ನಮ್ಮೊಳಗಿನ ನಾಯಕತ್ವ ಗುಣ ಜಾಗೃತಗೊಳಿಸಿದರೆ ದೇಶ ಅಭಿವೃದ್ಧಿ ಪಥದತ್ತ: ಧ್ವಜಾರೋಹಣ ನೆರವೇರಿಸಿ ಕೇಂದ್ರ ಸರಕಾರದ ಕಾರ್ಪೋರೇಟ್ ವ್ಯವಹಾರಗಳ ಸಲಹಾ ಸಮಿತಿ ಸದಸ್ಯ ಡಾ. ಹರೀಶ್‌ಕೃಷ್ಣ ಸ್ವಾಮಿ ಹೇಳಿಕೆ: ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸೆ, ಯೋಗ ಚಿಕಿತ್ಸಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ:

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಾಯಕತ್ವ ಗುಣ, ಕರ್ತವ್ಯ, ಪ್ರೀತಿಯನ್ನು ನಾವೆಲ್ಲರೂ ಅಳವಡಿಸಬೇಕು. ನಮ್ಮೊಳಗಿನ ನಾಯಕತ್ವದ ಗುಣವನ್ನು ನಾವೆಲ್ಲರೂ ಜಾಗೃತಗೊಳಿಸಿದರೆ ದೇಶ ಅಭಿವೃದ್ಧಿಯ ಪಥದತ್ತ ಸಾಗುವ ಮೂಲಕ ಜಗತ್‌ವಂದ್ಯ ದೇಶ ಎನಿಸಿಕೊಳ್ಳುತ್ತದೆ ಎಂದು ಕೇಂದ್ರ ಸರಕಾರದ ಕಾರ್ಪೋರೇಟ್ ವ್ಯವಹಾರಗಳ ಸಲಹಾ ಸಮಿತಿ ಸದಸ್ಯ ಡಾ. ಹರೀಶ್‌ಕೃಷ್ಣ ಸ್ವಾಮಿ ಹೇಳಿದರು.

ಅವರು ಭಾನುವಾರ ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸಾಲಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣಗೈದು ಮಾತನಾಡಿದರು.

ಭಾರತದ ಅಭಿವೃದ್ಧಿಗೆ ಹೊಸ ದೃಷ್ಟಿಕೋನ ಪ್ರಧಾನಿ ನರೇಂದ್ರ ಮೋದಿಯವರು ತಂದಿದ್ದಾರೆ. ಸ್ವಾರ್ಥರಹಿತ ವ್ಯಕ್ತಿತ್ವವುಳ್ಳ ಅವರು ಭಾರತವನ್ನು ಹೇಗೆ ಔನತ್ಯಕ್ಕೇರಿಸಬೇಕೆಂಬ ಸ್ಪಷ್ಟ ನಿಲುವನ್ನು, ಕಲ್ಪನೆಯನ್ನು ಹೊಂದಿರುವುದನ್ನು ನಾನು ಹತ್ತಿರದಿಂದ ಕಂಡುಕೊಂಡಿದ್ದೇನೆ. ನಡೆ-ನುಡಿಯಲ್ಲಿ ವ್ಯತ್ಯಾಸವಿರದೆ ಆದರ್ಶ ಜೀವನ ನಡೆಸುವುದು, ಶಿಸ್ತು, ಪ್ರೀತಿ, ಶಾಂತಿಯಿಂದ ನಡೆದರೆ ಎಲ್ಲರ ಮನಗೆಲ್ಲಬಹುದು. ದೇಶ ಮೊದಲು, ಸೇವೆಯೇ ಧ್ಯೇಯ ಎನ್ನುವ ಅವರ ಮಂತ್ರವನ್ನು ಮೋದಿಯವರಲ್ಲಿದೆ. ವಿಶ್ವದ 200 ದೇಶಗಳು ಯೋಗ ದಿನಾಚರಣೆ ಆಚರಿಸುತ್ತಿವೆ. ರಶ್ಯಾದಲ್ಲಿ ಯೋಗಕ್ಕೆ ನಿರ್ಬಂಧ ಇತ್ತು ಅದು 2015ರಲ್ಲಿ ತೆಗೆದುಹಾಕಲಾಯಿತು. ಅಲಬಾಮಾದಲ್ಲಿ 27 ವರ್ಷಗಳ ನಂತರ ನಿರ್ಬಂಧವನ್ನು ತೆಗೆದುಹಾಕಲಾಯಿತು. ಈಗ ಯೋಗ ಜೀವನ ಧರ್ಮವಾಗಿದೆ ಎಂದು ಅವರು, ವಿಶ್ವದಲ್ಲಿ 98 ದೇಶಗಳು ಪ್ರಕೃತಿ ಚಿಕಿತ್ಸೆಯನ್ನು ಅನುಸರಿಸುತ್ತಿವೆ. ಇಲ್ಲಿನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಕುರಿತು ಸಂಶೋಧನೆ ನಡೆಸಲು ಯೋಗ್ಯವಾಗಿದೆ. ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಬದ್ಧತೆ, ಕಾರ್ಯದಕ್ಷತೆ ಎಂತಹದು ಎಂದು ಅರಿವಾಗುತ್ತದೆ. ಎಲ್ಲರಿಗೂ ಹೆಗ್ಗಡೆಯವರು ಮಾದರಿಯಾಗಿದ್ದಾರೆ ಎಂದರು.

ಉತ್ತರ ಪ್ರದೇಶ ದೇಶದಲ್ಲೇ ಅತಿ ಹೆಚ್ಚಿನ ಅಂದರೆ ಶೇ.25 ರಷ್ಟು ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಜ್ಯವಾಗಿದೆ. ಅಲ್ಲಿ ಪ್ರತಿವರ್ಷ 1.5ಲಕ್ಷ ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಹೀಗಾಗಿ ವಾರಣಾಸಿಯಲ್ಲಿ ಉತ್ಕೃಷ್ಟ ಮಟ್ಟದ ಕ್ಯಾನ್ಸರ್ ಆಸ್ಪತ್ರೆಯನ್ನು ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಗುರಿಯನ್ನು ಯೋಜನೆಯನ್ನು ಪ್ರಧಾನಿಯವರು ತೆರೆದಿಟ್ಟರು. ಕೇವಲ ಹತ್ತು ತಿಂಗಳಲ್ಲಿ ನಾಲ್ಕರಿಂದ ಐನೂರು ಕೋಟಿ ವೆಚ್ಚದಲ್ಲಿ 350 ಬೆಡ್ ಗಳಿರುವ ಆಸ್ಪತ್ರೆಯನ್ನು ಕಟ್ಟಲಾಯಿತು. ಸುಮಾರು ನಾಲ್ಕು ಸಾವಿರ ಮಂದಿ ಇದಕ್ಕಾಗಿ ಹಗಲಿರುಳು ಒಂದೇ ಕುಟುಂಬದಂತೆ ದುಡಿದರು. ಪ್ರಧಾನಿಯವರು ಅದಕ್ಕಾಗಿ ವಾರಣಾಸಿಯಲ್ಲಿಯೇ ಪಿ.ಎಂ.ಓ. ಕಚೇರಿ ತೆರೆದು ಪ್ರತಿ ವಾರ ನಿರ್ಮಾಣದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಪ್ರಧಾನಿಯವರ ಕಾರ್ಯದಕ್ಷತೆಗೆ ಇದು ಮಾದರಿಯಾಗಿದೆ ಎಂದರು.

ಶಾಂತಿವನ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಅವರು, ಯಾವುದೇ ಒಂದು ಕೆಲಸವು ಅವಿರತ ಪರಿಶ್ರಮ, ಗುರಿ, ಸಾಧನೆಯಿಂದ ಸಾಧಿಸಲು ಸಾಧ್ಯ. ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಠಿಯಿಂದ ನಿರ್ಮಾಣವಾದ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಮತ್ತು ಆಸ್ಪತ್ರೆ ದೇಶ ಹಾಗೂ ವಿದೇಶಗಳಲ್ಲಿ ಗುರುತಿಸಲ್ಪಟ್ಟಿದೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಕರ್ತವ್ಯ ನಿಷ್ಠೆ ಇನ್ನಷ್ಟು ಎತ್ತರಕ್ಕೇರಲಿ ಎಂದರು.

ಈ ಸಂದರ್ಭದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗದ ನಿದೇರ್ಶಕ ಡಾ| ಶಶಿಕಾಂತ್ ಜೈನ್, ಆಡಳಿತಾಧಿಕಾರಿ ಜಗನ್ನಾಥ ಯು., ಯೋಗ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ, ಸ್ಥಾನೀಯ ವೈದಾಧಿಕಾರಿ ಡಾ. ಶಶಿಕಿರಣ್ ಹೆಚ್.ಸಿ., ವ್ಯವಸ್ಥಾಪಕ ಸ್ವಸ್ತಿಕ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಹಾಗೂ ಸಾಧಕರು ಉಪಸ್ಥಿತರಿದ್ದರು. ಡಾ. ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!