ಬೆಳ್ತಂಗಡಿ: ಕಳಿಯ ಗ್ರಾಮದ ಪರಪ್ಪು ಬಳಿ ಬೆಳ್ತಂಗಡಿ ಪೊಲೀಸರು ಸುಮಾರು 71 ಸಾವಿರ ರೂ. ಮೌಲ್ಯದ 2.55 ಕೆ.ಜಿ. ಗಾಂಜಾ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಗೇರುಕಟ್ಟೆ ಬಳಿಯ ಪರಪ್ಪು ಎಂಬಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಬೆಳ್ತಂಗಡಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆಗೆ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಗಾಂಜಾ ಸಾಗಾಟ ಬೆಳಕಿಗೆ ಬಂದಿದೆ.
ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ಇಳಂತಿಲ ಗ್ರಾಮ ನೇಜಿಕಾರು ಆಂಬೊಟ್ಟಿನ ಮಹಮ್ಮದ್ ಶಾಫಿ (29) ಎಂಬಾತನ ಬಳಿ ಸುಮಾರು 71,925 ರೂ. ಮೌಲ್ಯದ 2.55 ಕೆ.ಜಿ. ಗಾಂಜಾ ಹಾಗೂ 80 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನವಣೆ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ನಿರ್ದೇಶನದಂತೆ, ಬಂಟ್ವಾಳ ಡಿ.ವೈ.ಎಸ್.ಪಿ. ವೆಲೈಂಟೆನ್ ಡಿ’ಸೋಜಾ ಅವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವ ಕುಮಾರ ಬಿ. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ತಂಡದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಎಂಎಂ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ತಂಡದ ಸಿಬ್ಬಂದಿ ಅಬ್ದುಲ್ ಲತೀಫ್, ಇಬ್ರಾಹಿಂ ಗರ್ಡಾಡಿ ಬೆಳ್ತಂಗಡಿ ಠಾಣಾ ಎ.ಎಸ್. ಕುಲಜ್ಯೋತಿ ತಿಲಕ್, ಸಿಬ್ಬಂದಿ ಲಾರೆನ್ಸ್, ಗುತ್ಯಪ್ಪ, ಚರಣ್ ರಾಜ್, ಮಾಲತೇಶ್ ಭಾಗವಹಿಸಿದ್ದರು.