ಹೊಸ ಬದಲಾವಣೆಯೊಂದಿಗೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಗುಣಾತ್ಮಕ ವಿಸ್ತರಣೆಗೆ ಪ್ರಾಮಾಣಿಕ ಪ್ರಯತ್ನ: ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಚಟುವಟಿಕೆ, ಜಿಲ್ಲೆಯ ಪ್ರತಿಭಾವಂತ ಸಾಹಿತಿಗಳಿಗೆ ವೇದಿಕೆ ಒದಗಿಸುವ ಗುರಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಡಾ. ಶ್ರೀನಾಥ್ ಹೇಳಿಕೆ

 

 

 

ಬೆಳ್ತಂಗಡಿ: ಕನ್ನಡದ ಬೆಳವಣಿಗೆ ದೃಷ್ಟಿಯಿಂದ ಏಕಮುಖವಾದ ಚಿಂತನೆ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಸೃಜನಶೀಲ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುವುದು, ಹಿರಿಯರ ಮಾರ್ಗದರ್ಶನದಿಂದ ಯುವ ಸಾಹಿತಿ , ಕವಿಗಳಿಗೆ ಹೆಚ್ಚಿನ ಅವಕಾಶ ಮತ್ತು ಪ್ರೇರಣೆ ಲಭಿಸುವಂತೆ ಮಾಡುವ ಉದ್ದೇಶ ಇಟ್ಟುಕೊಂಡು ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಾ. ಎಂ.‌ ಪಿ. ಶ್ರೀನಾಥ್ ಅವರನ್ನು ಈ ಬಾರಿ ಬೆಂಬಲಿಸಬೇಕಿದೆ ಎಂದು ವಾಣಿ ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಯದುಪತಿ ಗೌಡ ಹೇಳಿದ್ದಾರೆ.
ಅವರು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಸ್ಪರ್ಧಿ ಡಾ. ಎಂ.ಪಿ. ಶ್ರೀನಾಥ್ ಅವರ ಕುರಿತು ಮಾತನಾಡಿದರು.
ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಎಂ.ಪಿ ಶ್ರೀನಾಥ್ ಮಾತನಾಡಿ, ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಈ ನಾಡಿನ ಸಾಹಿತ್ಯ, ಸಂಸ್ಕೃತಿ, ನಾಡು – ನುಡಿ, ನೆಲ- ಜಲದ ಬಗ್ಗೆ ಪ್ರಾಮಾಣಿಕ ಸೇವೆಗಾಗಿ ಒಬ್ಬ ಕ್ರಿಯಾಶೀಲ ಸಂಘಟಕನಾಗಿ, ಕನ್ನಡ ಪರ ಕಾರ್ಯಕರ್ತನಾಗಿ, ಕಳೆದ ಕೆಲವು ದಶಕಗಳಿಂದ ಕನ್ನಡ ಸಾಹಿತ್ಯ ಸರಸ್ವತಿಯ ಸೇವೆಯಲ್ಲಿ ನಿರತನಾಗಿದ್ದೇನೆ. ಹಲವು ಯೋಜನೆ ಮತ್ತು ಕನಸುಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಾನಾಗಿದ್ದೇನೆ ಎಂದರು.
ಹೊಸ ಬದಲಾವಣೆಯೊಂದಿಗೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಗುಣಾತ್ಮಕವಾಗಿ ವಿಸ್ತರಿಸುವುದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತನ್ನು ಕ್ರೀಯಾಶೀಲವಾಗಿ ಕಟ್ಟುವ ಮತ್ತು ಪುನರ್‌ರೂಪಿಸುವ ಅಗತ್ಯವಿದೆ. ಜಿಲ್ಲೆಯ ಕನ್ನಡ ಭವನದ ನಿರ್ಮಾಣ ಮತ್ತು ತಾಲೂಕಿನಲ್ಲಿ ಕನ್ನಡ ಭವನದ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ನಿರ್ಮಿಸುವುದು, ಜಿಲ್ಲೆಯಲ್ಲಿರುವ ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಅವರ ಸಾಹಿತ್ಯಕ್ಕೆ ವೇದಿಕೆ ಕಲ್ಪಿಸುವುದು, ಪರಿಷತ್ತಿನ ವತಿಯಿಂದ ನಿರಂತರ ಕಾರ್ಯಕ್ರಮಗಳ ಯೋಜನೆ, ಚಿಂತನಾ ಚಾವಡಿ, ಕನ್ನಡ ಕಾವ್ಯ ಪರಂಪರೆಗಳ ಪರಿಚಯ ಹೀಗೆ ಅನೇಕ ಯೋಜನೆಗಳನ್ನು ನಾನು ಇಟ್ಟುಕೊಂಡಿದ್ದೇನೆ ಎಂದರು.
26 ವರ್ಷಗಳ ಕಾಲ ಕಾಲೇಜು ಉಪನ್ಯಾಸಕನಾಗಿ ಬೋಧನಾ ಅನುಭವ ಹೊಂದಿದ್ದೇನೆ. ಅನೇಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದ ಮತ್ತು ಭಾಗವಹಿಸಿದ ಅನುಭವ ಇದೆ. ವೈಯಕ್ತಿಕವಾಗಿ ಸಾವಿರಕ್ಕಿಂತಲೂ ಹೆಚ್ಚಿನ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಮಾಡಲಾಗಿದೆ. ಬೆಂಗಳೂರು, ಮಡಿಕೇರಿ, ಮೈಸೂರು, ಧಾರವಾಡಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ದುಡಿದ ಅನುಭವ ಇದೆ. ಮುಖ್ಯವಾಗಿ ಉಜಿರೆಯಲ್ಲಿ 2017ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆ, ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹಲವು ಸಮ್ಮೇಳನಗಳನ್ನು ಸಂಯೋಜನೆ ಮಾಡಿದ್ದು ಸಾಹಿತ್ಯದ ಕೆಲಸಗಳಿಗೆ ಪೂರಕವಾಗಿದೆ. ಉಜಿರೆಯಲ್ಲಿ 2009ರಲ್ಲಿ ಹಮ್ಮಿಕೊಂಡಿದ್ದ ವಿಶ್ವ ತುಳು ಸಮ್ಮೇಳನದ ಕಾರ್ಯದರ್ಶಿಯಾಗಿ ದುಡಿದಿದ್ದೇನೆ. ಅನೇಕ ಪುಸ್ತಕಗಳ ಪ್ರಕಟಣೆಯ ಸಂಯೋಜನೆ ಮಾಡಿದ್ದೇನೆ. 2015 ರಲ್ಲಿ ಉಜಿರೆ ಜೇಸಿಐನ ಅಧ್ಯಕ್ಷನಾಗಿ ಅನೇಕ ಜನಪರ ಕಾಠ್ಯಕ್ರಮಗಳನ್ನು ರೂಪಿಸಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದೇನೆ. ಜಿಲ್ಲೆಯ ಎಲ್ಲಾ ಸಾಹಿತಿಗಳು, ಸಾಹಿತ್ಯಾಸಕ್ತರ, ಸರ್ವ ಸದಸ್ಯರ ಸಹಕಾರವನ್ನು ನಾನು ಬಯಸುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಎಸ್.ಡಿ. ಶೆಟ್ಟಿ, ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಕಮಾಲಾಕ್ಷ ಆಚಾರ್ ಉಪಸ್ಥಿತರಿದ್ದರು.

error: Content is protected !!