ಮೆಸ್ಕಾಂ ಇಲಾಖೆ ಕಾರ್ಯವೈಖರಿಗೆ ಗ್ರಾಮಸ್ಥರ ಆಕ್ರೋಶ: ನದಿ ಸೇರುತ್ತಿದೆ ತಾಲೂಕಿನ ತ್ಯಾಜ್ಯ, ಕ್ರಮಕ್ಕೆ ಆಗ್ರಹ: ನೆರೆ ಬಾಧಿತ 7 ಕುಟುಂಬಗಳಿಗೆ ಸಿಗದ ಹಕ್ಕುಪತ್ರ: ಮಂಗಗಳ‌ ಹಾವಳಿಯಿಂದ ಹೈರಾಣಾದ ಕೃಷಿಕರು, ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ: ಪಾರದರ್ಶಕ ಗ್ರಾಮಸಭೆಯೊಂದಿಗೆ ಜಿಲ್ಲೆಗೆ ಮಾದರಿಯಾದ ಲಾಯ್ಲಾ ಗ್ರಾಮ ಪಂಚಾಯತ್: ‘ಪ್ರಜಾಪ್ರಕಾಶ ನ್ಯೂಸ್’ ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರ

 

ಬೆಳ್ತಂಗಡಿ: ಮೆಸ್ಕಾಂನಿಂದ ಗ್ರಾಹಕರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಕರೆಗಳಿಗೆ ಸಮರ್ಪಕವಾಗಿ ‌ಸ್ಪಂದಿಸುತ್ತಿಲ್ಲ. ಕಡಿಮೆ ಮೊತ್ತದ ಬಿಲ್ ಬಾಕಿ ಇರುವವರಿಗೆ ವಿದ್ಯುತ್ ಕಡಿತ ಮಾಡುವ ಕುರಿತು ತಿಳಿಸುತ್ತಾರೆ, ಆದರೆ ದೊಡ್ಡ ಮೊತ್ತದ ಬಿಲ್ ಬಾಕಿ ಇರುವವರಿಗೆ ವಿದ್ಯುತ್ ಕಡಿತ ಮಾಡುತ್ತಿಲ್ಲ. ಇಲಾಖೆಯ ಸಿಬ್ಬಂದಿಗಳು ಬಿಲ್ ಕಟ್ಟಲು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ವಿದ್ಯುತ್ ಕಡಿತ, ತಂತಿ ತುಂಡಾದ ಹಾಗೂ ಇತರ ತುರ್ತು ಸಂದರ್ಭ ಇಲಾಖೆ ತಕ್ಷಣ ಗಮನ ಹರಿಸುತ್ತಿಲ್ಲ ಎಂದು ಲಾಯ್ಲ ಗ್ರಾಮಸ್ಥರು ದೂರಿದರು.
ಗುರುವಾರ ಲಾಯ್ಲ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

 

ಶಿಕ್ಷಣ ಇಲಾಖೆಯ ತಾರಾ ಕೇಸರಿ ಮಾರ್ಗದರ್ಶಿ ಅಧಿಕಾರಿಯಾಗಿ, ಗ್ರಾಪಂ ಅಧ್ಯಕ್ಷೆ ಆಶಾ ಬೆನಡಿಕ್ಟ್ ಸಲ್ದಾನ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ವಿದ್ಯುತ್ ಲೈನ್ ಮೇಲೆ ಮರದ ಗೆಲ್ಲುಗಳು ಬಿದ್ದು ಸಮಸ್ಯೆ ಉಂಟಾಗುತ್ತಿದೆ. ಹಳ್ಳಿ ಪ್ರದೇಶದಲ್ಲಿ ಮರಗಳ ಗೆಲ್ಲುಗಳನ್ನು ತೆರವುಗೊಳಿಸದೇ ಸಾಕಷ್ಟು ಸಮಯ ಕಳೆದಿದೆ, ವಿದ್ಯುತ್ ಲೈನ್ ಪರಿಸರದಲ್ಲಿರುವ ಮರದ ಗೆಲ್ಲುಗಳನ್ನು ಕೂಡಲೆ ತೆರವುಗೊಳಿಸಿ, ಸುಗಮ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಡಬೇಕಾಗಿ ಗ್ರಾಮಸ್ಥರು ತಿಳಿಸಿದರು.  ಈ ಬಗ್ಗೆ ಅಧಿಕಾರಿಗಳಲ್ಲಿ‌ ಗ್ರಾಮಸ್ಥರ ಪರವಾಗಿ ಧ್ವನಿಗೂಡಿಸಿದ  ಗ್ರಾ.ಪಂ   ಸದಸ್ಯ ಪ್ರಸಾದ್  ಶೆಟ್ಟಿ ಎಣಿಂಜೆ  ಮಾನ್ಸೂನ್ ಗ್ಯಾಂಗ್ ಟ್ರೀ ಕಟ್ಟಿಂಗ್   ಟೆಂಡರ್ ಬಗ್ಗೆ  ಸಂಪೂರ್ಣ ಮಾಹಿತಿಯನ್ನು  ಸಭೆಗೆ  ನೀಡಬೇಕು ಅದಲ್ಲದೇ  ಕಳೆದ ಒಂದು ವರುಷದಿಂದ  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳ  ಕಟ್ಟಿಂಗ್ ಕೆಲಸ ಬಾಕಿ ಉಳಿದಿದೆ.ಇದರಿಂದಾಗಿ  ಒಂದು ವೇಳೆ ಕರೆಂಟ್ ಹೋದರೆ  ದುರಸ್ತಿ ಗೊಳಿಸಲು ಲೈನ್ ಮೆನ್ ಗಳು ಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಸರಿಯಾದ ಮಾಹಿತಿಯನ್ನು ಗ್ರಾಮ ಸಭೆಯಲ್ಲಿ ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ  ಸಮರ್ಪಕ ಉತ್ತರ ನೀಡಿದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಕ್ರಮಕೈಗೊಳ್ಳಲಾಗುವುದು. ಎಂದರು.

ಬೀದಿ ನಾಯಿಗಳ ಉಪಟಳ ಈ ಬಗ್ಗೆ ಕ್ರಮ ಕೈಗೊಳ್ಳಿ

ಗ್ರಾಮದಲ್ಲಿ ಬೀದಿ ನಾಯಿಗಳ ಉಪಟಳ ವಿಪರೀತವಾಗಿದ್ದು ಕೆಲವು ಸಾಕುಪ್ರಾಣಿಗಳು ಬಲಿಯಾಗುತ್ತಿವೆ.‌ ಶಾಲೆಗಳು ಆರಂಭವಾಗಿರುವುದರಿಂದ ಇದು ಮತ್ತಷ್ಟು ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು.‌ ಅದೇ ರೀತಿ ಮಂಗಗಳ ಹಾವಳಿ ಹೆಚ್ಚಾಗಿದ್ದು ಸಮಸ್ಯೆಯಾಗುತ್ತಿದೆ, ಕೂಡಲೇ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

 

 

 

ಟ್ರಾಫಿಕ್ ಜಾಮ್  ಗಮನ ಹರಿಸಿ

ಕಿಲ್ಲೂರು ಕ್ರಾಸ್ ಬಳಿ ಟ್ರಾಫಿಕ್ ಜಾಮ್ ನಿಂದ ಸಮಸ್ಯೆ ಉಂಟಾಗುತ್ತಿದೆ ಈ ಬಗ್ಗೆ ಟ್ರಾಫಿಕ್ ಪೊಲೀಸ್ ತಕ್ಷಣ ಗಮನ ಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ತ್ಯಾಜ್ಯ‌ ನೀರಿನಿಂದ ಆಪತ್ತು:

ಹೆದ್ದಾರಿಯ ಕಾಶಿಬೆಟ್ಟು ಪರಿಸರ ಭಾರಿ ಪ್ರಮಾಣದ ತ್ಯಾಜ್ಯ, ಕಸದಿಂದ ಕೂಡಿದ್ದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಇದನ್ನು ತೆರವುಗೊಳಿಸಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಕಳೆದ ಹಲವು ವರ್ಷಗಳಿಂದ  ಬೆಳ್ತಂಗಡಿ ಪಟ್ಟಣ ಪಂಚಾಯತ್ ಕಡೆಯಿಂದ   ಸೋಮವತಿ ನದಿಗೆ  ಕೊಳಚೆ ನೀರು ಹರಿದು ಬರುತಿದ್ದು  ಪಕ್ಕದಲ್ಲಿ ಗ್ರಾಮ ಪಂಚಾಯತ್ ನ   ಕಿಂಡಿ ಅಣೆಕಟ್ಟು ಇದ್ದು ಇದರ ನೀರು ಕಲುಷಿತಗೊಂಡು  ಸ್ಥಳೀಯ ಪರಿಸರದಲ್ಲಿ ಸಮಸ್ಯೆ ಎದುರಾಗುತ್ತಿದೆ ತಕ್ಷಣ ಕೊಳಚೆ ನೀರು ನದಿಗೆ ಬಿಡದಂತೆ ಪಟ್ಟಣ ಪಂಚಾಯತ್ ಗೆ ತಿಳಿಸಬೇಕು   ಒಂದು ವೇಳೆ ಪ.ಪಂ ಈ ಬಗ್ಗೆ  ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯತ್ ಎದುರು ಲಾಯಿಲ ಗ್ರಾಮ ಪಂಚಾಯತ್ ಮೂಲಕ   ಗ್ರಾಮಸ್ಥರು ಸೇರಿ ಪ್ರತಿಭಟನೆ ಮಾಡಬೇಕಾದಿತು ಎಂಬ ಎಚ್ಚರಿಕೆಯನ್ನು ನೀಡಿದರು . ಕೆಲವರು  ನದಿಗೆ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ತಂದು ಹಾಕುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ನೆರೆ ಬಾಧಿತ 7 ಕುಟುಂಬಗಳಿಗೆ ಸಿಗದ ಹಕ್ಕುಪತ್ರ:

ನೆರೆಯಿಂದ ಸಮಸ್ಯೆ ಉಂಟಾಗಿ‌ ಜಾಗ ಮಂಜೂರಾಗುವ ಸಂದರ್ಭದಲ್ಲಿ ಜಾಗಗಳನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರ ‌ಮಾಡಲಾಗಿದೆ. ಜಾಗವಿಲ್ಲದೆ ಹಲವು ವರ್ಷಗಳೇ ಕಳೆದರೂ ಕ್ರಮಕೈಗೊಂಡಿಲ್ಲ. ಹಕ್ಕು ಪತ್ರ ವಿತರಣೆಗೆ‌ ಕ್ರಮ ಕೈಗೊಳ್ಳಿ ಎಂದು‌ ಸಂತ್ರಸ್ಥರು ‌ಒತ್ತಾಯಿಸಿದರು.
ಲಾಯಿಲ  ಗ್ರಾಮ ಬೆಳ್ತಂಗಡಿ ನಗರಕ್ಕೆ ಸಮೀಪದಲ್ಲಿ ಇರುವುದಲ್ಲದೇ  ಅಭಿವೃದ್ಧಿ ಹೊಂದುತ್ತಿರುವ  ಗ್ರಾಮವಾಗಿರುವುದರಿಂದ  ಇಲ್ಲಿ ವಸತಿಗೆ ಜಾಗದ ಕೊರತೆ ಇದ್ದು ಖಾಲಿ ಇರುವ ಸರ್ಕಾರಿ  ‌ಭೂಮಿಯಲ್ಲಿ ಅರಣ್ಯ ಗಿಡಗಳನ್ನು ‌ನೆಡಬಾರದು ಇದರಿಂದ ನಿವೇಶನ ಹಂಚಿಕೆಗೆ‌ ಸಮಸ್ಯೆ ಉಂಟಾಗಲಿದೆ ಎಂದು ಶೇಖರ್ ಎಲ್ ಸಭೆಯಲ್ಲಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ವಿವಿಧ ಇಲಾಖೆ ‌ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ‌ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ‌ಉಪಸ್ಥಿತರಿದ್ದರು.

ನೇರ ಪ್ರಸಾರದ ಮೂಲಕ ಗಮನ ಸೆಳೆದ ಗ್ರಾಮ ಸಭೆ

ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು “ಪ್ರಜಾಪ್ರಕಾಶ ನ್ಯೂಸ್” ನಲ್ಲಿ   ನೇರ ಪ್ರಸಾರ ಮಾಡುವ ಮೂಲಕ  ಪಾರದರ್ಶಕವಾಗಿ ಎಲ್ಲ ಜನರಿಗೆ ಗ್ರಾಮ ಸಭೆಯನ್ನು ನೋಡಲು ಅವಕಾಶ ಮಾಡಿಕೊಟ್ಟು ಇಡೀ ರಾಜ್ಯಕ್ಕೆ ಮಾದರಿಯಾದದ್ದು    ಎಲ್ಲರ ಗಮನ ಸೆಳೆಯಿತು. ಅದಲ್ಲದೇ  ನೇರ ಪ್ರಸಾರದ ಮೂಲಕ ಮಾದರಿ  ಗ್ರಾಮ ಸಭೆ ನಡೆಸಿ ಜಿಲ್ಲೆಯಲ್ಲೇ ನೇರ ಪ್ರಸಾರದ  ಮಾಡಿದ ಮೊದಲ ಗ್ರಾಮ  ಪಂಚಾಯತ್ ಲಾಯಿಲ  ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಗ್ರಾ.ಪಂ. ಉಪಾಧ್ಯಕ್ಷ ಗಣೇಶ್‌ ಪ್ರಾಸ್ತಾವಿಕವಾಗಿ‌ ಮಾತನಾಡಿ, ಸ್ವಾಗತಿಸಿದರು. ಪಿಡಿಒ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

 

 

 

error: Content is protected !!