ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ಚಂದನವನದ ನಟ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಿ ಎಂಬ ಅಭಿಮಾನಿಗಳ ಪ್ರಾರ್ಥನೆ ವ್ಯರ್ಥವಾಗಿದೆ.
ಪುನೀತ್ ಅವರನ್ನು ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಬೆಳಗ್ಗೆ ಸದಾಶಿವ ನಗರದ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಅವರು ಅಸ್ವಸ್ಥರಾಗಿದ್ದಾರೆ. ಕೂಡಲೇ ರಮಣಶ್ರೀ ಕ್ಲೀನಿಕ್‍ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿದ ಹೊರತಾಗಿಯೂ ಅವರ ಆರೋಗ್ಯ ಕ್ಷೀಣಿಸಲಾರಂಭಿಸಿತ್ತು.
ವಿಚಾರ ತಿಳಿದ ಕೂಡಲೇ ಪುನೀತ್ ಸಹೋದರ ಡಾ. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ದೌಡಾಯಿಸಿದ್ದರು.
1975 ಮಾರ್ಚ್ 17ರ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಐದನೇ ಪುತ್ರನಾಗಿ ಜನಿಸಿದ್ದ ಮಾಸ್ಟರ್ ಲೋಹಿತ್ ಬಾಲ್ಯದಿಂದಲೇ ನಟನೆಯಲ್ಲಿ ಗುರುತಿಸಿಕೊಂಡಿದ್ದರು.
ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಮಿಲನ, ಜಾಕಿ, ಚಿತ್ರಗಳಿಗೆ ಪುನೀತ್ ರಾಜ್‍ಕುಮಾರ್ ರಾಜ್ಯ ಸರ್ಕಾರದ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ.
ಹುಡುಗರು, ಯಾರೇ ಕೂಗಾಡಲಿ, ರಣವಿಕ್ರಮ, ರಾಜಕುಮಾರ ಸೇರಿದಂತೆ ಹಲವು ಚಿತ್ರಗಳಿಗೆ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.
1980ರಲ್ಲಿ ಬಾಲ ನಟನಾಗಿ ಡಾ.ರಾಜ್‍ಕುಮಾರ್ ಅಭಿನಯದ ‘ವಸಂತ ಗೀತ’ ಚಲನಚಿತ್ರದ ಮೂಲಕ ಚಂದನವನಕ್ಕೆ ಬಾಲ ನಟನಾಗಿ ಪಾದಾರ್ಪಣೆ ಮಾಡಿದರು.
ಬಳಿಕ ಭಾಗ್ಯವಂತ, ಚಲಿಸುವ ಮೊಡಗಳು, ಎರಡು ನಕ್ಷತ್ರಗಳು, ಭಕ್ತಪ್ರಹ್ಲಾದ, ಶಿವಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು ಮೊದಲಾದ ಚಿತ್ರಗಳಲ್ಲಿ ನಟಿಸಿದರು.
2002ರಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ‘ಅಪ್ಪು’ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಕಲಾ ಸೇವೆ ಆರಂಭಿಸಿದರು. ತಮ್ಮ ಪವರ್ ಫುಲ್ ನಟನೆಯ ಮೂಲಕ ‘ಪವರ್ ಸ್ಟಾರ್’ ಎಂಬ ಬಿರುದನ್ನೂ ಪಡೆದು ಅಭಿಮಾನಿಗಳನ್ನು ರಂಜಿಸಿದರು.
ನಟನೆ ಜೊತೆಗೆ ವಿಭಿನ್ನ ನಿರ್ಮಾಣ, ಗಾಯನದ ಮೂಲಕವೂ ಕನ್ನಡ ನಾಡಿನ ಹಾಗೂ ಸಿನಿಪ್ರೇಮಿಗಳ ಮನಸ್ಸು ಗೆದ್ದರು. ವಿಭಿನ್ನ ಕಥಾ ಹಂದರವುಳ್ಳ ಅಭಿ, ಆಕಾಶ್, ಅರಸು, ಮಿಲನ, ಜಾಕಿ, ಹುಡುಗರು, ಅಣ್ಣಾಬಾಂಡ್, ಪವರ್ ಸ್ಟಾರ್, ದೊಡ್ಮನೆ ಹುಡುಗ, ರಣವಿಕ್ರಮ, ಯಾರೇ ಕೂಗಾಡಲಿ, ಬಿಂದಾಸ್, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ರಾಮ್, ಪರಮಾತ್ಮ, ರಾಜ್‍ಕುಮಾರ, ನಟ ಸಾರ್ವಭೌಮ, ವಂಶಿ, ಪೃಥ್ವಿ, ವೀರಕನ್ನಡಿಗ, ನಿನ್ನಿಂದಲೇ, ಚಕ್ರವ್ಯೂಹ, ಅಂಜನಿಪುತ್ರ, ರಾಜ್ ದಿ ಶೋಮ್ಯಾನ್, ಯುವರತ್ನ ಮೊದಲಾದ ಚಿತ್ರಗಳಲ್ಲಿ ನಟಿಸಿ, ಯಶಸ್ವಿಯಾಗಿದ್ದರು.
ಇದೀಗ ಚಿತ್ರ ನಿರ್ಮಾಣದ ಜೊತೆಗೆ ಇವರ ನಟನೆಯ ಜೇಮ್ಸ್ ಇನ್ನಿತರ ಚಿತ್ರಗಳಲ್ಲಿ ನಟಿಸಬೇಕಿತ್ತು.ಪುನೀತ್ ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಗಣ್ಯರು ದುಃಖ ತಪ್ತರಾಗಿ ಕಂಬನಿ ಮಿಡಿಯುತ್ತಿದ್ದಾರೆ.