ಕಾರ್ಡ್ ಮಾಡಿಸಿಕೊಂಡಲ್ಲಿ ಸರಕಾರದ ವಿವಿಧ ಸವಲತ್ತು ಪಡೆಯಲು ಸಾಧ್ಯ: ಜನರು ತಮ್ಮ ಭದ್ರತೆಗಾಗಿ ಜವಾಬ್ದಾರಿ ಅರಿತು ವ್ಯವಹರಿಸುವುದು ಅವಶ್ಯ: ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅಭಿಮತ: ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

×

ಬೆಳ್ತಂಗಡಿ: ಸರಕಾರ ಕಾರ್ಮಿಕ ಇಲಾಖೆಯ ನೋಂದಾಯಿತ ಸಂಘಟಿತ ಕಟ್ಟಡ ಕಾರ್ಮಿಕರಿಗೆ ಮಾತ್ರ ಆಹಾರ ಕಿಟ್ ನೀಡುತ್ತಿದೆ. ಸುಭದ್ರತೆ ಕಾಯ್ದುಕೊಳ್ಳುವ ದೃಷ್ಟಿಕೋನದಿಂದ ಅಸಂಘಟಿತ ಕಾರ್ಮಿಕರು‌ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಸರಕಾರದ ಕಾರ್ಮಿಕ‌ ಇಲಾಖೆಯು ನೀಡಲಾಗುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ, ಮಾತನಾಡಿದರು.
ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯ ಸವಲತ್ತು ಪಡೆಯಬೇಕಾದರೆ ಇಲಾಖೆಯ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದರು.
ಆಯುಷ್ಮಾನ್ ಭಾರತ್, ಕಾರ್ಮಿಕರ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಚೀಟಿ ಅವಶ್ಯಕತೆಯಿದ್ದು ಅದನ್ನು ಮಾಡಿಸಿಕೊಳ್ಳದಿದ್ದರೆ ನಮಗೆ ಅಗತ್ಯ ಸಂದರ್ಭದಲ್ಲಿ ಯಾವುದೇ ಅನುದಾನಗಳು, ಸವಲತ್ತುಗಳು ಲಭ್ಯವಾಗುವುದಿಲ್ಲ. ಎಲ್ಲವೂ ಸರಕಾರ ಮಾಡಬೇಕು ಎಂಬುವುದಕ್ಕಿಂತ ಜನರು ತಮ್ಮ ಭದ್ರತೆಗಾಗಿ ಜವಾಬ್ದಾರಿ ಅರಿತು ವ್ಯವಹರಿಸಬೇಕು ಎಂದರು.
ಕಾರ್ಮಿಕ ಇಲಾಖೆಯ ಕಲ್ಯಾಣ ಕ್ಷೇಮ ನಿಧಿಯಿಂದ ಆಹಾರ ಧಾನ್ಯ ಕಿಟ್ ವಿತರಣೆ ಆಗುತ್ತಿದೆ. ಕಾರ್ಮಿಕರಿಗಾಗಿ ಸೆಸ್ ನಿಂದ ಸಂಗ್ರಹವಾದ ಹಣದಿಂದ ಇಂತಹ ಯೋಜನೆಯನ್ನು ಸರಕಾರ ನೀಡುತ್ತಿದೆ. ಅಸಂಘಟಿತ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡರೆ ಮದುವೆ, ಸ್ಕಾಲರ್ ಶಿಫ್, ಆಕಸ್ಮಿಕ ಮರಣ ಮೊದಲಾದ ಸಂದರ್ಭಗಳಲ್ಲಿ ಕೆಲವು ಸವಲತ್ತುಗಳು ಸಿಗುತ್ತದೆ. ಎಲ್ಲಾ ಕಟ್ಟಡ ಕಾರ್ಮಿಕರು ಇದರ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದರು.
ಕೊರೋನಾ ಸೋಂಕಿತರ ಪಟ್ಟಿಯಲ್ಲಿ ದ.ಕ.‌ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕೋವಿಡ್ ಗಂಟಲ ದ್ರವ ಪರೀಕ್ಷೆ ಹೆಚ್ಚಾಗಿ ನಡೆಸುತ್ತಿರುವ ಕಾರಣ ಪಾಸಿಟಿವಿಟಿ ರೇಟ್ ಜಾಸ್ತಿ ಇದೆ. ತಜ್ಞರ ಅಭಿಪ್ರಾಯದಂತೆ ಮುಂದಿನ ದಿನದಲ್ಲಿ ಮೂರನೆ ಅಲೆ ಸಂದರ್ಭ ಸ್ವಾಬ್ ಪರೀಕ್ಷೆಯು ಭವಿಷ್ಯದ ದಿನದಲ್ಲಿ ನಮಗೆ ಸಹಕಾರಿಯಾಗಲಿದೆ. ಸರಕಾರದ ಮಾರ್ಗಸೂಚಿಯನ್ನು ಜನತೆ ಪಾಲಿಸಿದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯ ಜಗದೀಶ್ ಡಿ., ಜನಾರ್ಧನ್, ಮುಸ್ತರ್ ಜಾನು ಮೆಹಬೂಬ್, ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕೆ.,
ಪಟ್ಟಣ ಪಂಚಾಯಿತಿ ಎಂಜಿನಿಯರ್ ಮಹಾವೀರ್ ಆರಿಗ ಮೊದಲಾದವರು ಇದ್ದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಪ್ರಸ್ತಾವಿಸಿ, ಸ್ವಾಗತಿಸಿದರು.

error: Content is protected !!