ನಿವೃತ್ತ ಪ್ರಾಂಶುಪಾಲರಿಂದ ವಿಭಿನ್ನ ರೀತಿಯ ಅವಿಷ್ಕಾರ ಕೊಳವೆಬಾವಿಗೆ ಸೈಫನ್ ಆಧಾರದಲ್ಲಿ ಜಲಮರುಪೂರಣ  

 

 

ವರದಿ: ಪ್ರಸಾದ್ ಶೆಟ್ಟಿ ಎಣಿಂಜೆ.

 

ಬೆಳ್ತಂಗಡಿ:ಕೆರೆ ಬಾವಿಗಳ ಸಂಖ್ಯೆ ಕಡಿಮೆಯಾಗಿ ಕೊಳವೆ ಬಾವಿಗಳ ಸಂಖ್ಯೆ ಅತ್ಯಧಿಕವಾಗುತ್ತಿರುವುದರಿಂದ ದಿನದಿಂದ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅದಲ್ಲದೇ ಸಮರ್ಪಕವಾಗಿ ಮಳೆ ಕೂಡ ಸಮಯಕ್ಕೆ ಸರಿಯಾಗಿ ಬಾರದೇ ಎಲ್ಲರೂ ಆತಂಕಕ್ಕೆ ಒಳಗಾಗುವಂತಾಗುತ್ತಿದೆ. ಕೆಲವು ಭಾಗಗಳಲ್ಲಿ ಈಗಾಗಲೇ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ ಕೆಲವು ರಾಜ್ಯಗಳಲ್ಲಿ  ಅಶುದ್ಧ ನೀರಿನಿಂದ ಅದೆಷ್ಟೋ ಕಾಯಿಲೆಗಳು ಜನರನ್ನು ಕಾಡುತ್ತಿವೆ.  ಮುಂದಿನ ದಿನಗಳಲ್ಲಿ ನಮ್ಮಲ್ಲೂ ಅಂತರ್ಜಲದ ಕೊರತೆಯಿಂದ ಇಂತಹ  ಸಮಸ್ಯೆ   ಬಂದರೂ ಅಶ್ಚರ್ಯಪಡುವಂತದ್ದೇನಿಲ್ಲ. ಅದರೆ ಇದಕ್ಕೆಲ್ಲ ಪರ್ಯಾಯವಂತೆ   ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ   ವಿದ್ಯಾ ನಗರದ  ನಿವೃತ್ತ ಪ್ರಾಂಶುಪಾಲರಾದ ಗೋವಿಂದ ಭಟ್ ಕಡಪ್ಪು ಎಂಬವರು  ತಮ್ಮ ಜಾಗದಲ್ಲಿ ಇರುವ ಕೊಳವೆಬಾವಿಗೆ ಕಳದ 13 ವರ್ಷಗಳಿಂದ ತನ್ನ ಮನೆಯ ಬಾವಿಯಿಂದ ಸೈಫನ್  ( ಗುರುತ್ವಾಕರ್ಷಣೆ ) ಮಾದರಿಯಲ್ಲಿ ಜಲ ಮರುಪೂರಣವನ್ನು ಮಾಡುತ್ತಿರುವುದರ ಮೂಲಕ ಪಂಪ್ ಸ್ವಿಚ್ಚ್ ಅನ್ ಮಾಡಿದರೆ ಮಾತ್ರ ನೀರು ಹರಿಯುವುದಲ್ಲ ಪಂಪ್ ಇಲ್ಲದೆಯೂ ನೀರು ಹರಿಸಬಹುದು ಎಂಬುವುದನ್ನು  ತೋರಿಸಿಕೊಟ್ಟಿದ್ದಾರೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ಸೈಫನ್ ವಿಧಾನ ಬಳಸಿ ತೆರೆದ ಬಾವಿಯಿಂದ ಕೊಳವೆ ಬಾವಿಗೆ ನಿರಂತರವಾಗಿ ನೀರಿನ ರೀಫಿಲ್ ಮಾಡುತ್ತಿದ್ದಾರೆ. ಪಂಪ್ ಸಹಾಯ ಇಲ್ಲದೆ ಒಮ್ಮೆ ಮಾತ್ರ ಅನ್ ಮಾಡಿ ಮತ್ತೆ ಆಫ್ ಮಾಡಿದರೆ ನಿರಂತರವಾಗಿ ನೀರು ಪೂರೈಸುವ ಸೈಫನ್ ವಿಧಾನ ಇದು.

 

 

ಸೈಫನ್ ವಿಧಾನ.  ಎಂದರೇನು ?:

ಸೈಫನ್ ತತ್ವ ಎಂಬುದು ಪುರಾತನ ವಿಧಾನ. ಗುರುತ್ವಾಕರ್ಷಣ ಶಕ್ತಿ ಬಳಸಿಕೊಂಡು ಮೇಲ್ಭಾಗದಿಂದ ಕೆಳಭಾಗಕ್ಕೆ ನೀರು ಹರಿಯಿಸುವ ವಿಧಾನ. ಹಳ್ಳಿ ಪ್ರದೇಶಗಳಲ್ಲಿ ಈ ವಿಧಾನದಲ್ಲಿ ಹಿಂದಿನಿಂದಲೇ ಕೃಷಿ ತೋಟಗಳಲ್ಲಿ ನೀರು ಹಾಯಿಸುತ್ತಿದ್ದರು. ಪಾಳುಬಿದ್ದ ಬಾವಿಯಲ್ಲಿ ಜಲಮರುಪೂರಣಕ್ಕೆ ಬಳಸುತ್ತಿದ್ದರು. ಕಾಲಕ್ರಮೇಣ ಸೈಫನ್ ವಿಧಾನ ದೂರವಾಯಿತು. ಆದರೆ ಇಲ್ಲಿ ಸೈಫನ್ ವಿಧಾನವನ್ನು ಕೊಳವೆ ಬಾವಿ ರೀಫಿಲ್ ಗೆ ಬಳಸಲಾಗಿದೆ. ಅತ್ಯಂತ ಸುಲಭ ಹಾಗೂ ಸರಳ ವಿಧಾನದಲ್ಲಿ ಕಡಿಮೆ ವೆಚ್ಚದಲ್ಲಿ ತೆರೆದ ಬಾವಿಯಿಂದ ಕೊಳವೆ ಬಾವಿಗೆ ನಿರಂತರ ನೀರು ಪೂರೈಸಲು ಸಾಧ್ಯ ಎಂಬುದನ್ನು ಗೋವಿಂದ ಭಟ್ ಸಾಧಿಸಿ ತೋರಿಸಿದ್ದಾರೆ.

ನಾನು ನಿವೃತ್ತ ಪ್ರಾಂಶುಪಾಲನಾಗಿದ್ದು ಬೆಳ್ತಂಗಡಿಯಲ್ಲಿ ಝೆರಾಕ್ಸ್ ಅಂಗಡಿ ಹಾಗೂ ಗುರುವಾಯನಕೆರೆಯಲ್ಲಿ  ಸಣ್ಣ ಉದ್ಯಮವನ್ನು ಮಾಡಿಕೊಂಡಿದ್ದೆ

ನನಗೆ ಒಂದೂವರೇ ಎಕರೆ ಅಡಿಕೆ ತೋಟವಿದೆ ಕಳೆದ ಲಾಕ್ ಡೌನ್ ನಂತರ ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ ಅಂಗಡಿಯನ್ನು ಬಿಟ್ಟು  ನನ್ನ ಹೆಚ್ಚಿನ ಸಮಯವನ್ನು ಕೃಷಿಯಲ್ಲೆ ಕಳೆಯುತಿದ್ದೇನೆ.ಎನ್ನುವ ಅವರು  ಈ ಸೈಫನ್ ಮಾದರಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದರ ಬಗ್ಗೆ ಮಾಹಿತಿ ನೀಡಿದರು.

 

 

 

ಒಂದು ಕೊಳವೆ ಬಾವಿಗೆ ಜಲಮರುಪೂರಣ ಎರಡು ವಿಧಾನಗಳಲ್ಲಿ ಮಾಡಬಹುದು ಮಳೆಯ ನೀರನ್ನು ಪೈಪ್ ಗಳ ಮೂಲಕ ಪಿಲ್ಟರ್ ಅಳವಡಿಸಿ ನೇರವಾಗಿ ಕೊಳವೆ ಬಾವಿಗೆ ಹರಿಸುವುದು, ಮತ್ತೊಂದು ಕೊಳವೆಬಾವಿ ಸುತ್ತ ಗುಂಡಿ ತೆಗೆದು ಮರಳು ಹಾಗೂ ಜಲ್ಲಿ ತುಂಬಿಸಿ ಮಳೆ ನೀರು ಇಂಗುವಂತೆ ಮಾಡುವುದು ಅದರೆ ಇದಕ್ಕೆ ಖರ್ಚು ಮಾತ್ರ ಹದಿನೈದು ಸಾವಿರ ತನಕ ಆಗುತ್ತದೆ. ಆದರೆ ಸೈಫನ್ ವಿಧಾನದಲ್ಲಿ ಅಂದಾಜು ಖರ್ಚು ಮೂರರಿಂದ ಮೂರುವರೇ ಸಾವಿರ ತಗಲುತ್ತದೆ. ಅತೀ ಸರಳವಾಗಿ ಇದನ್ನು ಅಳವಡಿಸಬಹುದು .ಒಂದು ಗೇಟ್ ವಾಲ್ ಮತ್ತು ಫುಟ್ ವಾಲ್ ಹಾಗೂ ಪೈಪ್ ಮಾತ್ರ
ತೆರೆದ ಬಾವಿ ಅಥವಾ ಕೆರೆ ಭಾರೀ ಎತ್ತರದಲ್ಲೇ ಇರಬೇಕು ಎಂದೇನಿಲ್ಲ. ಕೊಳವೆಬಾವಿಯಿಂದ ತಗ್ಗಿನಲ್ಲಿ ಇದ್ದರೂ ಸಮಸ್ಯೆ ಇಲ್ಲ . ಆದರೆ ತೆರೆದ ಬಾವಿಯ ಜಲಮಟ್ಟದಿಂದ ಕೊಳವೆ ಬಾವಿಯ ಜಲಮಟ್ಟ ಕಡಿಮೆ ಇರಬೇಕು. ಈ ರೀತಿ ಇದ್ದರೆ ಮಾತ್ರ ತೆರೆದ ಬಾವಿ ಮತ್ತು ಕೊಳವೆ ಬಾವಿಗೆ ಮುಕ್ಕಾಲು ಇಂಚಿನ ಪೈಪನ್ನು ಅಳವಡಿಸಬೇಕು. ಅದರ ಸಮೀಪವೇ ಇನ್ನೊಂದು ಒಂದು ಇಂಚಿನ ಪೈಪನ್ನು ಅಳವಡಿಸಿ, ಈ ಪೈಪಿನ ತುದಿಯನ್ನು ಮುಕ್ಕಾಲು ಇಂಚಿನ ಪೈಪ್‌ನ ತುದಿಯ ಫುಟ್‌ವಾಲ್‌ ಗೆ ಜೋಡಿಸಬೇಕು. ಕೊಳವೆಬಾವಿಯ ಪಂಪ್ ಚಾಲೂ ಮಾಡಿದಾಗ ಒಂದು ಇಂಚು ಪೈಪ್‌ನ ಗೇಟ್‌ವಾಲ್‌ನ್ನು ತೆರೆದು ಮುಕ್ಕಾಲು ಇಂಚಿನ ಪೈಪ್‌ನಲ್ಲಿ ನೀರು ತುಂಬುವಂತೆ ಮಾಡಬೇಕು.

 

 

 

ನೀರು ತುಂಬಿದ ತಕ್ಷಣ ಪಂಪ್ ಆಫ್ ಮಾಡಿ ಗೇಟ್‌ವಾಲ್‌ ಬಂದ್ ಮಾಡಬೇಕು. ಆ ಕ್ಷಣದಲ್ಲಿ ನೀರು ತುಂಬಿಸಿದ ಶಕ್ತಿಯಲ್ಲಿ ಮುಕ್ಕಾಲು ಇಂಚಿನ ಪೈಪ್ ತೆರೆದ ಬಾವಿಯಿಂದ ನೀರನ್ನು ಲಿಫ್ಟ್ ಮಾಡಿ ಕೊಳವೆ ಬಾವಿಗೆ ಹರಿಯುವಂತೆ ಮಾಡುತ್ತದೆ. ನಂತರ ಪಂಪ್‌ನ್ನು ಮತ್ತೆ ಚಾಲೂ ಮಾಡುವ ಅನಿವಾರ್ಯತೆ ಬರುವುದಿಲ್ಲ. ಇದು ನಿರಂತರವಾಗಿ ನೀರು ಹರಿಯುತ್ತಲೇ ಇರುತ್ತದೆ ಎನ್ನುವ ಅವರು

ಪಂಪ್ ಇಲ್ಲದೆಯೂ ಸೈಫನ್ ವಿಧಾನದಿಂದ ಕೊಳವೆಬಾವಿ ರಿಫಿಲ್ ಮಾಡಬಹುದು. ಅಂದರೆ ಎತ್ತರದಲ್ಲಿ ನೀರಿನ ಟ್ಯಾಂಕ್‌ನಿಂದ ಮುಕ್ಕಾಲು ಇಂಚು ಪೈಪ್‌ಗೆ ನೀರು ತುಂಬಿಸಿ ಗೇಟ್‌ವಾಲ್‌ ಬಂದ್ ಮಾಡಿದರೆ ಸಾಕು, ಪಂಪ್ ಚಾಲೂ ಮಾಡುವ ಬದಲು ಇಲ್ಲಿ ಟ್ಯಾಂಕ್ ನೀರು ತುಂಬಿಸುವುದಷ್ಟೆ ವ್ಯತ್ಯಾಸ. ಈ ವಿಧಾನದಲ್ಲಿ ಕೂಡ ನೀರು ಬಾವಿಯಿಂದ ಸರಾಗವಾಗಿ ಕೊಳವೆಬಾವಿಗೆ ನೀರು ಹರಿಸಬಹುದು.

ಅದಲ್ಲದೆ ಪ್ರತಿ ಮಳೆಗಾಲ ಆರಂಭದಲ್ಲಿ‌ ಈ ರೀತಿ ಮಾಡುತ್ತೇನೆ ಸಾಧಾರಣ ಡಿಸೆಂಬರ್ ತನಕವೂ ರೀಫಿಲ್ ಆಗುತ್ತಲೇ ಇರುತ್ತದೆ. ಬಾವಿಯಲ್ಲಿ ನೀರು ಕಡಿಮೆಯಾದರೆ ಮಾತ್ರ ನಿಲ್ಲಿಸುತ್ತೇನೆ ಈಗಾಗಲೇ ಎರಡು ಕೊಳವೆ ಬಾವಿಯಲ್ಲಿ ಇಲ್ಲಿಯವರೆಗೆ ಬೇಸಗೆ ದಿನಗಳಲ್ಲಿ ನೀರಿನ ಕೊರತೆ ಉಂಟಾಗಿಲ್ಲ ಎನ್ನುತ್ತಾರೆ ಅವರು.

 ಪ್ರಧಾನಿಯವರಿಗೆ  ಪತ್ರ

ಸೈಫನ್ ವಿಧಾನದಿಂದ ಸುಲಭದಲ್ಲಿ ಕೊಳವೆಬಾವಿ ರೀಚಾರ್ಜ್ ಮಾಡುವುದನ್ನು ದೇಶಾದ್ಯಂತ ಅಳವಡಿಸುವ ಬಗ್ಗೆ ನಿರ್ದೇಶನ ನೀಡುವಂತೆ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಯಗ್ರಾಮ್ ಸಹಿತ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಕೂಡಲೇ ಪ್ರಧಾನಿ ಕಾರ್ಯಾಲಯದಿಂದ ಸ್ಪಂದನೆ ಸಿಕ್ಕಿದೆ. ಈಬಗ್ಗೆ ಪರಿಶೀಲಿಸುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದೆ.
.

ಸರಳವಾದ ವಿಧಾನ ಎಲ್ಲರೂ  ಅಳವಡಿಸಿಕೊಳ್ಳಿ

ಅಂತರ್ಜಲ ಕುಸಿಯುತ್ತಿರುವ ಸಂದಿಗ್ದ ಸ್ಥಿತಿಯಲ್ಲಿ ದಿನದಿಂದ ದಿನಾ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗೆ ಮುಂದುವರಿದಲ್ಲಿ  ಮುಂದಿನ ದಿನಗಳಲ್ಲಿ   ನೀರಿನ ದೊಡ್ಡ ಸಮಸ್ಯೆ ಎದುರಾಗಲಿದೆ ಅದಕ್ಕಾಗಿ ಎಲ್ಲರೂ ಅಂತರ್ಜಲ ಹೆಚ್ಚಿಸುವಂತಹ  ಪ್ರಯತ್ನ ಮಾಡಬೇಕು. ಇಂತಹ ವಿಧಾನವನ್ನು ಕಡಿಮೆ ಖರ್ಚಿನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ  ಯಾರಿಗಾದರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಗೋವಿಂದ ಭಟ್. ಇವರ ಈ ಕಾಳಜಿ ಎಲ್ಲರಿಗೂ ಪ್ರೇರಣೆಯಾಗಲಿ ಮಳೆ ನೀರು ಅಥವಾ ತೆರೆದ ಬಾವಿ ಕೆರೆಗಳ ನೀರನ್ನು ನೀರಿಲ್ಲದ ಅಥವಾ ಇನ್ನಿತರ ಕೊಳವೆ ಬಾವಿಗಳಿಗೆ ರಿಫೀಲ್ ಮಾಡುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡಿಕೊಂಡು  ಮುಂದಿನ ಪೀಳಿಗೆಗೂ ಶುದ್ಧವಾದ ನೀರು ಸಿಗುವ ಸಂಕಲ್ಪ ಮಾಡೋಣ.

error: Content is protected !!