ಬೆಳ್ತಂಗಡಿ: ಒಬ್ಬ ವ್ಯಕ್ತಿ ಶ್ರೇಷ್ಠನಾಗುವುದು ಅದೃಷ್ಟ, ಮತ, ಪಂಥಗಳಿಂದಲ್ಲ. ಆತನ ಸಾಧನೆಯಿಂದ, ಪರಿಶ್ರಮದಿಂದ, ಒಳ್ಳೆಯ ಚಿಂತನೆಯ ಮುಖಾಂತರ ಅದಕ್ಕೆ ಉದಾಹರಣೆ ಹಾಜಬ್ಬನವರು ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅವರು ಉಜಿರೆಯಲ್ಲಿ ಹಾಜಬ್ಬ ಅಭಿನಂದನಾ ಸಮಿತಿ ವತಿಯಿಂದ ಅಕ್ಷರ ಸಂತ ಹರೆಕ್ಕಳ ಹಾಜಬ್ಬನವರ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು.
ತಾನು ಅವಿದ್ಯಾವಂತನಾದರೂ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಢ ನಿರ್ಧಾರ ಹಾಗೂ ಸತತ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿದ ಫಲವಾಗಿ ಹಾಜಬ್ಬನವರನ್ನು ವಿಶ್ವ ಗುರುತಿಸುವಂತಾಗಿದೆ. ಇಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಇದು ನಮಗೆ ಹೆಮ್ಮೆ. ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜಬ್ಬನವರು ನಮಗೆ ಹೇಗೆ ಪ್ರೇರಣೆ ಆಗುತ್ತಾರೆ. ನಮಗೆ ಯಾವ ರೀತಿ ಸ್ಪೂರ್ತಿ ಆಗುತ್ತಾರೆ ಎಂದು ಯೋಚನೆ ಮಾಡಬೇಕು. ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಆಗುವುದು ಸುಲಭ. , ಆದರೆ ಒಬ್ಬ ಹಾಜಬ್ಬನಾಗಲು ಬಹಳ ಕಷ್ಟ ಇದೆ. ಶಾಲೆಯಲ್ಲಿ ಡಾಕ್ಟರ್, ಇಂಜಿನಿಯರ್, ಕಲಾವಿದ, ಪದವೀಧರ, ಶಿಕ್ಷಕರಾಗಲು ಶಿಕ್ಷಣ ಇದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಸಾಧಕನಾಗಲು ಉತ್ತಮ ಚಿಂತನೆಯಿಂದ ಮಾತ್ರ ಸಾಧ್ಯ ಎಂದರು.
ಅಂತರಂಗದಲ್ಲಿ ಮನುಷ್ಯತ್ವ ಇರುವವರು ಶ್ರೇಷ್ಠರಾಗಲು ಸಾಧ್ಯವಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ವಿಶಿಷ್ಟ ಶಕ್ತಿ ಯೋಚನೆಗಳು ಇರುತ್ತವೆ. ಆದರೆ ಅದನ್ನು ಗುರುತಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಭವಿಷ್ಯದ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಆಸ್ತಿಯಾಗಬೇಕು ಎಂದು ಅವರು ಹೇಳಿದರು.
ಸಮಾಜಕ್ಕೆ ಸರ್ವಸ್ವ ಅರ್ಪಣೆ: ಶಾಸಕ ಹರೀಶ್ ಪೂಂಜ
ಅಕ್ಷರ ಸಂತ ಹರೆಕ್ಕಳ ಹಾಜಬ್ಬನವರಿಗೆ ಮಾಡುವ ಈ ಸನ್ಮಾನ ಆಡಂಬರದ ಸನ್ಮಾನ ಆಗಬಾರದು ಅಥವಾ ಕೇವಲ ನಮ್ಮ ಪ್ರತಿಷ್ಠೆಗೋಸ್ಕರ ಸನ್ಮಾನ ಮಾಡಬಾರದು. ಏಕೆಂದರೆ ಹಾಜಬ್ಬನವರು ಒಂದು ಕನಸನ್ನು ಕಂಡವರು. ತನ್ನ ಜೀವನವನ್ನು ಸಾರ್ಥಕತೆಯಲ್ಲಿ ಬಳಸಿದವರು. ಅವರ ಕೆಲಸ ಏನೆಂದರೆ, ಹಳ್ಳಿಯ ಮಕ್ಕಳು ಶಾಲೆಗೆ ಹೋಗಬೇಕು. ನಮ್ಮ ಊರಿನ ಮಕ್ಕಳಿಗೆ ಶಾಲೆ ಬೇಕು. ನಮ್ಮ ಊರಿನ ಮಕ್ಕಳು ಹತ್ತು ಕಿಲೋಮೀಟರ್ ನಡೆದುಕೊಂಡು ಹೋಗುವುದನ್ನು ತಪ್ಪಿಸಬೇಕಾದರೆ ನಾನು ಅದಕ್ಕೋಸ್ಕರ ಶ್ರಮ ಪಡಬೇಕು ಎಂದು ಯೋಚನೆ ಮಾಡಿರುವುದು ಯಾವುದೋ ಒಬ್ಬ ಶ್ರೀಮಂತ ಅಲ್ಲ, ಯಾರೊಬ್ಬ ಶಕ್ತಿವಂತ ಅಲ್ಲ, ತನ್ನ ಜೀವನ ತನ್ನ ಬದುಕಿಗೆ ಕಷ್ಟ ಆಗಿರುವಂತಹ ವ್ಯಕ್ತಿ ಎಂದರು.
ಸರಳ ಸಜ್ಜನಿಕೆ ಪ್ರಾಂಜಲ ಮನಸ್ಸಿನ ಹಾಜಬ್ಬನವರು ಎಲೆಮರೆಯ ಕಾಯಿಯಂತೆ ಇಂದು ಸಮಾಜಕ್ಕೆ ಸೇವೆ ನೀಡಿದ್ದಾರೆ. ಸಮಾಜಕ್ಕಾಗಿ ಸರ್ವಸ್ವವನ್ನು ಅರ್ಪಿಸಿರುವ ಇವರು ಇತರರಿಗೆ ಪ್ರೇರಣೆಯಾಗಿದ್ದಾರೆ. ಶಿಕ್ಷಣವಂಚಿತರಾಗ ಬೇಕಿದ್ದ ಅನೇಕರಿಗೆ ಇವರ ಸಾಧನೆ ದಾರಿದೀಪವಾಗಿದೆ. ಇದರಿಂದ ಇಂದು ಇವರನ್ನು ದೇಶವೇ ಗುರುತಿಸುವಂತಾಗಿದೆ ಎಂದರು.
ಎಲ್ಲರಿಗೂ ಚಿರಋಣಿ: ಹಾಜಬ್ಬ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಾಜಬ್ಬ ಸಾಮಾನ್ಯ ಮನುಷ್ಯನಾಗಿದ್ದ ನನ್ನನ್ನು ಗುರುತಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣವು ಪ್ರಮುಖ ಶಕ್ತಿಯಾಗಿದೆ. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು. ಬೆಳ್ತಂಗಡಿ ಶಾಸಕರು ಸಂಘ- ಸಂಸ್ಥೆ ಹಾಗೂ ನಾಗರಿಕರು ನೀಡಿದ ಅಭೂತಪೂರ್ವ ಸಹಕಾರವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳಿದರು.
ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಸಹಕಾರದಲ್ಲಿ ಕಾರ್ಯಕ್ರಮ ಜರಗಿತು.
ಶಾಲೆಗೆ ಪರಿಕರ ಹಸ್ತಾಂತರ ಮೂಲಕ ಉದ್ಘಾಟನೆ:
ಹಾಜಬ್ಬನವರ ಹರೇಕಳ ಶಾಲೆಯ ಅಭಿವೃದ್ಧಿಗೆ ಸಹಾಯ ಹಸ್ತ ನೀಡಲಾಯಿತು. ಅಲ್ಲಿಗೆ ಅಗತ್ಯವಿರುವ ಕೊಠಡಿಗೆ ತಾಲೂಕಿನ ದಾನಿಗಳ ಸಹಕಾರದಲ್ಲಿ 5 ಲಕ್ಷ ರೂ. ನೆರವು, ಬದುಕು ಕಟ್ಟೋಣ ಬನ್ನಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ 10 ಜತೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು. ಉಜಿರೆ ಗ್ರಾಮ ಪಂಚಾಯತಿ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕಾಜೂರು ದರ್ಗಾ ಶರೀಫ್ ವತಿಯಿಂದ ಹಾಜಬ್ಬ ಅವರನ್ನು ಅಭಿನಂದಿಸಿ ಶಾಲೆಗೆ ಆರ್ಥಿಕ ನೆರವು ನೀಡಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿ ನಾಯಕರು ಹರೇಕಳ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ, ಬೆಳ್ತಂಗಡಿ ಕಾಲೇಜಿನ ಪ್ರಾಂಶುಪಾಲ ಆಂಟನಿ, ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ, ಬೆಳ್ತಂಗಡಿ ರೋಟರಿ ಕ್ಲಬ್ ನ ಕಾರ್ಯದರ್ಶಿ ಅಬೂಬಕ್ಕರ್, ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು ಮತ್ತಿತರರು ಉಪಸ್ಥಿತರಿದ್ದರು.
ಡಾ. ಬಿ.ಎ.ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಮಡಂತ್ಯಾರು ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ಜೋಸೆಫ್ ವಂದಿಸಿದರು.