ಬೆಳ್ತಂಗಡಿ: ಲೋಕಲ್ ಫಾರ್ ಓಕಲ್ ಎಂಬ ಧ್ಯೇಯದೊಂದಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೃಷಿ ಸೇರಿದಂತೆ ದೇಶಿಯ ಕೈಗಾರಿಕೆಗಳನ್ನು ಆರಂಭಿಸುವ ಯುವ ಜನತೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಬೆಳ್ತಂಗಡಿ ಮಿನಿ ವಿಧಾನಸೌಧ ಅವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕೊರೊನ ಮಧ್ಯೆ ಸರಳತೆಯಲ್ಲಿ 75ನೇ ಅಮೃತ ಮಹೋತ್ಸವನ್ನು ಆಚರಣೆ ಮಾಡುತ್ತಿದ್ದೇವೆ. ಮುಂಬರುವ ಸ್ವಾತಂತ್ರ್ಯದ ವರೆಗೆ ಪಂಚಾಯತಿ ಮಟ್ಟದಲ್ಲಿ ಜನಸೇವೆ ಮಾಡುವ ಸಂಕಲ್ಪ ತೊಟ್ಟಿದ್ದೇವೆ.
ಶಿವಾಜಿ ಮಹಾರಾಜ್ ಅವರ ಆಡಳಿತ ವೈಖರಿಯ ರೀತಿಯಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ನಡೆಸುತ್ತಿದ್ದಾರೆ. ಲೋಕಲ್ ಫಾರ್ ಓಕಲ್ ಎಂಬ ಕಲ್ಪನೆಯಡಿ ವಿದೇಶಿದಿಂದ ಆಮದು ಕಡಿಮೆಯಾಗಬೇಕು. ನಾವೇ ನಮ್ಮಲ್ಲಿ ವಸ್ತುಗಳನ್ನು ರಫ್ತು ಮಾಡುವಂತಹ ಸಾಧನೆ ಮಾಡಬೇಕು. ಆ ಮೂಲಕ ದೇಶ ವಿಶ್ವವಂದ್ಯವಾಗಬೇಕು ಎಂದರು.
ಉಜಿರೆಯಲ್ಲಿನ ನಿಂತಿಕಲ್ಲು ಎಂಬಲ್ಲಿ 100 ಎಕ್ರೆ ಜಾಗದಲ್ಲಿ ಕೈಗಾರಿಕಾ ವಲಯವಾಗಿ ಮಾಡಲಿದ್ದೇವೆ. ಬೆಳ್ತಂಗಡಿ ಅಭಿವೃದ್ಧಿ ನಿಟ್ಟಿನಲ್ಲಿ ಸಾವಿರಕ್ಕೂ ಅಧಿಕ ಕೋಟಿ ತರುವ ಕೆಲಸ ಮಾಡಲಾಗಿದೆ. ಪ್ರವಾಸೋದ್ಯಮ, ನೀರಾವರಿ ಮೊದಲಾದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಜಿಲ್ಲೆಯಲ್ಲೇ ಪ್ರಥಮವಾಗಿ 240 ಕೋ.ರೂ. ಏತ ನೀರಾವರಿ ಯೋಜನೆ, ಎರ್ಮಾಯಿ ಫಾಲ್ಸ್, ಶಿಶಿಲೇಶ್ವರ ದೇವಸ್ಥಾನ ಪ್ರವಾಸೋದ್ಯಮಕ್ಕೆ ಆದ್ಯತೆ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ತಾಲೂಕಿನ ಜನತೆ ಸಹಕಾರವಿರಲಿ ಎಂದು ಹೇಳಿದರು.
ಕೊಕ್ಕಡದ ಉಪ್ಪರಪಳಿಕೆ ಎಂಬಲ್ಲಿ ಹಾಳೆ ತಟ್ಟೆ ತಯಾರಿಕಾ ಸಂಸ್ಥೆಯನ್ನು ಹುಟ್ಟು ಹಾಕಿ ಯು.ಕೆ.ಮತ್ತು ಯರೋಪಿಗೆ ರಫ್ತುಮಾಡುತ್ತಿದೆ. 25 ರಿಂದ 100 ಜನರಿಗೆ ಉದ್ಯೋಗ ನೀಡುತ್ತಿದೆ. ಬಳೆಂಜದ ಅನಿಲ್ ಬಳೆಂಜ ಅವರು ವಿದೇಶಿ ಹಣ್ಣುಗಳನ್ನು ಇಲ್ಲಿ ಬೆಳೆದು ವಿದೇಶಕ್ಕೆ ರಫ್ತು ಮಾಡುತ್ತಿದ್ದಾರೆ. ಧರ್ಮಸ್ಥಳದ ಸಿರಿ ಸಂಸ್ಥೆ ಉತ್ಪನ್ನಗಳು ದೇಶವ್ಯಾಪಿ ಹರಡಿರುವುದು ನಮಗೆಲ್ಲ ಹೆಮ್ಮೆ. ನಮ್ಮ ಯುವ ಜನತೆ ದೇಶಿಯ ಉತ್ಪನ್ನ ತಯಾರಿಕೆಯನ್ನು ಸವಾಲಾಗಿ ತೆಗೆದುಕೊಂಡು ಸ್ವದೇಶಿ ನಿರ್ಮಿತ, ಉದ್ಯೋಗ ಸೃಷ್ಟಿಮಾಡುವ ನಿಟ್ಟಿನಲ್ಲಿ ದೇಶಕ್ಕೆ ನಾವು ಕೊಡುಗೆಯಾಗಿ ನೀಡಬೇಕು ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಮಹೇಶ್ ಜೆ. ಅವರು, ಸಾವಿರಾರು ದೇಶ ಭಕ್ತರ ಪ್ರಾಣರ್ಪಣೆಯಿಂದ, ಕೆಚ್ಚೆದೆಯ ಹೋರಾಟದಿಂದ ಬ್ರಿಟಿಷರಿಂದ ಬಿಡುಗಡೆಯಾಗಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿಯಿಂದ ಮುಕ್ತರಾಗಲು ಮಹನೀಯರು ಪ್ರಾಣತ್ಯಾಗ ಮಾಡಿದ್ದಾರೆ. ಇಂದು ದೇಶ ಕೊರೊನಾ ತುತ್ತಾಗಿ ಸಂಕಷ್ಟಕ್ಕೀಡಾಗಿದೆ. ಈ ಸಮಯದಲ್ಲಿ ವಾರಿಯರ್ ಗಳಾಗಿ ಹೋರಾಡಿದ ಎಲ್ಲರಿಗೂ ತಾಲೂಕಾಡಳಿತದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ವೃತ್ತ ನಿರೀಕ್ಷಕ ಶಿವಕುಮಾರ್, ನಿವೃತ್ತ ಸೇನಾಧಿಕಾರಿ ಎಂ.ಆರ್.ಜೈನ್, ತಾಲೂಕು ಆರೋಗ್ಯಧಿಕಾರಿ ಡಾ.ಕಲಾಮಧು, ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಲೋಕೋಪಯೋಗಿ ಇಲಾಖೆ ಎಇಇ ಶಿವಪ್ರಸಾದ್ ಅಜಿಲ, ಮೆಸ್ಕಾಂ ಎಇಇ ಶಿವಶಂಕರ್, ಅರೋಗ್ಯ ಇಲಾಖೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಸಹಕಾರ ಸಂಸ್ಥೆ ಅಧಿಕಾರಿ ಸುಕನ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವೇಣೂರು ಹಾಗೂ ವಾಣಿ ಶಾಲೆಯ ಶಿಕ್ಷಕರು ರಾಷ್ಟ್ರ ಗೀತೆ, ನಾಡ ಗೀತೆ ಹಾಗೂ ರೈತ ಗೀತೆ ಹಾಡಿದರು.
ತಾ.ಪಂ. ಇಒ ಕುಸುಮಾಧರ್ ಸ್ವಾಗತಿಸಿದರು. ಬಿಇಒ ವಿರೂಪಾಕ್ಷಪ್ಪ ವಂದಿಸಿದರು.
ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.