ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ 75 ಭಾಗ್ಯಲಕ್ಷ್ಮೀ ಬಾಂಡ್ ಗಳ ಹಂಚಿಕೆ, ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ವಿತರಣೆ: ಶಾಸಕ ಹರೀಶ್ ಪೂಂಜ‌ ಹೇಳಿಕೆ: 19 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮ

 

ಬೆಳ್ತಂಗಡಿ: ತಾಲೂಕಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸರಕಾರದ ಬೇರೆ ಬೇರೆ ಯೋಜನೆಗಳ ಸುಮಾರು 75 ಯೋಜನೆಗಳಲ್ಲಿ 75 ಫಲಾನುಭವಿಗಳನ್ನು ಆಯ್ಕೆ ಮಾಡಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ‌ ತಲುಪಿಸುವ ಯೋಜನೆಯನ್ನು ಮಾಡಿಕೊಂಡು   ಬೇರೆ ಬೇರೆ ಇಲಾಖೆಯ ಮೂಲಕ 75 ಯೋಜನೆಗಳನ್ನು ಪಟ್ಟಿ ಮಾಡಲಾಗಿದೆ. ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು 75 ಜನರಿಗೆ ಮತ್ತು ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ‌ ಹೇಳಿದರು.
ಅವರು ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್, ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ಹಾಗೂ 19 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಡಿಯೂರಪ್ಪನವರ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರು ಹೆಣ್ಣು ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ 1 ಲಕ್ಷ ರೂಪಾಯಿ ಅವರಿಗೆ 18 ವರ್ಷ ತುಂಬುವ ಸಂದರ್ಭದಲ್ಲಿ ಅವರ ವಿದ್ಯಾಭ್ಯಾಸಕ್ಕೆ ಅಥವಾ ಮದುವೆಗೆ ಸಹಾಯವಾಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ಪ್ರಾರಂಭ ಮಾಡಿರುವಂತಹ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ವಿತರಿಸಲು ಹೆಮ್ಮೆ ಇದೆ.‌ಈಗಾಗಲೇ ಸುಮಾರು 7,886 ಫಲಾನುಭವಿಗಳಿಗೆ ಬಾಂಡ್ ವಿತರಣೆ ಮಾಡುವಂತಹ ಕೆಲಸ ನಮ್ಮ ತಾಲೂಕಿನಲ್ಲಿ ಆಗಿದೆ.‌ಅದೇ ರೀತಿ ಸುಕನ್ಯಾ ಸಮೃದ್ಧಿ ಯೋಜನೆಯೂ ಅದರ ಜೊತೆಗೆ ಸೇರ್ಪಡೆಯಾಗುವ ಮೂಲಕ ಒಂದು ಗ್ರಾಮೀಣ ಪ್ರದೇಶದ ಹೆಣ್ಣು ಮಗುವಿನ ಜೀವನಕ್ಕೆ ಶಕ್ತಿ ತುಂಬುವಂತಹ ಕೆಲಸ ಆಗುತ್ತಿದೆ.  ಈ ಭಾಗ್ಯಲಕ್ಷ್ಮೀ ಬಾಂಡ್  ನಿಮ್ಮ ಮಗುವಿನ ಉದ್ಯೋಗ ಮತ್ತು ಭವಿಷ್ಯಕ್ಕೆ  ಶಕ್ತಿಯಾಗಿ ಪ್ರೇರಣೆಯಾಗಲಿ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಉಚಿತವಾಗಿ ಲಸಿಕೆಯನ್ನು ಕೊಡುವಂತಹ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ. ಕೊರೋನಾ ವಾರಿಯರ್ಸ್ ಗಳಿಗೆ ಮೊದಲು ಲಸಿಕಾ ಅಭಿಯಾನ ಮಾಡಿದರು. ಆ ಮೂಲಕ ಇವತ್ತು  ದೇಶದ 100 ಕೋಟಿ ಜನರಿಗೆ ಲಸಿಕೆಯನ್ನು ಕೊಟ್ಟಿರುವಂತಹ ಜಗತ್ತಿನ ಏಕೈಕ ದೇಶ ಭಾರತ. ಅದಲ್ಲದೇ  ಇವತ್ತು ಜಗತ್ತಿನಲ್ಲಿ ಯಾವುದಾದರೊಂದು ದೇಶದ ಜನರಿಗೆ ಉಚಿತವಾಗಿ ಲಸಿಕೆಯನ್ನು ಕೊಟ್ಟಿರುವ ದೇಶ ಇದ್ದರೂ ಅದು ಭಾರತ  ನರೇಂದ್ರ ಮೋದಿಯವರ ನೇತೃತ್ವದ  ಸರಕಾರ. ಆದ್ದರಿಂದ ನರೇಂದ್ರ ಮೋದಿಯವರಿಗೆ ನಾವೆಲ್ಲರೂ ಅಭಿನಂದನೆಯನ್ನು ಸಲ್ಲಿಸಬೇಕು. ನಮ್ಮ ತಾಲೂಕಿನಲ್ಲಿ ಸುಮಾರು 98 ಪ್ರತಿಶತ ವ್ಯಾಕ್ಸಿನೇಷನ್ ನಡೆದಿದೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ತಾಲೂಕಿನ ಎಲ್ಲಾ ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾಕಾರ್ಯಕರ್ತೆಯರು , ಅಂಗನವಾಡಿ ಕಾರ್ಯರ್ತೆಯರು ಅದರ ಜೊತೆಗೆ ಸಹಕಾರವನ್ನು ಮಾಡಿರುವಂತಹ  ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ನ ಆಡಳಿತ ವರ್ಗ, ಸಿಬ್ಬಂದಿಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೂ  ಈ ಮೂಲಕ ಧನ್ಯವಾದಗಳನ್ನು ನೀಡುತಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ
ತಹಶೀಲ್ದಾರ್ ಮಹೇಶ್ ಜೆ., ತಾ.ಪಂ. ಇ.ಒ. ಕುಸುಮಧರ್, ಪದ್ಮ ಗೌಡ ಬೆಳಾಲ್, ಕುಶಾಲಪ್ಪ ಗೌಡ ಪೂವಾಜೆ, ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಆರ್. ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಪ್ರಸ್ತಾವಿಸಿ ರತ್ನಾವತಿ ಸ್ವಾಗತಿಸಿದರು.

error: Content is protected !!