75 ಫಲಾನುಭವಿಗಳಿಗೆ ವಿವಿಧ ದೇಸೀ ತಳಿ ತಳಿ ಹೆಣ್ಣು ಕರುಗಳ ಗೋದಾನ, ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶ: ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ

ಬೆಳ್ತಂಗಡಿ : ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂದರ್ಭ ಬೆಳ್ತಂಗಡಿ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ದೇಶಿಯ ವಿವಿಧ ತಳಿಗಳ ಹೆಣ್ಣು ಕರುಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿದ ಚಪ್ಪರದ ಒಳಗೆ ಕಟ್ಟಿ ಹಾಕಲಾಗಿತ್ತು. ಚಿಕ್ಕ ಹಸುಗಳ ಕಲರವದ ಜತೆಗೆ ಗೋ ಸಂರಕ್ಷಣೆಯ ಧ್ಯೇಯದೊಂದಿಗೆ 75ನೇ ಸ್ವಾತಂತ್ರ್ಯೋತ್ಸವ ಸವಿನೆನಪಿಗಾಗಿ ಸರಕಾರ ಮಾರ್ಗಸೂಚಿಯಂತೆ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ 75 ದೇಶಿ ತಳಿಯ ಹೆಣ್ಣು ಕರುಗಳನ್ನು 75ಮಂದಿ ರೈತ ಪಲಾನುಭವಿಗಳಿಗೆ ಗೋದಾನ ಮಾಡುವ ವಿಶಿಷ್ಟ ಕಾರ್ಯಕ್ರಮ ಸಾಕ್ಷಿಯಾಗಿತು.

ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಪಶು ಸಂಗೋಪನಾ ಇಲಾಖೆ ಆಯೋಜಿಸಿದ ಕಾರ್ಯಕ್ರಮ ಹೈನುಗಾರಿಕೆಗೆ ಉತ್ತೇಜನ ನೀಡುವ ಕಾರ್ಯಕ್ರಮವಾಗಿ ಮೂಡಿಬಂತು. ಸಂಪ್ರದಾಯದಂತೆ ಪ್ರತಿಯೊಂದು ಹೆಣ್ಣು ಕರುಗಳಿಗೆ ತಿಲಕವನ್ನು ಇಟ್ಟು, ಹಾರ ತೊಡಿಸಿ, ಶಾಲು ಹೊದಿಸಿ, ಆರತಿ ಬೆಳಗಿ ಗೋ ಪೂಜೆ ನೆರವೇರಿಸಲಾಯಿತು. ಬಳಿಕ 75 ಮಂದಿ ಫಲಾನುಭವಿಗೆ ಹೆಣ್ಣು ಕರುಗಳನ್ನು ಗೋದಾನದ ಮೂಲಕ ನೀಡಲಾಯಿತು. ಗೋದಾನವನ್ನು ಪಡೆದ ಫಲಾನುಭವಿಗಳ ಮೊಗದಲ್ಲಿ ಸಂತಸವಿದ್ದರೆ, ಗೋಪೂಜೆ ಹಾಗೂ ಗೋದಾನ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರ ಮೊಗದಲ್ಲಿ ಸಾರ್ಥ್ಯಕ್ಯದ ಮನೋಭಾವ ಎದ್ದು ಕಾಣುತ್ತಿತ್ತು.

ಗೋಪೂಜೆ ನೆರವೇರಿಸಿ, ಫಲಾನುಭವಿಗಳಿಗೆ ಗೋದಾನ ಹಸ್ತಾಂತರ ಮಾಡಿ ಮಾತನಾಡಿದ ಶಾಸಕ ಹರೀಶ್ ಪೂಂಜ ನಮ್ಮ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ, ನಮ್ಮ ತಾಲೂಕಿನಲ್ಲಿ ಒಟ್ಟು 75 ಸರಕಾರದ ಯೋಜನೆಗಳನ್ನು 75 ಫಲಾನುಭವಿಗಳ ಆಯ್ಕೆ ಮಾಡಿ ಈ ವರ್ಷ ಅಮೃತ ಮಹೋತ್ಸವದ ಸಂದರ್ಭ ಒಂದೊಂದು ಯೋಜನೆಗಳನ್ನು ಸಾರ್ವಜನಿಕರಿಗೆ ಕೊಡವಂತಹ ಕಾರ್ಯಕ್ರಮವನ್ನು ಅನುಷ್ಠಾನವನ್ನು ಮಾಡಿದ್ದೇವೆ. ಪಶು ಸಂಗೋಪನಾ ಇಲಾಖೆಯಿಂದ ಅಮೃತಸಿರಿ ಯೋಜನೆಯ ಮೂಲಕ ಮೊದಲ ಯೋಜನೆಯಾಗಿ ಇಂದು 75 ಮಂದಿಗೆ 75 ಹೆಣ್ಣು ಕರುಗಳನ್ನು ಗೋದಾನ ಮಾಡುವ ಮೂಲಕ ಆರಂಭಿಸಿದ್ದೇವೆ. ಸರಕಾರದ 75 ಯೋಜನೆಗಳು ಮುಂದಿನ ಸ್ವಾತಂತ್ರ್ಯದ ವರೆಗೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಬೇರಬೇರೆ ಇಲಾಕೆಯಿಂದ ಯೋಜನೆಗಳು ಅನುಷ್ಠಾನ ಆಗಲಿದೆ. ಇಂದಿನ ಗೋವುಗಳು ಲಕ್ಷ್ಮೀಯ ರೂಪದಲ್ಲಿ ಮನೆ ಬೆಳಗಲಿ. ಇದಕ್ಕೆ ಸಹಕಾರ ನೀಡಿದವರಿಗೆ ಅಭಿನಂದನೆಗಳು.

ಜಾನುವಾರು ಅಭಿವೃದ್ಧಿ ಅಧಿಕಾರಿ ಡಾ. ಜಯಕೀರ್ತಿ ಜೈನ್ ಮಾತನಾಡಿ, ಅಮೃತ ಸಿರಿ ಯೋಜನೆಯಲ್ಲಿ ಕೊಯಿಲ ಜಿಲ್ಲಾ ಜಾನುವಾರು ಕೇಂದ್ರದಿಂದ 12 ಹೆಣ್ಣು ಕರುಗಳನ್ನು ನೀಡಲಾಗಿದ್ದು, ಉಳಿದಂತೆ ಸೌತಡ್ಕ ಗೋಶಾಲೆಯಿಂದ 20 ಹಾಗೂ ತಾಲೂಕಿನ ಹಾಲು ಉತ್ಪಾದಕರ ಸಂಘದ ಸಹಕಾರದಿಂದ 43 ಹೆಣ್ಣು ಕರುಗಳು ಸಹಿತ ಅಜಾದಿ ಕಾ ಅಮೃತ್ ಮಹೋತ್ಸವ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರ ನೇತೃತ್ವದಲ್ಲಿ 75 ಹೆಣ್ಣು ಕರುಗಳನ್ನು 75 ಮಂದಿ ರೈತ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.

ಕೆ.ಎಂ.ಎಫ್ ನಿರ್ದೇಶಕ ಪದ್ಮನಾಭ ಅರ್ಕಜೆ, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ತಹಸೀಲ್ದಾರ್ ಮಹೇಶ್ ಜೆ., ತಾಪಂ ಇಒ ಕುಸುಮಾಧರ್, ವೃತ್ತ ನಿರೀಕ್ಷಕ ಶಿವಕುಮಾರ್, ತಾಲೂಕು ಆರೋಗ್ಯಧಿಕಾರಿ ಡಾ.ಕಲಾಮಧು, ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಲೋಕೋಪಯೋಗಿ ಇಲಾಖೆ ಎಇಇ ಶಿವಪ್ರಸಾದ್ ಅಜಿಲ, ಮೆಸ್ಕಾಂ ಎಇಇ ಶಿವಶಂಕರ್, ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಬಿಇಒ ವಿರೂಪಾಕ್ಷಪ್ಪ, ಸಮಾಜ ಕಲ್ಯಾಣಾಧಿಕಾರಿ ಹೇಮಚಂದ್ರ, ಸಹಕಾರ ಅಭಿವೃದ್ಧಿ ಅಧಿಕಾರಿ ಸುಕನ್ಯ, ಪಶುಸಂಗೋಪನಾ ಮುಖ್ಯ ಹಿರಿಯ ಆಡಳಿತಾಧಿಕಾರಿ ಡಾ. ಮಂಜು ನಾಯ್ಕ್, ಪಶು ವೈದಾಧಿಕಾರಿಗಳಾದ ಡಾ. ಯತೀಶ್, ಡಾ. ರವಿಕುಮಾರ್, ಡಾ. ವಿನಯ್ ಮೊದಲಾದವರು ಇದ್ದರು.

ಗೋಶಾಲೆಗೆ ಅನುದಾನ

ತಾಲೂಕಿನ ಐದು ಗೋಶಾಲೆಗಳಿಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಅನುದಾನ ಬಿಡುಗಡೆಗೊಂಡಿದ್ದು, ಅದರ ಮಂಜೂರಾತಿ ಆದೇಶ ಪ್ರತಿಯನ್ನು ಹಸ್ತಾಂತರಿಸಲಾಯಿತು. ಕಳೆಂಜ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಗೋಶಾಲೆ ರೂ.1,96,742 ಗಂಡಿಬಾಗಿಲು ಸಿಯೋನ್ ಆಶ್ರಮ ಗೋಶಾಲೆ ರೂ. 74,589, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಗೋಶಾಲೆ ರೂ.1,55,664 ಶ್ರೀ.ಧ.ಗ್ರಾ.ಯೋಜನೆ ಕಾಮಧೇನು ಗೋಶಾಲೆ ಧರ್ಮಸ್ಥಳ ರೂ.1,79,446 ಹಾಗೂ ಕಾವೇರಮ್ಮ ಅಮೃತಧಾರಾ ಗೋಸೇವಾ ಟ್ರಸ್ಟ್ ಗುಂಡೂರಿ ರೂ. 61,617 ಅನುದಾನದ ಮಂಜೂರಾತಿ ಆದೇಶ ಪತ್ರ ನೀಡಲಾಯಿತು.

error: Content is protected !!