ಮಂಗಳೂರು: ರೈಲು ಹಳಿಯ ಮೇಲೆ ಓಡಾಡುತಿದ್ದ ಆಡಿನ ಮರಿಯನ್ನು ಉಳಿಸಲು ಹೋಗಿ ಯುವಕನೋರ್ವ ತನ್ನ ಕಾಲನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಜೋಕಟ್ಟೆಯಲ್ಲಿ ಶನಿವಾರ ನಡೆದಿದೆ.
ಬೈಕಂಪಾಡಿ ಜೋಕಟ್ಟೆ ಅಂಗಾರಗುಂಡಿ ನಿವಾಸಿ ಚೇತನ್ ಕುಮಾರ್(21) ಎಂಬಾತನೆ ಕಾಲು ಕಳೆದುಕೊಂಡ ಯುವಕ ಚೇತನ್ ಕುಮಾರ್ ಜೋಕಟ್ಟೆಯ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಶನಿವಾರ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿರುವ ಸಂದರ್ಭ ಆಡಿನ ಮರಿಯೊಂದು ರೈಲು ಹಳಿಯಲ್ಲಿ ಓಡಾಡುತ್ತಿತ್ತು. ಆಗ ಅದನ್ನು ರಕ್ಷಿಸಲು ಧಾವಿಸಿದ್ದಾರೆ. ಆಡಿನ ಮರಿಯನ್ನು ರೈಲು ಹಳಿಯಿಂದ ದೂಡಿ ಇನ್ನೇನು ತಪ್ಪಿಸಿಕೊಳ್ಳಬೇಕೆನ್ನುವಷ್ಟರಲ್ಲಿ ರೈಲು ಯುವಕನ ಕಾಲಿನ ಮೇಲೆಯೇ ಹರಿದಿದೆ. ಪರಿಣಾಮ ಅವರ ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದೆ.
ಅವರು ಹಳಿಯ ಮೇಲೆಯೇ ಬಿದ್ದು ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿ, ಹೆಚ್ಚು ಹಣ ಖರ್ಚು ಮಾಡಿದಲ್ಲಿ ಒಂದು ಕಾಲನ್ನು ಉಳಿಸಬಹುದೆಂದು ಹೇಳಿದ್ದಾರೆ. ಬಡ ಕುಟುಂಬದವರಾದ ಚೇತನ್ ಕುಮಾರ್ ಐವರು ಮಕ್ಕಳಲ್ಲಿ ಹಿರಿಯವರಾಗಿದ್ದು, ಉಳಿದ ನಾಲ್ಕು ಮಂದಿ ಶಾಲೆ ಕಲಿಯುತ್ತಿದ್ದಾರೆ. ಇವರ ದುಡಿಮೆಯಿಂದಲೇ ಮನೆ ನಿರ್ವಹಣೆಯಾಗುತಿದ್ದು ಇದೀಗ ಕುಟುಂಬಕ್ಕೇ ದಿಕ್ಕೇ ತೋಚದಂತಾಗಿದೆ. ಈ ಯುವಕನ ಚಿಕಿತ್ಸೆಗೆ ದಾನಿಗಳ ಜನಪ್ರತಿನಿಧಿಗಳ ಸಹಾಯಹಸ್ತಕ್ಕಾಗಿ ಕುಟುಂಬ ಕಾಯುತ್ತಿದೆ.ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.