ಧರ್ಮಸ್ಥಳ: ಅಶುದ್ಧ ನೀರಿನ ಬಳಕೆಯಿಂದ ಅನೇಕ ಕಾಯಿಲೆಗಳು, ಚರ್ಮರೋಗಗಳು ಬರುತ್ತವೆ, ಇದನ್ನು ತಡೆಗಟ್ಟಲು 323 ಶುದ್ಧಗಂಗಾ ಘಟಕಗಳನ್ನು ಪ್ರಾರಂಭಿಸಲು ಈಗಾಗಲೆ 15 ಕೋಟಿ ರೂ. ವಿನಿಯೋಗಿಸಲಾಗಿದೆ. ವಿಷ ಪದಾರ್ಥ ಹಾಗೂ ರೋಗಕಾರಕ ವೈರಸ್‍ಗಳನ್ನು ನಿರ್ಮೂಲನಗೊಳಿಸಿ ಜನರಿಗೆ ಲೀಟರ್ ಒಂದಕ್ಕೆ 10 ಪೈಸೆಯಂತೆ 2 ರೂಪಾಯಿಗೆ 20 ಲೀಟರ್ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ. ವಿಜಯಾ ಬ್ಯಾಂಕಿನ ನಿರ್ದೇಶಕನಾಗಿದ್ದು, ಬ್ಯಾಂಕಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಧರ್ಮಸ್ಥಳದ ಬೀಡಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾರಂಭಿಸುವ ಶುದ್ಧಗಂಗಾ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುದಾನವಾಗಿ, ಬ್ಯಾಂಕ್ ವತಿಯಿಂದ 9.80 ಲಕ್ಷ ರೂ. ನ ಡಿ.ಡಿ.ಯನ್ನು ಎಸ್.ಕೆ.ಡಿ.ಆರ್.ಡಿ.ಪಿ ಪರವಾಗಿ ಸ್ವೀಕರಿಸಿ ಮಾತನಾಡಿದರು.
ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ, ಈ ವರ್ಷ ಉತ್ತರ ಕರ್ನಾಟಕದ ಗುಲ್ಬರ್ಗಾದಲ್ಲಿ 100 ಶುದ್ಧ ಗಂಗಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಆಫ್ ಬರೋಡದ ಹಿರಿಯ ಅಧಿಕಾರಿ ಗಾಯತ್ರಿ ಮಾತನಾಡಿ ಪವಿತ್ರ ಸೇವೆಯ ಪುಣ್ಯ ಕಾರ್ಯದಲ್ಲಿ ಬ್ಯಾಂಕ್‍ಗೂ ಅವಕಾಶ ನೀಡಿರುವುದಕ್ಕೆ ಹೆಗ್ಗಡೆಯವರಿಗೆ ಕೃತಜ್ಞತೆಗಳು ಎಂದರು.
ಡಿ. ಹರ್ಷೇಂದ್ರ ಕುಮಾರ್, ಬ್ಯಾಂಕ್ ಆಫ್ ಬರೋಡದ ಆಡಳಿತ ನಿರ್ದೇಶಕ ಶೈಲೇಂದ್ರ ಸಿಂಗ್, ಹಿರಿಯ ಅಧಿಕಾರಿ ಸಂಜಯ ಬೊಮ್ಮ ರೆಡ್ಡಿ, ಬ್ಯಾಂಕ್ ಆಫ್ ಬರೋಡಾ ಧರ್ಮಸ್ಥಳ ಶಾಖೆ ಪ್ರಬಂಧಕ ವಿಜಯ್ ಪಾಟೀಲ್, ಆಡಳಿತಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ನಿರ್ದೇಶಕ ಲಕ್ಷ್ಮಣ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.