ಬೆಳ್ತಂಗಡಿ: ‘ದಿನಕ್ಕೊಂದು ರೂಪಾಯಿಂದ ಶಾಲೆ ಉಳಿಸಿದ ಶಿಕ್ಷಕ’, ‘ಕಾಣಿಕೆ ಡಬ್ಬಿ ಮೇಸ್ಟ್ರ ಶಾಲೆ’, ‘ಕಾಣಿಕೆ ಡಬ್ಬಿ ಇಟ್ಟು ಅಕ್ಷರ ಕ್ರಾಂತಿ’ ಮೊದಲಾದ ಶಿರ್ಷಿಕೆ ಮೂಲಕ ರಾಷ್ಟ್ರಾದ್ಯಂತ ಹೆಸರು ಮಾಡಿದ
ತಾಲ್ಲೂಕಿನ ಕಟ್ಟದಬೈಲು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಡ್ವರ್ಡ್ ಡಿ ಸೋಜಾ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1992ರಲ್ಲಿ ಸರಳೀಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ಸೇವೆಗೆ ಸೇರಿದ್ದು, 2003ರಿಂದ ಕಟ್ಟದಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸರಳೀಕಟ್ಟೆ ಶಾಲೆಯ ಶಾಲಾ ಕಟ್ಟಡ, ವಿದ್ಯುತೀಕರಣ, ಸಭಾಂಗಣ, ಹೊರಾಂಗಣ ಒಳಾಂಗಣ ವೇದಿಕೆ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಳಿಕ ಕಟ್ಟದಬೈಲು ಶಾಲೆಯ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಸ್ವರ್ಣ ನಿಧಿ ಹೆಸರಿನಲ್ಲಿ ತಾನು ಪ್ರತಿ ದಿನ 11 ರೂಪಾಯಿ ಸೇರಿಸಿ ಮಕ್ಕಳಿಂದ ಪ್ರತಿ ದಿನ ಒಂದೊಂದು ರೂಪಾಯಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಶಿಷ್ಯವೇತನ, ಪ್ರೋತ್ಸಾಹಧನ ನೀಡಿದ್ದಾರೆ. ವಜ್ರನಿಧಿ ಹೆಸರಿನಲ್ಲಿ ದಾನಿಗಳು, ಶಿಕ್ಷಕರು ಹಾಗೂ ಪೋಷಕರ ನೆರವು ಪಡೆದು ಗೌರವ ಶಿಕ್ಷಕಿಯರಿಗೆ ಸಂಭಾವನೆ ನೀಡುವ ಕೆಲಸವನ್ನು ಮಾಡಿದ್ದಾರೆ. ವಜ್ರ ಸಂಜೀವಿನಿ ಹೆಸರಿನಲ್ಲಿ ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಓರ್ವ ಗೌರವ ಶಿಕ್ಷಕರಿಗೆ ಕೆಲಸ ಕಳೆದುಕೊಂಡ ಬಳಿಕ ಮಾಸಿಕ ರೂ.1000 ಪಿಂಚಣಿ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಇವರು ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 2008ರಲ್ಲಿ ಫಾದರ್ ಮುಲ್ಲರ್ಸ್ ಮಡಿಕಲ್ ಕಾಲೇಜಿಗೆ ಮರಣ ನಂತರ ದೇಹದಾನ ಮಾಡಲು ಸಹಿ ಮಾಡಿದ್ದಾರೆ.
ಅನಾರೋಗ್ಯದಿಂದ ವಾಹನ ಚಲಾಯಿಸಲು ಸಾಧ್ಯವಾಗದಿದ್ದಾಗ 7 ಕಿ.ಮೀ. ನಡೆದೇ ಹೋಗುತ್ತಿದ್ದ ಇವರು ಇದೀಗ ಮಂಡಿನೋವಿನಿಂದ ಬಳಲುತ್ತಿದ್ದರೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯ ಅಭಿವೃದ್ಧಿಯಲ್ಲೂ ಕೈ ಜೋಡಿಸಿದ್ದಾರೆ.
ಇವರಿಗೆ 1997ರಲ್ಲಿ ಬೆಳ್ತಂಗಡಿ ತಾಲ್ಲೂಕು ಪ್ರತಿಭಾವಂತ ಶಿಕ್ಷಕ ಪ್ರಶಸ್ತಿ, 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2009ರಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಹುಬ್ಬಳ್ಳಿ ವತಿಯಿಂದ ಡಾ.ಎಸ್ ರಾಧಾಕೃಷ್ಣನ್ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2010ರಲ್ಲಿ ನಿಡುಮಾಮಿಡಿ ಸದ್ಭಾವನಾ ಪ್ರಶಸ್ತಿ, 2014ರಲ್ಲಿ ರೋಟರಿ ಲಿಟರಸಿ ಮಿಷನ್ ಆಫ್ ಇಂಡಿಯಾದ ನ್ಯಾಷನಲ್ ಬಿಲ್ಡರ್ ಪ್ರಶಸ್ತಿ, 2019ರ ಯೆನಪೋಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಇವರ ಸೇವಾ ಅವಧಿಯಲ್ಲಿ ಕಟ್ಟದಬೈಲು ಶಾಲೆಗೆ ಸುವರ್ಣ ಕರ್ನಾಟಕ 2016ರ ಗುಣಾತ್ಮಕ ಶಿಕ್ಷಣಕ್ಕಾಗಿ ಉತ್ತಮ ಶಾಲೆ, ಸುವರ್ಣ ಕರ್ನಾಟಕ 2016ರ ತಾಲ್ಲೂಕಿನ ಉತ್ತಮ ಎಸ್.ಡಿ.ಎಂ.ಸಿ, 2018-19ರಲ್ಲಿ ತಾಲ್ಲೂಕಿನ ಉತ್ತಮ ಶಾಲೆ ಎಂಬ ಪ್ರಶಸ್ತಿಗಳು ಲಭಿಸಿದೆ.
ಪ್ರಸ್ತುತ ಇವರು ಬೆಳ್ತಂಗಡಿ ಚರ್ಚ್‍ರೋಡ್ ಬಳಿ ವಾಸವಿದ್ದು, ಇವರಿಗೆ ಶಿಕ್ಷಕಿಯಾಗಿರುವ ಪತ್ನಿ ಪ್ಲೇವೀ ಡಿಸೋಜಾ, ಎಂಜಿನಿಯರಿಂಗ್ ಕಲಿಯುತ್ತಿರುವ ಮಗ ಹಾಗೂ ಬ.ಎಸ್ಸಿ.ಕಲಿಯುತ್ತಿರುವ ಮಗಳು ಇದ್ದಾರೆ.