3 ನೇ ಆಲೆ ಭೀತಿ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ. ಹಲವು ದೇಶಗಳ ನಿದ್ದೆಗೆಡಿಸಿದ ರೂಪಾಂತರಿ ಕೊರೊನಾ ಓಮಿಕ್ರೋನ್ .

 

 

 

 

ದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ಕೊರೊನಾ ‘ಓಮಿಕ್ರೋನ್​​’ ಪತ್ತೆಯಾಗಿರುವುದು ಭಾರತ ಸೇರಿದಂತೆ ಅನೇಕ ದೇಶಗಳ ನಿದ್ದೆಗೆಡಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಈ ವೇಳೆ ಲಸಿಕೆ ಅಭಿಯಾನ ಹಾಗೂ ಹೊಸ ರೂಪಾಂತರಿ ಕುರಿತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ದೆಹಲಿಯಲ್ಲಿ ನಡೆದ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದು, ಹೊಸ ರೂಪಾಂತರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಈಗಾಗಲೇ ವಿದೇಶಿ ಪ್ರಯಾಣಿಕರಿಗೆ ನೀಡಿರುವ ಸಡಲಿಕೆ ಬಗ್ಗೆ ಮತ್ತೊಂದು ಸಲ ಮರುಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಹೊಸ ರೂಪಾಂತರಿ ತಡೆಗಟ್ಟಲು ಪೂರ್ವಭಾವಿಯಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ನಮೋ ಮಾತನಾಡಿದ್ದು, ಹೊಸ ಸೋಂಕು ಗಮನದಲ್ಲಿಟ್ಟುಕೊಂಡು ಜನರು ಮತ್ತಷ್ಟು ಜಾಗರೂಕರಾಗುವಂತೆ ಸೂಚನೆ ನೀಡುವಂತೆ ತಿಳಿಸಿದ್ದಾರೆ. ಮಾಸ್ಕ್​, ಸಾಮಾಜಿಕ ಅಂತರ ಹಾಗೂ ಕೋವಿಡ್​ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಿದ್ದು, ದಕ್ಷಿಣ ಆಫ್ರಿಕಾ, ಬೋಟ್ಸವನಾದಲ್ಲಿ ಪತ್ತೆಯಾಗಿರುವ ರೂಪಾಂತರಿ ಬಗ್ಗೆ ಮಾಹಿತಿ ನೀಡಿದ್ದು, ಇದರಿಂದ ಭಾರತಕ್ಕಿರುವ ಅಪಾಯದ ಬಗ್ಗೆ ನಮೋ ಮಾಹಿತಿ ಪಡೆದುಕೊಂಡರು. ಹೊಸ ಸೋಂಕಿನಿಂದ ಈಗಾಗಲೇ ಅಪಾಯದಲ್ಲಿರುವ ದೇಶಗಳ ಮೇಲೆ ಹದ್ದಿನ ಕಣ್ಣಿಡಲು ಕೇಂದ್ರ ಆರೋಗ್ಯ ಇಲಾಖೆಗೆ ಸೂಚಿಸಿರುವ ನಮೋ, ಅಲ್ಲಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚಿಸಿದ್ದಾರೆ.

ಸಭೆಯಲ್ಲಿ ಕ್ಯಾಬಿನೆಟ್​ ಕಾರ್ಯದರ್ಶಿ ರಾಜೀವ್​ ಗೌಬಾ, ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ ಪಾಲ್​ ಸೇರಿ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ತೆಗೆದುಕೊಂಡಿರುವ ಮಹತ್ವದ ನಿರ್ಣಯಗಳು
ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನೀಡಿರುವ ಸಡಿಲಿಕೆ ಮತ್ತೊಮ್ಮೆ ಪರಾಮರ್ಶೆಗೆ ಸೂಚನೆ

ಹೊಸ ಸೋಂಕಿನಿಂದ ಅಪಾಯದಲ್ಲಿರುವ ದೇಶಗಳ ಮೇಲೆ ಹೆಚ್ಚಿನ ನಿಗಾ

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು, ಪರೀಕ್ಷೆಗೊಳಪಡಿಸಲು ಸೂಚನೆ

ರಾಜ್ಯ ಸರ್ಕಾರದೊಂದಿಗೆ ನಿಕಟ ಸಂಪರ್ಕ ಹಾಗೂ ಸರಿಯಾದ ಮಾಹಿತಿ ನೀಡುವುದು

ಎರಡನೇ ಡೋಸ್​ ಕೋವಿಡ್ ಲಸಿಕೆ ವೇಗ ಮತ್ತಷ್ಟು ಹೆಚ್ಚಿಸಲು ಸೂಚನೆ

ಮಾಸ್ಕ್​, ಸಾಮಾಜಿಕ ಅಂತರ ಹಾಗೂ ಕೋವಿಡ್​ ಮಾರ್ಗಸೂಚಿ ಪಾಲನೆ

error: Content is protected !!