ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದು ಅರಿಯುವುದು ಅವಶ್ಯ: ಕಲಾವಿದ, ಸಮಾಜ ಸೇವಕ ರವಿ ಕಟಪಾಡಿ ಅಭಿಮತ: ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಹಮ್ಮಿಕೊಂಡಿದ್ದ ದೇಶ ಭಕ್ತಿಗೀತೆ, ಭಾಷಣ ಸ್ಪರ್ಧೆ, ಕೃಷ್ಣ ವೇಷ ಪೋಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

 

 

ಬೆಳ್ತಂಗಡಿ: ಸಮಾಜ ನನಗೆ ಏನು ಕೊಟ್ಟಿದೆ ಎಂಬುದನ್ನು ಪ್ರಶ್ನಿಸದೇ ತಾನು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಆರ್ಥಿಕವಾಗಿ ಸಮಸ್ಯೆ ಇರುವವರಿಗೆ ನನ್ನಿಂದ ಕೈಲಾದ ಸಹಾಯ ಮಾಡಿದ್ದೇನೆ ಎಂಬ ಸಾರ್ಥಕ್ಯ ಭಾವನೆ ಇದೆ ಎಂದು ಸಮಾಜ ಸೇವಕ ರವಿ ಕಟಪಾಡಿ ಹೇಳಿದರು.

 

 

 

ಅವರು ಶನಿವಾರ ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸೇವೆ ಸಾಮರಸ್ಯ ಸಂಘಟನೆ ಧ್ಯೇಯ ವಾಕ್ಯದೊಂದಿಗೆ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಆಶ್ರಯದಲ್ಲಿ ದೇಶ ಭಕ್ತಿಗೀತೆ, ಭಾಷಣ ಸ್ಪರ್ಧೆ, ಕೃಷ್ಣ ವೇಷ ಪೋಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಯಾವುದೇ ಕೆಲಸ ಮಾಡುವುದಾದರೂ ಜನರ ಪ್ರೀತಿ, ನಂಬಿಕೆ, ವಿಶ್ವಾಸ ಗಳಿಸಬೇಕು. ನಮಗೆ ನಮ್ಮ ಕಣ್ಣ ಮುಂದೆ ಮೇಲ್ಮಟ್ಟದ ಕನಸುಗಳು ಕಾಣಿಸುತ್ತದೆ. ಆದರೆ ನಮಗಿಂತ ಕೆಳಗಿನ ಬಡತನ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಕಾಣಿಸುವುದಿಲ್ಲ. ನಮಗೆ ದೇವರು ಕೊಟ್ಟ ಶರೀರವಿದೆ. ಆದ್ದರಿಂದ ನಾವು ಶ್ರೀಮಂತರೇ ಆಗಿದ್ದೇವೆ. ಆದರೆ ಕಷ್ಟಕಾಲದಲ್ಲಿ ಸಹಾಯ ಮಾಡುವ ಮನೋಭಾವ ನಮ್ಮಲ್ಲಿರಬೇಕು ಎಂದು ಅವರು, ಕಳೆದ ಏಳು ವರ್ಷದಲ್ಲಿ ಕೃಷ್ಣಾಷ್ಟಮಿಯ ಸಂದರ್ಭ ವೇಷ ಧರಿಸಿ, ನಮ್ಮ ತಂಡದ ಸಹಾಯದಿಂದ 41 ಮಕ್ಕಳಿಗೆ 80 ಲಕ್ಷ ರೂ. ಸಹಾಯ ಮಾಡಿದ್ದೇವೆ. ಅದು ನಾವು ಸಮಾಜಕ್ಕೆ ನೀಡುತ್ತಿರುವ ಸೇವೆ ಎಂದು ಭಾವಿಸಿದ್ದೇನೆ ಎಂದರು.

 

ಸಾಧನೆಗೆ ಹಣ ಬೇಕು ಎಂಬ ಕೀಳರಿಮೆ ಹೆಚ್ಚಿನ ಜನರಲ್ಲಿ ಇದೆ: ರಕ್ಷಿತ್ ಶಿವರಾಂ

 

 

ಅಧ್ಯಕ್ಷತೆ ವಹಿಸಿದ್ದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ಹೈಕೋರ್ಟ್ ವಕೀಲ ರಕ್ಷಿತ್ ಶಿವರಾಂ ಮಾತನಾಡಿ, ಸಾಧನೆಗೆ ಹಣ ಬೇಕು ಎಂಬ ಕೀಳರಿಮೆ ಹೆಚ್ಚಿನ ಜನರಲ್ಲಿ ಇದೆ. ಆದರೆ ಸೇವೆ, ಧೈರ್ಯ, ಶಕ್ತಿ ಮನೋಭಾವನೆ ಇದ್ದರೆ ಸಾಧನೆ ಮಾಡಬಹುದು. ಕೊರೋನಾ ಸಂದರ್ಭ ಮಕ್ಕಳಿಗೆ ಆನ್ ಲೈನ್ ದೇಶಭಕ್ತಿ ಗೀತೆ, ಕೃಷ್ಣ ವೇಷ ಸ್ಪರ್ಧೆ ನಡೆಸಲಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಮ್ಮ ನಾಡಿನ ಕವಿಗಳ ದೇಶ ಭಕ್ತಿಗೀತೆ ಪರಿಚಯ ಮಾಡಿಸುವ ನಿಟ್ಟಿನಲ್ಲಿ ಶಿಬಿರಗಳನ್ನು ನಡೆಸಲಾಗುವುದು. ಅದೇ ರೀತಿ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದರೂ ಯಾರು ಐಎಎಸ್, ಐಪಿಎಸ್‌ಗಳು ಇಲ್ಲ. ಶೈಕ್ಷಣಿಕ ವಿದ್ಯಾಕೇಂದ್ರಗಳಿದ್ದರೂ ಸಾಕಷ್ಟು ವೈದ್ಯರು, ಎಂಜಿನಿಯರ್‌ಗಳು ಇಲ್ಲ. ಮುಂದಿನ ದಿನದಲ್ಲಿ ಉಭಯ ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್‌ಗಳು ಅಧಿಕಾರಿಗಳಿಂದ ಉಚಿತ ತರಬೇತಿ ನೀಡಲಾಗುವುದು ಎಂದರು.

 

 

ಕಾನೂನು ಬರುವ ಮುಂಚೆಯೇ ನಮ್ಮ ನಾಡಿನಲ್ಲಿ ಪುರಾತನವಾದ ದೇವಾಲಯಗಳಿದ್ದವು. ಭಕ್ತಿ-ಶ್ರದ್ಧೆ- ಶಕ್ತಿಯಿಂದ ಕಟ್ಟಿದ ದೇವಾಲಯವನ್ನು ಕೆಡಹುತ್ತಿರುವ ಪ್ರಕ್ರಿಯೆ ಖಂಡನೀಯ. ನಮ್ಮ ಜಿಲ್ಲೆಯಲ್ಲಿಯೂ ದೇವಾಲಯ ಕೆಡವಲು ಪಟ್ಟಿ ಮಾಡಲಾಗಿದೆ ಎಂಬ ಮಾಹಿತಿ ಇದ್ದು, ಇಂತಹ ಪ್ರಕ್ರಿಯೆ ಕೈ ಬಿಡಬೇಕು. ಹೊಡೆದಾಡುವ ಸಂಸ್ಕೃತಿ ನಮ್ಮದ್ದಲ್ಲ, ಕಟ್ಟುವ ಸಂಸ್ಕೃತಿ ನಮ್ಮದು ಎಂದರು.
ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಮಾತನಾಡಿ,
ನಾವು ಯಾವುದೇ ಕ್ಷೇತ್ರವನ್ನು ಆರಿಸಿಕೊಂಡರೆ ಸಾಲದು. ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅದನ್ನು ಪ್ರೀತಿಸಬೇಕು. ನಾವು ಶ್ರದ್ದೆ, ಕಾಳಜಿ ಇಟ್ಟುಕೊಂಡರೆ ನಾವು ಆರಿಸಿಕೊಂಡ ಕ್ಷೇತ್ರದಲ್ಲಿ
ಭಿನ್ನವಾಗಿ ಮಿಂಚಬಹುದು ಎಂದರು.

 

 

ಯಕ್ಷಗಾನ ನಾಟ್ಯ ತರಬೇತುದಾರ ಧರ್ಮಸ್ಥಳ ಮೆಳದ ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರು, ಯಕ್ಷಗಾನ ಒಂದು ಅದ್ಭುತ ಕಲೆ. ಇದಕ್ಕೆ ಶಕ್ತಿ ಇದೆ. ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳಲ್ಲಿ ಸತತವಾದ ಶ್ರಮ, ಹಿರಿಯರಲ್ಲಿ ಭಕ್ತಿ ಗೌರವ, ಕಲಿಯುವ ವೇಳೆ ಸಹನೆ, ತಾಳ್ಮೆ ಇದ್ದರೆ ಯಕ್ಷಗಾನ ಕಲಿಕೆ ಸುಲಭ, ಕಲೆಯನ್ನು ಪ್ರೀತಿಸಬೇಕು ಎಂದರು.
ಇದೇ ಸಂದರ್ಭ ದೇಶ ಭಕ್ತಿಗೀತೆ, ಭಾಷಣ ಸ್ಪರ್ಧೆ, ಕೃಷ್ಣ ವೇಷ ಪೋಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯಕ್ಷಗಾನ ನಾಟ್ಯ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಸಮಾಜ ಸೇವಕ ರವಿ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಅಂಜನಿ ಅನಿಲ್ ಪೈ ಸ್ವಾಗತಿಸಿ, ವಿಜಯ ಗೌಡ ಅತ್ತಾಜೆ ನಿರೂಪಿಸಿದರು. ಗುರುರಾಜ್ ಗುರಿಪಳ್ಳ ವಂದಿಸಿದರು.

error: Content is protected !!