ಸವಣಾಲು, ಇತ್ತಿಲಪೇಲಕ್ಕೆ ಜಿಲ್ಲಾಧಿಕಾರಿ ಭೇಟಿ, ಅಧಿಕಾರಿಗಳಿಗೆ ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆಗಳ ದರ್ಶನದೊಂದಿಗೆ ಸ್ವಾಗತ: ಜಿಲ್ಲಾಧಿಕಾರಿಯಿಂದ ತೊಡಕು ಬಗೆಹರಿಸಿ, ಅಭಿವೃದ್ಧಿ ನಡೆಸುವ ಭರವಸೆ: ಮೂರು ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ನೀಡಿದ ಶಾಸಕ ಹರೀಶ್ ಪೂಂಜ:

 

 

 

ಬೆಳ್ತಂಗಡಿ: ಜೀಪ್ ಮೊದಲಾದ ವಾಹನಗಳಷ್ಟೇ ಸಂಚರಿಸುವ ಕಚ್ಚಾ ರಸ್ತೆ. ಕಿರಿದಾದ ಹಾದಿಯಲ್ಲಿ ಹಳ್ಳಗಳನ್ನು ದಾಟಿ ಮುಂದೆ ಸಾಗಬೇಕಾದ ಅನಿವಾರ್ಯತೆ. ದಿನಂಪ್ರತಿ ಓಡಾಡುವ ಜನಸಾಮಾನ್ಯರ ರಸ್ತೆ ಸಮಸ್ಯೆಯ‌ ನರಕ ದರ್ಶನ‌ ಜಿಲ್ಲಾಧಿಕಾರಿ ಹಾಗೂ ಅವರೊಂದಿಗೆ ಸವಣಾಲು ಗ್ರಾಮದ ಇತ್ತಿಲಪೇಲ ಪ್ರದೇಶಕ್ಕೆ ಆಗಮಿಸಿದ್ದ ಅಧಿಕಾರಿಗಳ ತಂಡಕ್ಕೆ ಲಭಿಸಿತು‌.‌ ಸ್ವತಃ‌ ಜಿಲ್ಲಾಧಿಕಾರಿಯವರೇ “ಮಳೆ ಕಡಿಮೆ ಇರುವ ಸಂದರ್ಭದಲ್ಲೇ ಈ ಪ್ರದೇಶಕ್ಕೆ ಆಗಮಿಸಲು ಕಷ್ಟವಾಗುತ್ತಿದೆ. ಇನ್ನು ಮಳೆಗಾಲದಲ್ಲಿ ಈ ರಸ್ತೆಗಳ‌ ಪರಿಸ್ಥಿತಿ ಅರ್ಥವಾಗುತ್ತದೆ ಎಂದಿದ್ದು, ಈ ಪ್ರದೇಶದ ಜನರು ಅನುಭವಿಸುತ್ತಿದ್ದ ರಸ್ತೆ ಸಮಸ್ಯೆಗೆ ಹಿಡಿದ ಕೈಗನ್ನಡಿಯಂತಿತ್ತು.‌ ಇನ್ನು ವಿದ್ಯುತ್ ಸಮಸ್ಯೆ ಬಗ್ಗೆಯೂ ಸ್ಥಳೀಯರು ಜಿಲ್ಲಾಧಿಕಾರಿ ‌ಗಮನ ಸೆಳೆದರು.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೀಡಿದ ದೂರಿನಂತೆ ಆಯೋಗ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ಬೆಳ್ತಂಗಡಿ ತಾಲೂಕಿನ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಪ್ರದೇಶಕ್ಕೆ ಭೇಟಿ ನೀಡಿದರು.

 

 

 

ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುದಾಯಗಳ ವಾಸಸ್ಥಾನಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ 133 ಕೋಟಿ ರೂ. ಮೊತ್ತದ ಕಾರ್ಯಯೋಜನೆಯ ವರದಿಯನ್ನು ಸಿದ್ದಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರದೇಶಗಳು ಬೆಳ್ತಂಗಡಿ ವ್ಯಾಪ್ತಿಯಲ್ಲಿ ಬರುತ್ತದೆ. ಇದಕ್ಕೆ ಅನುಮೋದನೆ ದೊರೆತರೆ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ‌ಕೆ.ವಿ. ತಿಳಿಸಿದರು.
ಕುದುರೇಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೆಳ್ತಂಗಡಿ ತಾಲೂಕಿನ ಒಂಬತ್ತು ಗ್ರಾಮಗಳಿದ್ದು ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕೆಲ ತೊಡಕುಗಳಿವೆ. ಇಲ್ಲಿನ ಜನರಿಗೆ ಅತಿ ಬೇಡಿಕೆಯಾಗಿರುವ ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ಪರಿಹರಿಸಲು ಅರಣ್ಯ ಇಲಾಖೆ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು. ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಯಾವರೀತಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬ ಬಗ್ಗೆ ಗಮನಹರಿಸಲಾಗುವುದು ಎಂದರು.

 

 

 

ಮೂಲನಿವಾಸಿಗಳಿಗೆ ಕುಲಕಸುಬಿಗೆ ಬೇಕಾದ ಕಚ್ಚಾವಸ್ತುಗಳು ಹಾಗೂ ಅರಣ್ಯ ಉತ್ಪನ್ನಗಳನ್ನು ಶೇಖರಿಸಲು ಅರಣ್ಯ ಇಲಾಖೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಜನರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಮೂಲನಿವಾಸಿಗಳಿಗೆ ಇರುವ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಪುನರ್ವಸತಿ ಪ್ಯಾಕೇಜ್ ಸಿದ್ದಪಡಿಸಲು ಸೂಚನೆ:
ಕುದುರೇಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬರುವವರಿಗೆ ಇರುವ ಪುನರ್ವಸತಿ ಪ್ಯಾಕೇಜ್ ಚುರುಕುಗೊಳಿಸಿ, ಹೊರಬರಲು ಸಿದ್ದರಿರುವವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಸ್ಥಳೀಯ ಜನರ ಅಹವಾಲುಗಳನ್ನು ಆಲಿಸಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡರು. ಅಭಿವೃದ್ಧಿ ಕಾರ್ಯಗಳಿಗೆ ಇರುವ ತೊಡಕುಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.‌ ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಅರಿತು ಈ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

 

ಸಭೆಯಲ್ಲಿ ಸ್ಥಳೀಯ ಜನರ ಪರವಾಗಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮಿತಿ ಮುಖಂಡರಾದ ಶೇಖರ ಲಾಯಿಲ ಹಾಗೂ ಜಯಾನಂದ ಪಿಲಿಕಳ ಅವರು ಕಳೆದ ಎರಡು ದಶಕಗಳಿಂದ ಇಲ್ಲಿನ ಜನರಿಗೆ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ರಸ್ತೆ ಹಾಗೂ ವಿದ್ಯುತ್ ಜನರ ಮುಖ್ಯ ಬೇಡಿಕೆಯಾಗಿದೆ. ಅರಣ್ಯ ಹಕ್ಕುಗಳ ಅಡಿಯಲ್ಲಿಯೇ ಸೌಲಭ್ಯಗಳನ್ನು ಒದಗಿಸಲು ಅವಕಾಶವಿದ್ದು ಅದನ್ನು ಒದಗಿಸುವಂತೆ ಒತ್ತಾಯಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಸುಲ್ಕೇರಿಮೊಗ್ರು ಮಾಳಿಗೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಒಂದು ಸುತ್ತಿನ ಅನುಮತಿ ಪಡೆಯಲಾಗಿದೆ.‌ ಅಂತಿಮ ಅನುಮತಿಗಾಗಿ ಕಡತಗಳನ್ನು ಸಲ್ಲಿಸಲಾಗಿದೆ. ಮೂರು ತಿಂಗಳಿನಲ್ಲಿ ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ರಾಷ್ಟ್ರೀಯ ಉದ್ಯಾನವನ ಒಳಗಿನ ಇತರ ಪ್ರದೇಶಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ರಾಷ್ಟ್ರೀಯ ಉದ್ಯಾನವನದೊಳಗೆ ರಸ್ತೆ ಅಭಿವೃದ್ಧಿ ಬಗ್ಗೆಯೂ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಉದ್ಯಾನವನದ ಹೊರಗಿರುವ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದರು.

 

 

ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಪ್ರಭಾರ ತಹಸೀಲ್ದಾರ್ ಮಹಮ್ಮದ್ ಅಕ್ರಂ ಪಾಷ, ಕಾರ್ಕಳ ವಿಭಾಗ ವನ್ಯಜೀವಿ ಅರಣ್ಯ ಇಲಾಖೆ ಡಿಎಫ್ ಓ ರುದ್ರೇನ್, ಎಸಿ ಎಫ್. ಕಾಜಲ್,
ಐಟಿಡಿಪಿ ಜಿಲ್ಲಾ ಅಧಿಕಾರಿ ಡಾ. ಹೇಮಲತಾ, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ., ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಜಯಪ್ರಕಾಶ್, ಜಿ.ಪಂ.‌ ಎಂಜಿನಿಯರಿಂಗ್ ಎಇಇ ಸೂರ್ಯನಾರಾಯಣ ರಾವ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಮಚಂದ್ರ, ಅರಣ್ಯ ಇಲಾಖೆ ಡಿ.ವೈ.ಆರ್.ಎಫ್.ಓ.‌ಗಳಾದ ಫೈಜಲ್ ಹಾಗೂ ಕಿರಣ ಪಾಟೀಲ್, ಐಟಿಡಿಪಿ ತಾಲೂಕು ಅಧಿಕಾರಿ ಹೇಮಲತಾ, ಉಪ ತಹಸೀಲ್ದಾರ್ ದಯಾನಂದ, ಕಂದಾಯ ನಿರೀಕ್ಷಕ ಪ್ರತೀಶ್, ವಿಎ ರವಿ, ಗ್ರಾ.ಪಂ. ಅಧ್ಯಕ್ಷೆ ಹರಿಣಾಕ್ಷಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡರಾದ ಜಯಾನಂದ ಪಿಲಿಕಲ ಮತ್ತು ಶೇಖರ ಲಾಯಿಲಾ, ಬಿಜೆಪಿ ಪ್ರಮುಖ ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

error: Content is protected !!