ಶಿಕ್ಷಕರ ಕೊರತೆ ‌ಸಮಸ್ಯೆ ಶೀಘ್ರ ಪರಿಹಾರ: ಡಾ.‌ ಹೆಗ್ಗಡೆಯವರಿಂದ ಶಿಕ್ಷಣದ ಜೊತೆಗೆ ಸಂಸ್ಕಾರ ‌ನೀಡುವ ಕಾರ್ಯ: ಶಾಲೆಗಳಿಗೆ ಬೆಂಚ್, ಡೆಸ್ಕ್ ವಿತರಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯ: ಧರ್ಮಸ್ಥಳದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ

 

 

 

ಧರ್ಮಸ್ಥಳ: ಕೇವಲ ಮಕ್ಕಳು ಮಾತ್ರವಲ್ಲದೆ ಶಿಕ್ಷಕರಿಗೂ ಶಾಲೆ ಪ್ರಾರಂಭವಾಗಿದೆ. ಅವರೂ ಸಂತಸದಿಂದ ಇದ್ದು, ಇದು ಅವರು ಮಕ್ಕಳ ಮೇಲೆ ಇಟ್ಟಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆಯವರು ಸರ್ಕಾರದ ಜೊತೆ ಕೈ ಜೋಡಿಸಿ ಅನೇಕ ಸಮಾಜಮುಖಿ ಮಾದರಿ ಕೆಲಸಗಳನ್ನು ಮಾಡುತ್ತಿದ್ದಾರೆ.ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಬೆಂಚ್, ಡೆಸ್ಕ್ ಗಳನ್ನು  ಉಚಿತವಾಗಿ ನೀಡುವ ಜೊತೆಗೆ ಅದನ್ನು ಸಂಬಂಧಿಸಿದ ಶಾಲಾ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಬಡವರಿಗೆ ಉಚಿತವಾಗಿ ಕಿಟ್ ನೀಡಿದ್ದಾರೆ. ಕೃಷಿ ಮೇಳ ಮಾಡಿ ರೈತರ ಖುಷಿಯಲ್ಲಿಯೂ ಬಾಗಿಯಾಗಿದ್ದಾರೆ. ಶಿಕ್ಷಣದಲ್ಲಿ ಸಂಸ್ಕಾರವನ್ನು ನೀಡುವ ಕೆಲಸ ಮಾಡಿದ್ದಾರೆ. ನೂತನ ಶಿಕ್ಷಣ ‌ನೀತಿ ಬರುತ್ತಿದೆ, ಅದಕ್ಕೆ ಪೂಜ್ಯರ ಆಶೀರ್ವಾದ ಅಗತ್ಯ. ಜಿಲ್ಲೆಯಲ್ಲಿ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಇದನ್ನು ಶೀಘ್ರ ಸರಿಪಡಿಸಲಾಗುವುದು‌ ಎಂದು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಬಿ.ಎಸ್. ನಾಗೇಶ್ ಹೇಳಿದರು.

 

 

ಅವರು ಧರ್ಮಸ್ಥಳ ಅಮೃತವರ್ಷಿನಿ ಸಭಾಭವನದಲ್ಲಿ ಚಿನ್ನರ ಅಂಗಳ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸ್ಲೇಟು ಹಾಗು ಬಳಪ ವಿತರಿಸಿ ಮಾತನಾಡಿದರು. ‌

ಕೋವಿಡ್ ನಿಂದ ತುಂಬಾ ತೊಂದರೆಗೆ ಒಳಗಾದವರು ಪುಟ್ಟ ಮಕ್ಕಳು. ಬೇರೆ ಮಕ್ಕಳ‌ ಜೊತೆ ಆಟ ಆಡಿ ಖುಷಿ ಪಡುವುದು ನಿಂತು ಹೋಗಿತ್ತು. ದೇವರ ಆಶಿರ್ವಾದರಿಂದ ಕೊರೋನಾ ಈಗ ಕಡಿಮೆ ಆಗಿದೆ. ದೇಶದ ಎಲ್ಲಾ ಜನರಿಗೂ ಉಚಿತ ವ್ಯಾಕ್ಸಿನ್ ನೀಡುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಇತರ ರಾಷ್ಟ್ರಗಳಿಗೂ ಹಂಚುವಂತಹ ಕೆಲಸ ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಹೋಗಿ ಮನವೊಲಿಸಿ ಜನತೆಗೆ ವಾಕ್ಸಿನ್ ಮಾಡಿಸಿದ್ದಾರೆ ಎಂದರು.

 

 

ಧರ್ಮಾಧಿಕಾರಿ‌ ‌ಡಾ. ಡಿ‌. ವೀರೇಂದ್ರ ಹೆಗ್ಗಡೆ ಮಾತನಾಡಿ, ಎರಡು ವರ್ಷಗಳಿಂದ ಕೊರೋನಾದಿಂದ ಮಕ್ಕಳು ತುಂಬಾ ಕಷ್ಟಪಟ್ಟಿದ್ದಾರೆ. ತಾಂತ್ರಿಕತೆ ಬೆಳೆದ ಪರಿಣಾಮ ಆನ್ ಲೈನ್ ಶಿಕ್ಷಣದಿಂದ ಶಿಕ್ಷಣ ಜೀವಂತವಾಗಿದೆ. ಕಷ್ಟವಾದರೂ ಅದನ್ನು ಎದುರಿಸುವ ಶಕ್ತಿ ದೇವರು‌ ನೀಡಿದ್ದಾನೆ. ಅಧ್ಯಾಪಕರು, ಮಕ್ಕಳನ್ನು ಶಾಲೆಯ ಕಡೆಗೆ ಬರುವಂತೆ ಆಕರ್ಷಿಸಬೇಕು. ಶಾಲೆಗೆ ಬರಲು ಮಕ್ಕಳು ಆಸಕ್ತರಾಗಿದ್ದಾರೆ.

ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಧರ್ಮಸ್ಥಳದ ವತಿಯಿಂದ ಜ್ಞಾನದೀಪ ಕಾರ್ಯಕ್ರಮದಡಿ ಈ ವರ್ಷ 600 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಹತ್ತು ಶಾಲೆಗಳ ಸರ್ವತೋಮುಖ ಪ್ರಗತಿಗೆ ನೆರವು ನೀಡಲಾಗಿದೆ. ಶಾಲೆಗಳಿಗೆ ಕಟ್ಟಡ, ಶೌಚಾಲಯ, ಕ್ರೀಡಾ ಸಾಮಾಗ್ರಿ ಮೊದಲಾದ ಮೂಲಭೂತ ಸೌಕರ್ಯ ಒದಗಿಸಲು ಇಷ್ಟರವರೆಗೆ 20.70 ಕೋಟಿ ರೂ. ಪೂರಕ ಅನುದಾನ ನೀಡಲಾಗಿದೆ.
ಹಾವೇರಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ 311 ಶಾಲೆಗಳಿಗೆ 2370 ಬೆಂಚು – ಡೆಸ್ಕ್ ಗಳನ್ನು  ವಿತರಿಸಲಾಗುತ್ತಿದೆ. 9,500 ವಿದ್ಯಾರ್ಥಿಗಳು ಕುಳಿತು ವಿದ್ಯಾಭ್ಯಾಸ ಪಡೆಯಬಹುದು. ಆಯಾ ಶಾಲೆಗಳಿಗೆ ಬೆಂಚ್ ಡೆಸ್ಕ್ ನೀಡಲಾಗುತ್ತಿದೆ. ಶಾಲೆಗಳನ್ನು ಆದರ್ಶ ಶಾಲೆಗಳನ್ನಾಗಿ‌‌ ಮಾಡುವ ಕಾರ್ಯ ನಡೆದಿದೆ.ಈವರೆಗೆ ರಾಜ್ಯದ 30 ಜಿಲ್ಲೆಗಳ 9,776 ಶಾಲೆಗಳಿಗೆ 63,553 ಜೊತೆ ಡೆಸ್ಕ್ – ಬೆಂಚ್ ಪೂರೈಕೆ ಮಾಡಿದ್ದು ಇದಕ್ಕಾಗಿ 20.17 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಹೆಗ್ಗಡೆಯವರು ಹೇಳಿದರು.

 

 

ಪ್ರಾಸ್ತಾವಿಕ ಮಾತುಗಳನ್ನಾಡಿದ ವಸಂತ್ ಭಟ್, ಮಕ್ಕಳು ಆನ್ ಲೈನ್ ಶಿಕ್ಷಣದಿಂದ ಬೇಸತ್ತು ಹೋಗಿದ್ದರು. ಆದರೆ ಈಗ ಮತ್ತೆ ಶಾಲೆಗಳು ಆರಂಭವಾಗಿರುವುದು ಖುಷಿ ವಿಚಾರ. ಖಾಸಗಿ ಶಾಲೆಯಲ್ಲಿ ಈಗ ಶಿಕ್ಷಕರ ಕೊರತೆ ಹೆಚ್ಚಿದೆ. ಇದು ಮುಂದಿನ‌ ದಿನಗಳಲ್ಲಿ ಕಡಿಮೆ ಆಗಬೇಕು ಎಂದು ಬೇಡಿಕೆಯನ್ನಿತ್ತರು.‌
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ “ಚಿಣ್ಣರ ಚಿಲುಮೆ” ಮಾದರಿ ಶಾಲಾ ಕೊಠಡಿ ಉದ್ಘಾಟಿಸಿದರು.
ಶಿಕ್ಷಣ ಸಚಿವ ಬಿ.ಎಸ್. ನಾಗೇಶ್ ವಿದ್ಯಾರ್ಥಿಗಳಿಗೆ‌ ವಿತರಿಸುವ ಬೆಂಚ್, ಡೆಸ್ಕ್ ವಿತರಣಾ ವಾಹನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮುಖ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮತ್ತು ಯೋಜನಾಧಿಕಾರಿ ಪುಷ್ಪರಾಜ್ ತಹಶೀಲ್ದಾರ್ ಮಹೇಶ್ ಜೆ. ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ರಾವ್ ಸ್ವಾಗತಿಸಿದರು. ಶಿಕ್ಷಕಿ ಪೂರ್ಣಿಮಾ ಜೋಶಿ ಧನ್ಯವಾದವಿತ್ತರು.
ಮನೋರಮಾ ತೋಳ್ಪಾಡಿತ್ತಾಯ ಕಾರ್ಯಕ್ರಮ ನಿರ್ವಹಿಸಿದರು.
ಆರಂಭದಲ್ಲಿ ವಿದ್ಯಾರ್ಥಿಗಳು ಸಚಿವರಿಗೆ ಗುಲಾಬಿ ಹೂ ನೀಡಿ ಗೌರವಿಸಿದರು. ಬಳಿಕ ಸಚಿವರು ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ಶುಭ ಹಾರೈಸಿದರು.

 

error: Content is protected !!