ ಹೃದಯ ತಪಾಸಣಾ ಶಿಬಿರ ತಾಲೂಕಿನ ಜನತೆಗೆ ಸಂತೋಷದಾಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಹಾಗೂ ಹಮೀದ್ ಅಂಬುಲೆನ್ಸ್ , ಇಸ್ಮಾಯಿಲ್ ಸಂಜಯನಗರ ಇವರನ್ನು ಸನ್ಮಾನಿಸಲಾಯಿತು. ಹರೇಕಳ ಹಾಜಬ್ಬ ಕೆಎಂಸಿ ಆಸ್ಪತ್ರೆಯ ಹಸಿರು ಕಾರ್ಡನ್ನು ಸಾಂಕೇತಿಕವಾಗಿ ನೀಡಿದರು.ಕಾರ್ಯಕ್ರಮವನ್ನು ಗಣ್ಯರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಜಾಫರ್ ಸ್ಪಾರಿಕ್ ತಂಙಳ್ ಲಾಯಿಲ,ಡಾ. ಗೋಪಾಲಕೃಷ್ಣ.ಕೆ. ಉದ್ಯಮಿ ಪುಷ್ಪರಾಜ ಶೆಟ್ಟಿ, ಲಾಯಿಲ ಗ್ರಾ.ಪಂ ಮಾಜಿ ಅಧ್ಯಕ್ಷೆ ಶೀಲಾ ಶೆಟ್ಟಿ, ಲಾಯಿಲ ನೂರುಲ್ ಹುದಾ ಜುಮ್ಮಾ ಮಸೀದಿಯ ಖತೀಬರಾದ ಮಹಮ್ಮದ್ ರಿಯಾಝ್ ಬಾಹಸನಿ, ಅಝೀಝ್ ಅಧ್ಯಕ್ಷರು ಜುಮ್ಮಾ ಮಸೀದಿ ಲಾಯಿಲ, ಹೈದರ್ ಆಲಿ ಎಂ ಮಂಗಳೂರು,ಹಮೀದ್ ಮಿಲನ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸರ್ ತಾಜ್ ವಹಿಸಿದ್ದರು.ಮಹಮ್ಮದ್ ರಫೀಕ್ ನಿರೂಪಿಸಿ ಝಮೀರ್ ಸಹಾದಿ ಧನ್ಯವಾದವಿತ್ತರು.