ಸ್ಪೂರ್ತಿ ನೀಡಿದರೆ ವಿಶೇಷಚೇತನರ ಶಕ್ತಿ, ಸಾಮರ್ಥ್ಯ ಹೆಚ್ಚಾಗಿ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ: ವಿಧಾನ‌ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಅಭಿಮತ: ಉಜಿರೆ ‘ಸಾನಿಧ್ಯ’ ಕೌಶಲ್ಯ ತರಬೇತಿ ಕೇಂದ್ರದ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗೆ ಬಸ್ ಹಸ್ತಾಂತರ, ಶಿಕ್ಷಕರ ದಿನಾಚರಣೆ ಉದ್ಘಾಟನೆ

 

 

 

ಉಜಿರೆ: ತಾಳ್ಮೆಯ ಜತೆ ಪ್ರೀತಿ ಹಾಗೂ ಅಭಿಮಾನದಿಂದ ವಿಶೇಷಚೇತನರ ಶಕ್ತಿ , ಸಾಮರ್ಥ್ಯವನ್ನು ಪ್ರವರ್ಧಮಾನಕ್ಕೆ ತಂದು ಅವರ ಬಾಳಿಗೆ ಬೆಳಕು ತೋರುವ ಸಾನಿಧ್ಯ ಕೇಂದ್ರದ ಸೇವೆ ಅಭಿನಂದನೀಯ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ‘ಸಾನಿಧ್ಯ’ ಕೌಶಲ್ಯ ತರಬೇತಿ ಕೇಂದ್ರ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗಾಗಿ ಬಸ್ ಹಸ್ತಾಂತರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷ ಮಕ್ಕಳಿಗೆ ವಿಶೇಷ ಶಿಕ್ಷಣ ಅದಕ್ಕೆ‌ ಪ್ರೀತಿ ತೋರಿಸುವ ಸಾನಿಧ್ಯ ಸಂಸ್ಥೆಗೆ ಮತ್ತು ಶಿಕ್ಷಕರಿಗೆ ಅಭಿನಂದನೆಗಳು. ದೈಹಿಕ ಸಾಮರ್ಥ್ಯದಲ್ಲಿ ಕೊರತೆಯಿದ್ದರೂ, ಅದನ್ನು ಮೀರಿ ನಿಂತು ಬದುಕು ಕಟ್ಟಿಕೊಳ್ಳಲು, ವಿಶೇಷಚೇತನರ ಮನಸ್ಸಿನ ತೊಳಲಾಟವನ್ನು ದೂರಮಾಡಿ ಸ್ಪೂರ್ತಿ ನೀಡಿದರೆ ಅವರ ಆತ್ಮಸ್ಥೈರ್ಯ ಹೆಚ್ಚಿ ಸಾಧನೆಗಳು ಬೆಳಕಿಗೆ ಬರುತ್ತವೆ. ಒಲಿಂಪಿಕ್ಸ್ ‌ನಲ್ಲಿ ವಿಕಲ ಚೇತನ ಮಕ್ಕಳು ಮಾಡಿದ ಸಾಧನೆ ಶ್ಲಾಘನೀಯ. ಎರಡೂ‌ ಕೈಗಳಿಲ್ಲದ ವಿಕಲಚೇತನ ವಿದ್ಯಾರ್ಥಿನಿ ಸಬಿತಾ ಮೋನಿಸ್‌ ಅವರ ಸಾಧನೆ ಮಾದರಿಯಾಗಿದೆ, ದೈಹಿಕವಾಗಿ ಸದೃಢವಾಗಿ ಇರುವ ನಾವು ಯಾವ ರೀತಿ ಸಾಧನೆ‌‌‌ ಮಾಡಬಹುದು,
ನಾವು ದೇಹದ ಆರೋಗ್ಯದ ಬಗ್ಗೆ ಗಮನ ಕೊಡುವ ಜೊತೆಗೆ ಮನಸ್ಸಿನ ಅರೋಗ್ಯದ ಕಡೆಗೆ ಗಮನ‌ ಕೊಡುವುದು ಅಗತ್ಯ ಎಂದರು.
ನಮ್ಮ ಊರಿನ‌ ಮಕ್ಕಳಿಗೆ ಆಸರೆಯಾಗಿ ಈ‌ ಸಂಸ್ಥೆ ಬೆಳೆಯುತ್ತಿದೆ. ಈ ಸಂಸ್ಥೆಗೆ ನಾವೆಲ್ಲಾ ಒಟ್ಟು ಸೇರಿ‌ ದುಡಿಯುತ್ತೇವೆ ಎಂದು ಈ ಸಂಧರ್ಭದಲ್ಲಿ ಹೇಳಿದರು

 

 

 

ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ‌ ಶರತ್ ಕೃಷ್ಣ ಪಡ್ವೆಟ್ನಾಯ ಮಾತನಾಡಿ, ಟ್ರಸ್ಟ್ ಆತ್ಯಂತ ಶ್ರೇಷ್ಠವಾದ ಕೆಲಸವನ್ನು ಮಾಡುತ್ತಿದೆ. ವಿಶೇಷ ಚೇತನ‌ ಮಕ್ಕಳನ್ನು ಶುಚಿಯಾಗಿ ನೋಡುತ್ತಿರುವ ಈ ಸಂಸ್ಥೆ ಮಾದರಿಯಾಗಿದೆ. ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ದಾನಿಗಳ ಮತ್ತು ಜನಾರ್ದನ ಸ್ವಾಮಿ ದೇವಸ್ಥಾನದ ವತಿಯಿಂದ ದೊಡ್ಡ ಮಟ್ಟದ ಸಹಾಯವನ್ನು ‌ಮಾಡುವ ಯೋಚನೆ ಇದೆ ಎಂದರು.
ಸಾನಿಧ್ಯಸಮೂಹ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಶೆಟ್ಟಿ ಪ್ರಸ್ತಾವನೆಗೈದು, ನಾವು ಇಲ್ಲಿಯವರೆಗೆ ಬಾಡಿಗೆ ವಾಹನದ ಮೂಲಕ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೆವು. ಇದೀಗ ರೋಟರಿ ಕ್ಲಬ್ ಸಹಕಾರದಲ್ಲಿ  ಸ್ವಂತ ವಾಹನ‌‌ ಸಿಕ್ಕಿದೆ. 2018ರಿಂದ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇವೆ. ಸುಸಜ್ಜಿತ ಕಟ್ಟಡವಿದೆ, ಹುಡುಗಿಯರಿಗೆ ಬೇರೆ ಹುಡುಗರಿಗೆ ಬೇರೆ ವಸತಿ ನಿಲಯವನ್ನು ನಿರ್ಮಾಣ ಮಾಡಿದ್ದೇವೆ. ದಾನಿಗಳು ನೀಡಿದ ಹಣದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಇನ್ನಿತರ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾಭ್ಯಾಸ ಸಿಗಬೇಕು ಎನ್ನುವ ಉದ್ದೇಶ ನಮ್ಮದು ಎಂದರು.

 

ಉಜಿರೆಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪವತಿ ಆರ್. ಶೆಟ್ಟಿ ಮಾತನಾಡಿ, ಸಾಮಾನ್ಯ ಮಕ್ಕಳಿಗೆ ನಾವು ಕಲಿಸಿಕೊಡುವುದು ಕಠಿಣ. ಅದರಲ್ಲೂ ಇಲ್ಲಿ ವಿಕಲ‌ಚೇತನಾ‌ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ನೋಡುತ್ತಿರುವ ಈ‌ ಸಂಸ್ಥೆಗೆ ಮತ್ತು ಎಲ್ಲಾ ಶಿಕ್ಷಕರ ಕಾರ್ಯ ಅಭಿನಂದನೀಯ ಎಂದರು.
ಗ್ರಾಮ‌ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಉಜಿರೆ ಸಾನ್ನಿಧ್ಯ ಕೇಂದ್ರದ ನಿರ್ದೇಶಕ ಪ್ರಮೋದ್ ಆರ್. ನಾಯಕ್ ಮಾತನಾಡಿದರು.
ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ನೆರಿಯದ ಸಿಯೋನ್ ಆಶ್ರಮದ ಟ್ರಸ್ಟಿ ಯು.ಸಿ. ಪೌಲೋಸ್, ಸೇವಾ ಕೇಂದ್ರದ ನಿರ್ದೇಶಕರಾದ  ಜಗದೀಶ ಶೆಟ್ಟಿ, ಮಹಮ್ಮದ್ ಬಶೀರ್ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮೇಲ್ವಿಚಾರಕಿ ಜೊಸ್ಪಿನಾ ಪಿ.ಟಿ. ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ರಾಧಾಕೃಷ್ಣ ಕೆ. ವಂದಿಸಿದರು.

error: Content is protected !!