75 ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಟಾರ್ಪಲಿನ್ ವಿತರಣೆ:

 

 

 

ಬೆಳ್ತಂಗಡಿ: 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭ 75 ಕಾರ್ಯಕ್ರಮ ಆಯೋಜನೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಸಂಕಲ್ಪ ಮಾಡಿದ್ದು, ಅದರ ಅಂಗವಾಗಿ ಕೃಷಿ ಇಲಾಖೆಯಿಂದ ಅರ್ಹ 75 ಮಂದಿ ಫಲಾನುಭವಿಗಳಿಗೆ ಟರ್ಪಾಲಿನ್‌ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಶ್ರಮಿಕ‌ ಶಾಸಕರ ಕಾರ್ಯಾಲಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ 75 ಮಂದಿ ಅರ್ಹ ರೈತ ಫಲಾನುಭವಿಗಳಿಗೆ ಟಾರ್ಪಲಿನ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುತ್ತಿದ್ದೇನೆ.‌ ಮುಂದಿನ ದಿನಗಳಲ್ಲಿ ಕೃಷಿಗೆ ಹಾಗೂ ಕೃಷಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ತಂದು ಅಭಿವೃದ್ದಿ ಮಾಡಲಾಗುವುದು.

 

 

ಕೋವಿಡ್-19 ನಿಂದಾಗಿ 75 ಯೋಜನೆಗಳನ್ನು ಒಂದೇ ಬಾರಿ ಒಂದೇ ದಿನ ವಿತರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಂತಹಂತವಾಗಿ ಒಂದೊಂದೇ ಇಲಾಖೆಗಳ ಯೋಜನೆಯನ್ನು ವಿತರಣೆ ಮಾಡುವ ಕೆಲಸ ಆಗುತ್ತಿದೆ. ಸರಕಾರದ ನಿಯಮವನ್ನು ಪಾಲಿಸಿಕೊಂಡು 75 ಯೋಜನೆಯನ್ನು ಅನುಷ್ಠಾನ‌ ಮಾಡಲಾಗುವುದು. ವಿವಿಧ ಇಲಾಖೆಗಳ 75 ಯೋಜನೆಗಳನ್ನು ಒಂದೊಂದು‌ ಇಲಾಖೆಯಲ್ಲಿ 75 ಮಂದಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಒಟ್ಟು ಸುಮಾರು‌ 5,600ಕ್ಕೂ ಹೆಚ್ಚು ಜನ ಫಲಾನುಭವಿಗಳ ಮನೆಗಳಿಗೆ ಸರಕಾರದ ಯೋಜನೆಯನ್ನು ಮುಟ್ಟಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಆನಂದ ಅಡೀಲು, ಕಳೆಂಜ ಗ್ರಾಮ ಪಂಚಾಯತಿ ಸದಸ್ಯ ಹರೀಶ್, ತಣ್ಣೀರುಪಂತ ಗ್ರಾಮ ಪಂಚಾಯತಿ ಸದಸ್ಯ ರುಕೇಶ್,
ನಡ ಗ್ರಾಮ ಪಂಚಾಯತಿ ಸದಸ್ಯ ಹರಿಶ್ಚಂದ್ರ, ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಕೃಷಿ ಅಧಿಕಾರಿ ಚಿದಾನಂದ ಎಸ್.ಹೂಗಾರ್, ನಿವೃತ್ತ ಸಹಾಯಕ ಕೃಷಿ ಅಧಿಕಾರಿ‌ ನಾರಾಯಣ ಪೂಜಾರಿ, ಸಿಬ್ಬಂದಿ ಪುಷ್ಪಾ ಮತ್ತಿತರರು‌ ಇದ್ದರು.‌
75 ಫಲಾನುಭವಿಗಳಿಗೆ ಟಾರ್ಪಲಿನ್ ವಿತರಿಸಲಾಯಿತು.

error: Content is protected !!