ಬೆಳ್ತಂಗಡಿ ತಾಲೂಕಿನ ಭಜನಾ ಮಂಡಳಿಗಳಿಗೆ ಭಜನಾ ಸ್ಪರ್ಧೆ: ವಿಜೇತ ಪ್ರಥಮ ತಂಡಕ್ಕೆ ₹ 5 ಲಕ್ಷ, ದ್ವಿತೀಯ ₹ 2.5 ಲಕ್ಷ, 5 ತಂಡಗಳಿಗೆ ತಲಾ ₹ 1 ಲಕ್ಷ ಪ್ರೋತ್ಸಾಹಕ ಬಹುಮಾನ: ಪುರುಷರ ಕುಣಿತ ಭಜನೆ, ಮಹಿಳೆಯರು, ಮಕ್ಕಳಿಗೆ ಕುಳಿತು ಭಜನೆ, ಕನಿಷ್ಠ 25 ಮಂದಿ ಕಡ್ಡಾಯ: ಉಚಿತ ಪ್ರವೇಶ, ಸಂಬಂಧಿಸಿದ ಮಂಡಳಿಗಳಲ್ಲೇ ಸ್ಪರ್ಧೆ, ಸ್ವಚ್ಛತೆ ಹಾಗೂ ಅಲಂಕಾರಕ್ಕೂ ಅಂಕ: ಸುದ್ದಿಗೋಷ್ಠಿಯಲ್ಲಿ‌ ಶಾಸಕ ಹರೀಶ್ ಪೂಂಜ‌ ‌ಮಾಹಿತಿ

 

 

ಬೆಳ್ತಂಗಡಿ: ತಾಲೂಕಿನ ಭಜನಾ ಮಂಡಳಿಗಳಿಗೆ ಭಜನಾ ಸ್ಪರ್ಧೆ ಆಯೋಜಿಸಲಾಗಿದ್ದು, ಪುರುಷ ಕುಣಿತ ಭಜನೆ, ಮಹಿಳೆ ಹಾಗೂ ಮಕ್ಕಳಿಗೆ ಕುಳಿತು ನಡೆಸುವ ವಿಭಾ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮೂರು ವಿಭಾಗಗಳ ಒಟ್ಟು ಅಂಕ, ಭಜನಾ ಮಂದಿರ ಆವರಣ ಸ್ವಚ್ಛತೆ ಹಾಗೂ ಅಲಂಕಾರ ಗಮನಿಸಿ ತೀರ್ಪುಗಾರರಿಂದ ಒಟ್ಟು 100 ಅಂಕದಲ್ಲಿ ವಿಜೇತರ ಆಯ್ಕೆ ನಡೆಯಲಿದೆ. ಪ್ರಥಮ ಸ್ಥಾನ ವಿಜೇತರು ₹ 5ಲಕ್ಷ ಬಹುಮಾನ ಪಡೆಯಲಿದ್ದು, ದ್ವಿತೀಯ ಸ್ಥಾನಕ್ಕೆ ₹ 2.50 ಲಕ್ಷ ಬಹುಮಾನ ಲಭಿಸಲಿದೆ. ಉತ್ತಮ ಪ್ರದರ್ಶನ ನೀಡಿದ 5 ಮಂಡಳಿಗಳಿಗೆ ತಲಾ ₹ 1 ಲಕ್ಷ ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು. ಪ್ರತೀ ಮಂಡಳಿ ಮೂರೂ ವಿಭಾಗಗಳಲ್ಲಿ ಸ್ಪರ್ಧಿಸುವುದು ಕಡ್ಡಾಯ ಎಂದು ಶಾಸಕ ಹರೀಶ್ ಪೂಂಜ‌ ತಿಳಿಸಿದರು.‌
ಅವರು ಬೆಳ್ತಂಗಡಿ ಪ್ರವಾಸಿ ‌ಮಂದಿರದಲ್ಲಿ ಹಮ್ಮಿಕೊಂಡಿದ್ದ ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಮಂಡಳಿಗಳಿಗೆ ಮಾತ್ರ ಅವಕಾಶವಿದ್ದು, ಈ ಕುರಿತು ದೃಢೀಕರಣ ಮಾಡಿಕೊಳ್ಳಲಾಗುವುದು. ದಾಸರ ಪದಗಳಿಗೆ ಆದ್ಯತೆ ನೀಡಲಾಗುವುದು, ಭಜನಾ ಮಂಡಳಿಯ ಸ್ವಚ್ಚತೆ ಮತ್ತು ಅಲಂಕಾರಕ್ಕೆ ವಿಷೇಷ ಪ್ರಾಧಾನ್ಯತೆ ನೀಡಿ ಅಂಕ ನೀಡಲಾಗುತ್ತದೆ.‌ ಸ್ಪರ್ಧೆ ಜನವರಿಯಿಂದ ಫೆಬ್ರವರಿವರೆಗೆ ಸ್ಪರ್ಧೆ ನಡೆಯಲಿದ್ದು, ಪ್ರತೀ‌ ಮಂಡಳಿಯ ಮೂರು ವಿಭಾಗಗಳು( ಪುರುಷ, ಮಹಿಳೆ, ಮಕ್ಕಳು) ಸೇರಿ ಕನಿಷ್ಠ 60 ನಿಮಿಷಗಳ ಪ್ರದರ್ಶನ ನೀಡಬೇಕಿದೆ. ಅಂದರೆ ಪ್ರತೀ ವಿಭಾಗ ಕನಿಷ್ಠ 20 ನಿಮಿಷ ಪ್ರದರ್ಶನ ನೀಡಬೇಕಿದೆ. ಅದೇ ರೀತಿ ಮಂಡಳಿಯ ಪುರುಷರ ಕುಣಿತ ಭಜನೆ ತಂಡದಲ್ಲಿ ಕನಿಷ್ಠ 25 ಜನ‌ ಪಾಲ್ಗೊಳ್ಳಬೇಕು. ಮಹಿಳೆಯರ ಕುಳಿತು ಭಜನಾ ತಂಡದಲ್ಲಿ ಕನಿಷ್ಠ 25 ಜನ ಸ್ಪರ್ಧಿಗಳು ಭಾಗವಹಿಸಬೇಕು. 15 ವರ್ಷದ ಕೆಳಗಿನ‌ ವಯಸ್ಸಿನ ವಿಭಾಗದಲ್ಲೂ ಮಕ್ಕಳ ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಠ 25 ಸದಸ್ಯರು ಇರುವುದು ಕಡ್ಡಾಯವಾಗಿದೆ. ಭಜನೆ ತಾಳ ಹಾಗೂ ತಮ್ಕಿಯನ್ನು ಹೊರತುಪಡಿಸಿ ಇನ್ನಿತರ ಯಾವುದೇ ಸಂಗೀತ ಪರಿಕರಗಳನ್ನು ಬಳಸುವಂತಿಲ್ಲ ಎಂದರು.
ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃ ಶಕ್ತಿ, ದುರ್ಗಾವಾಹಿನಿ ಹಾಗೂ ಶ್ರಮಿಕ ಸೇವಾ ಟ್ರಸ್ಟ್, ಬೆಳ್ತಂಗಡಿ ನೇತೃತ್ವದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.‌ ಆಸಕ್ತ ಮಂಡಳಿಗಳು ನ.1ರಿಂದ ಡಿ.
15ರವರೆಗೆ ನೋಂದಾಯಿಸಲು ಅವಕಾಶ ನೀಡಲಾಗಿದ್ದು, ಭಜನಾ ಪರಿಷತ್ ನಿಕಟಪೂರ್ವ ತಾಲೂಕು ಅಧ್ಯಕ್ಷ ಮಂಜುನಾಥ ಶೆಟ್ಟಿ ನಿಡಿಗಲ್ (9448060940), (9632863443), ನವೀನ್ ನೆರಿಯ (9741036849) ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಣಿ ‌ಮಾಡಬಹುದು ಎಂದು ತಿಳಿಸಿದರು.
ಹೊಸ ತಂಡಗಳಿಗೂ‌ ಆದ್ಯತೆ:
ಆಸಕ್ತ ಹೊಸ ಭಜನಾ ಮಂಡಳಿ ಅಥವಾ ತಂಡಗಳಿಗೂ ಅವಕಾಶ ನೀಡಲು ಯೋಜನೆ ನಡೆಯುತ್ತಿದೆ. ಈ ತಂಡಗಳಿಗೆ ಪ್ರತ್ಯೇಕ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕುರಿತೂ ಚಿಂತನೆ ನಡೆಯುತ್ತಿದೆ. ಈ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು. ಸನಾತನ ಪರಂಪರೆ, ಸಂಸ್ಕ್ರತಿ, ಸಂಸ್ಕಾರಕ್ಕೆ ಒತ್ತು ‌ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಜನಾ ಪರಿಷತ್ ನಿಕಟಪೂರ್ವ ತಾಲೂಕು ಅಧ್ಯಕ್ಷ ಮಂಜುನಾಥ ಶೆಟ್ಟಿ ನಿಡಿಗಲ್, ವಿಶ್ವ ಹಿಂದೂ ಪರಿಷತ್ ಪುತ್ತೂರು ವಿಭಾಗ ಅಧ್ಯಕ್ಷ ಭಾಸ್ಕರ ಧರ್ಮಸ್ಥಳ, ಜೊತೆ ಕಾರ್ಯದರ್ಶಿ ನವೀನ್ ನೆರಿಯ, ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ದಿನೇಶ್ ಚಾರ್ಮಾಡಿ ಉಪಸ್ಥಿತರಿದ್ದರು.

error: Content is protected !!