ಮೇಯಲು ಬಿಟ್ಟ ಎಮ್ಮೆಗೆ ಗುಂಡು ಹೊಡೆದು ಕೊಂದ ದುಷ್ಕರ್ಮಿಗಳು.

ಅರಸಿನಮಕ್ಕಿ;ಮೇಯಲು ಬಿಟ್ಟಿದ್ದ ಎಮ್ಮೆಯನ್ನು ದುಷ್ಕರ್ಮಿಗಳು ಗುಂಡುಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಫಲಸ್ತಡ್ಕ ಎಂಬಲ್ಲಿ ನಡೆದಿದೆ.
ಹೊಸ್ತೋಟ ವಾಳ್ಯದ ಅರೆಕ್ಕಲ್ ಮಹಾದೇವ ಭಟ್ ಎಂಬವರ ಹಾಲು ಕರೆಯುವ ಸುಮಾರು 10 ವರ್ಷ ವಯಸ್ಸಿನ ಎಮ್ಮೆಯನ್ನು ಮನೆ ಪಕ್ಕದಲ್ಲಿ ಮೇಯಲು ಬಿಟ್ಟಿದ್ದರು. ಅದರೆ ಎಮ್ಮೆ ತಡರಾತ್ರಿವರೆಗೂ ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದಾಗ ಸಮೀಪದ ಫಲಸ್ತಡ್ಕ ಎಂಬಲ್ಲಿ ಮಂಗಳವಾರ ಮೃತದೇಹ ಪತ್ತೆಯಾಗಿದೆ. ಎಮ್ಮೆಯ ಮೈಮೇಲೆ ಗುಂಡಿನ ಗಾಯಗಳು ಕಂಡುಬಂದಿದ್ದು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಜತೆ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!