ರಾಮ‌ಮಂದಿರ ಕೆಡವಿದ ಬಾಬರನಿಗೂ, ದೇವಸ್ಥಾನ ಕೆಡವಿದ ಬೊಮ್ಮಯಿಯವರಿಗೂ ಯಾವುದೇ ವ್ಯತ್ಯಾಸವಿಲ್ಲ: ವಿಚಾರ ನಮ್ಮ ಗಮನಕ್ಕೆ ಬಂದಿಲ್ಲವೆಂಬ ಹೇಳಿಕೆ ನೀಡುತ್ತಿರುವ ಜನಪ್ರತಿನಿಧಿಗಳು: ಪ್ರತಿಭಟನೆಯಲ್ಲಿ ಭರತ್ ಕುಮ್ಡೇಲು ಆರೋಪ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಗವಾಧ್ವಜವನ್ನೇ ಕೀಳಲು ಬಿಟ್ಟಿಲ್ಲ, ಇನ್ನು ದೇವಸ್ಥಾನ ಒಡೆಯಲು ಬಿಡುತ್ತೇವಾ…?, ಸರಕಾರಕ್ಕೆ ನವೀನ್ ನೆರಿಯಾ ಸವಾಲು

 

 

 

ಬೆಳ್ತಂಗಡಿ: ಈಗಾಗಲೇ ಸರ್ಕಾರ 6,500 ದೇವಸ್ಥಾನಗಳ ಪಟ್ಟಿಯನ್ನು ಹೊರಡಿಸಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಕೈ ಬಿಡಬೇಕು. ಮೊಘಲರು ಈ ಹಿಂದೆ ನಮ್ಮ ಧಾರ್ಮಿಕ ಕ್ಷೇತ್ರಗಳ‌ ಮೇಲೆ ದಾಳಿ ಮಾಡಿದ್ದರು. ‌ಅದೇ ರೀತಿಯ ವಿಧ್ವಂಸಕ ಕೃತ್ಯವನ್ನು ರಾಜ್ಯ ಸರ್ಕಾರ ‌ಮಾಡುತ್ತಿದೆ. ರಾಮ‌ಮಂದಿರ ಕೆಡವಿದ ಬಾಬರನಿಗೂ, ದೇವಸ್ಥಾನ ಕೆಡವಿದ ಮುಖ್ಯಮಂತ್ರಿ ಬೊಮ್ಮಯಿ ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ. ಹಿಂದೂಗಳನ್ನು ಕಾಪಾಡುತ್ತೇವೆ ಎಂದು ಆಶ್ವಾಸನೆ ನೀಡಿದ ಪಕ್ಷದಿಂದಲೇ ಇಂತಹ ಕೃತ್ಯ ಊಹಿಸಿರಲಿಲ್ಲ ಎಂದು ಜಿಲ್ಲಾ ಭಜರಂಗ ದಳ ಸಂಚಾಲಕ ಭರತ್ ಕುಮ್ಡೇಲು ಆರೋಪಿಸಿದರು.
ಅವರು ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಮೈಸೂರಿನಲ್ಲಿ ನಡೆದ ದೇವಸ್ಥಾನ ಧ್ವಂಸ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ವೇಣೂರು ಮತ್ತು ಬೆಳ್ತಂಗಡಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸುಪ್ರೀಂ ‌ಕೋರ್ಟ್ ಆದೇಶವನ್ನು ಸರಿಯಾಗಿ ಪರಿಶೀಲನೆ ಮಾಡದೇ ಸರಕಾರ ಈ‌ ಕೆಲಸವನ್ನು ಮಾಡಿದೆ. ಸ್ಥಳೀಯ ರಾಜಕೀಯ ನಾಯಕರು ಶಾಸಕರು, ಸಂಸದರು ದೇಗುಲ ಒಡೆದು ಹಾಕಿದ   ವಿಚಾರ  ನಮಗೆ  ತಿಳಿದಿಲ್ಲ ಎನ್ನುತ್ತಿದ್ದಾರೆ. ಐತಿಹಾಸಿಕ ದೇವಸ್ಥಾನ ಒಡೆದು ಹಾಕುವ ವಿಚಾರವೂ ತಿಳಿಯದಿದ್ದರೆ ಜನಪ್ರತಿನಿಧಿಗಳು ಏನು‌ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

 

 

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ‌ಇದೇ ಕಾರ್ಯಕರ್ತರು ಹಿಂದುತ್ವದ ಪರ ಕೆಲಸ ಮಾಡುತ್ತಾರೆ ಎನ್ನುವ ದೃಷ್ಟಿಯಿಂದ ನಾವು ಅವರನ್ನು ವಿಧಾನ ಸಭೆಗೆ ಕಳುಹಿಸಿದ್ದೆವು. ಆದರೆ ಇವರು ಹಿಂದುತ್ವದ ಪರ ಕೆಲಸ ಬಿಟ್ಟು ವಿರೋಧದ ಕೆಲಸವನ್ನು ಮಾಡುತ್ತಿರುವುದು ಬೇಸರದ ಸಂಗತಿ. ನಮ್ಮ ಈಗಿನ‌ ಶಾಸಕರುಗಳು ವಿರೋಧ ಪಕ್ಷದಲ್ಲಿರುವಾಗ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದರು. ಆದರೆ ಅಧಿಕಾರ ಸಿಗುವಾಗ ಹಿಂದುಗಳ ಅಗತ್ಯವಿಲ್ಲ. ಬೊಮ್ಮಾಯಿಯವರು ತಾವು‌ ಈ‌ ಹಿಂದೆ ನಾನು ಹಿಂದುತ್ವದ ಪರ ಅಲ್ಲ ನಾನು ಮಾನವೀಯವತಾವಾದದ‌ ಪರ ಎಂದು ಹೇಳಿಕೆ‌ ನೀಡಿದ್ದರು. ಈ ಹೇಳಿಕೆ ಶುದ್ಧ ಸುಳ್ಳು‌. ನೀವು‌ ಮೊದಲು ಹಿಂದುತ್ವವಾದಿಯಾದರೆ ಮಾತ್ರ ನೀವು ಮಾನವೀಯತಾವಾದಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿಗಳ ನಡೆಯನ್ನು ಟೀಕಿಸಿದರು.

 

 

ಈ ಸಂದರ್ಭದಲ್ಲಿ ಹಿಂದುತ್ವದ ಪರ ನಿಲ್ಲುವ ವ್ಯಕ್ತಿಯನ್ನು ನಿಲ್ಲಿಸುವ ಅಗತ್ಯ ಇದೆ. ಇಲ್ಲವಾದಲ್ಲಿ ಹಿಂದೂ ಸಮಾಜ, ಪಕ್ಷವನ್ನು ‌ಬದಲು ಮಾಡಿದರೂ ಅಚ್ಚರಿ ಪಡಬೇಕಿಲ್ಲ. ನಮ್ಮ ದೇಶದಲ್ಲಿ ಹಿಂದುತ್ವವನ್ನು ಸೋಲಿಸಲು ನಮ್ಮ ಕಾರ್ಯಕರ್ತರು ಬಿಡುವುದಿಲ್ಲ.  ಮೈಸೂರಿನಲ್ಲಿ ದೇವಸ್ಥಾನವನ್ನು ‌ದ್ವಂಸಗೊಳಿಸಿದ ಸ್ಥಳದಲ್ಲೇ ಮತ್ತೆ ದೇವಸ್ಥಾನವನ್ನು ಸರ್ಕಾರ ಕಟ್ಟಿ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

 

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನವನ್ನು ದ್ವಂಸ‌‌ಮಾಡುವ ಯೋಚನೆ ಮಾಡಬೇಡಿ. ನಾವು ನೆಟ್ಟಿರುವ ಭಗವಾಧ್ವಜವನ್ನೂ ಕೀಳಲು ಬಿಟ್ಟಿಲ್ಲ. ಇನ್ನು ದೇವಸ್ಥಾನ  ಕೆಡವಲು ಬಿಡುತ್ತೇವಾ…? ಸಿದ್ಧರಾಮಯ್ಯ ಅವರಿಗೆ ಈಗ ಹಿಂದುಗಳ‌ ಮೇಲೆ ಕುರುಡು ಪ್ರೀತಿ ಹೆಚ್ಚಾಗಿದೆ. ಅವರ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗೆ ಅನ್ನಿಸುತ್ತದೆ. ಪಕ್ಷ ಯಾವುದೇ ಇರಲಿ ನಮಗೆ ಹಿಂದುತ್ವ ‌ಮಾತ್ರ ಮುಖ್ಯ ಎಂದರು‌. ಪ್ರತಿಭಟನೆಯ ನಂತರ ತಹಶೀಲ್ದಾರ್  ಮೂಲಕ  ಸರ್ಕಾರಕ್ಕೆ   ಮನವಿಯನ್ನು ನೀಡಲಾಯಿತು .ಈ ಸಂದರ್ಭದಲ್ಲಿ ತಾಲೂಕು ವಿ.ಹಿ.ಪ ಅಧ್ಯಕ್ಷ ಸುಬ್ರಮಣ್ಯ ಅಗರ್ತ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಸಹಕಾರ್ಯದರ್ಶಿ ರಾಜಶೇಖರ್ ರೈ ಕರಾಯ, ಸಂಚಾಲಕ ಸಂತೋಷ್ ಅತ್ತಾಜೆ ರಮೇಶ್ ಧರ್ಮಸ್ಥಳ, ದಿನೇಶ್,ಗಣೇಶ್ ಕಳೆಂಜ, ಶ್ರೀಧರ ಗುಡಿಗಾರ್, ಹಿಂದೂ ಜಾಗರಣಾ ವೇದಿಕೆಯ ಪದ್ಮನಾಭ ಶೆಟ್ಟಿಗಾರ್ ಮತ್ತು
ವಿಶ್ವ ಹಿಂದೂ ಪರಿಷತ್ ಬಜರಂಗ ದಳ ‌‌‌‌‌‌‌‌‌ವೇಣೂರು ಹಾಗೂ ಬೆಳ್ತಂಗಡಿಯ ವ್ಯಾಪ್ತಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ‌

 

 

error: Content is protected !!