ಬೆಳ್ತಂಗಡಿ: ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ, ಲಾಯಿಲ ನಿವಾಸಿ ಸಂತೋಷ್ ಕುಮಾರ್ (44) ಅವರು ಶನಿವಾರ ಲಾಯಿಲ ಗ್ರಾಮದ ಆದರ್ಶ ನಗರದ
ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಂತ ಅಟೋ ರಿಕ್ಷಾ ಹೊಂದಿದ್ದ ಸಂತೋಷ್ ಅವರು
ಕೆಲವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿ ಸೊಂಟದಿಂದ ಕೆಳಗೆ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲೇ ಇದ್ದರು.
ಕೊಕ್ಕಡದ ಸೇವಾಧಾಮ ಬೆನ್ನುಮೂಳೆ ಮುರಿತಕ್ಕೊಳಗಾದವರ ಆರೈಕೆ ಕೇಂದ್ರದಿಂದ ಚಿಕಿತ್ಸೆ ಮತ್ತು ಫಿಸಿಯೋಥೆರಫಿ ಪಡೆದು ಚೇತರಿಸಿಕೊಂಡು ಸ್ವಾವಲಂಬಿಯಾಗಿ ದುಡಿಯುತ್ತಿದ್ದರು.
ಶನಿವಾರ ಬೆಳಗ್ಗೆ ಆದರ್ಶ ನಗರದ ಸರಕಾರಿ ಬಾವಿ ಬಳಿ ಆಪೆ ರಿಕ್ಷಾವೊಂದು ನಿಂತಿರುವುದನ್ನು ಅಲ್ಲಿನ ಸ್ಥಳೀಯರು ಗಮನಿಸಿದಾಗ ಬಾವಿಯಲ್ಲಿ ಚಪ್ಪಲಿ ತೇಲುತ್ತಿದ್ದದು ಗಮನಿಸಿ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾವಿಯಿಂದ ಶವವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಲತ್ರೆಗೆ ಕೊಂಡೊಯ್ಯಲಾಗಿದೆ.
ಘಟನೆ ನಡೆದ ಸ್ಥಳ ಜನತಾ ಕಾಲೋನಿಯಾಗಿದ್ದು ಸುತ್ತಮುತ್ತ ಮನೆಗಳಿದೆ. ಆಪೆ ರಿಕ್ಷಾ ಬಾವಿಯ ಬಳಿಯೇ ಇದ್ದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ. ಸೊಂಟದಿಂದ ಕೆಳಗೆ ಸ್ವಾಧೀನ ಇಲ್ಲದ ಕಾರಣ ಆಪೆ ರಿಕ್ಷಾವನ್ನು ಬಾವಿಯ ದಂಡೆಯ ಹತ್ತಿರವೇ ನಿಲ್ಲಿಸಿ, ಬಾವಿಗೆ ಹಾರಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಉಜಿರೆ ಬೆಳ್ತಂಗಡಿ ಅಪೆ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಯಾಗಿ, ಲಾಯಿಲ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ಅವಿವಾಹಿತರಾಗಿರುವ ಸಂತೋಷ್ ಅವರು
ತಮ್ಮ ದೀರ್ಘಕಾಲಿಕ ಅನಾರೋಗ್ಯದಿಂದಲೇ ಬೇಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.