ಸೆ.8ರಂದು‌ ಉಜಿರೆಯಲ್ಲಿ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗೆ ಬಸ್ ಹಸ್ತಾಂತರ: ಮಂಗಳೂರಿನ ಶ್ರೀ ಗಣೇಶ ಸೇವಾ ಟ್ರಸ್ಟ್ ಸಾನಿಧ್ಯದಿಂದ ವಿಶೇಷ ಮಕ್ಕಳ ಕರೆತರಲು ಬಸ್ ವ್ಯವಸ್ಥೆ

 

 

ಬೆಳ್ತಂಗಡಿ: ಮಂಗಳೂರಿನ ಶ್ರೀ ಗಣೇಶ ಸೇವಾ ಟ್ರಸ್ಟಿನ ಸೇವಾ ಘಟಕವಾದ ಉಜಿರೆಯ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಶಾಲಾ ವಾಹನದ ಸೌಲಭ್ಯದ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆ.8ರಂದು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಶ್ರೀ ಕೃಷ್ಣ ಸಭಾಭವನದಲ್ಲಿ ನಡೆಯಲಿದೆ ಎಂದು ಸೇವಾ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಹೇಳಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿ.ವಿ.9 ದೃಶ್ಯ ಮಾಧ್ಯಮ ಹಾಗೂ ಮಂಗಳೂರಿನ ಶ್ರೀ ಗಣೇಶಾ ಸೇವಾ ಟ್ರಸ್ಟ್ ಇವರು ಮಾಡಿಕೊಂಡ ಒಪ್ಪಂದದ ಪ್ರಕಾರ 2019ರ ಜನವರಿಯಿಂದ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗಾಗಿ ಉಜಿರೆಯಲ್ಲಿ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಕಾರ್ಯಾರಂಭವಾಗಿದೆ. ಸುಮಾರು 40 ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಆರಂಭವಾದ ಸಂಸ್ಥೆಯಲ್ಲಿ ಪ್ರಸ್ತುತ 24 ಮಕ್ಕಳಿದ್ದು 16 ಸಿಬ್ಬಂದಿಗಳು ಸೇವಾನಿರತರಾಗಿದ್ದಾರೆ ಎಂದರು .
ಮಂಗಳೂರಿನ ಶ್ರೀ ಗಣೇಶಾ ಸೇವಾ ಟ್ರಸ್ಟ್ ಸಾನಿಧ್ಯದಿಂದ ವಿಶೇಷ ಮಕ್ಕಳನ್ನು ಕರೆತರಲು ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಮಾಡಿದ್ದು, ಇದರ ಉದ್ಘಾಟನೆಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಭಾಗವಹಿಸಲಿದ್ದು, ಶ್ರೀ ಗಣೇಶಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೇವಾ ಟ್ರಸ್ಟ್ ಹಾಗೂ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಕಾರ್ಯದರ್ಶಿ ಪ್ರೊ. ರಾಧಾಕೃಷ್ಣ, ತರಬೇತಿ ಕೇಂದ್ರದ ಸಲಹೆಗಾರ ಪ್ರಮೋದ್ ಆರ್. ನಾಯಕ್, ಮೇಲ್ವಿಚಾರಕಿ ಜೊಸ್ಪಿನಾ ಇದ್ದರು.

error: Content is protected !!