ಬೆಳ್ತಂಗಡಿ: ಭಾರತ ಸ್ವಾತಂತ್ರ್ಯಗೊಂಡು ಅಮೃತ ಮಹೋತ್ಸವ ಸುಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಜನರಿಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಆಯೋಜಿಸಿದ ಆನ್‌ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಗೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.
ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್‌ನ ಏಪ್ಯಾ ಮುಖ್ಯಸ್ಥ ಡಾ. ಡಾ. ಮನೀಶ್ ವೈಷ್ಣವಿ ಅವರು ಭಾನುವಾರ ಬೆಳ್ತಂಗಡಿ ಶ್ರೀಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರಿಗೆ ಪ್ರಶಸ್ತಿ ಪತ್ರ, ಪದಕವನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಡಾ. ಮನೀಶ್ ವೈಷ್ಣವಿ ಅವರು, ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್‌ನ ಎಲ್ಲಾ ಷರತ್ತು, ನಿಯಮಗಳಿಗನುಸಾರವಾಗಿ ಕಾರ್ಯಕ್ರಮ ಮಾಡಲಾಗಿದೆ. ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಷರತ್ತುಗಳನ್ನು ಪಾಲಿಸಿಕೊಂಡು ತಾಲೂಕಿನ ಜನತೆ ೭೫ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆನ್‌ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ನಿಜಕ್ಕೂ ಶ್ಲಾಘನೀಯ.
ಆನ್‌ಲೈನ್‌ನಲ್ಲಿ ಅತಿ ದೊಡ್ಡ ದೇಶಭಕ್ತಿ ಗಾಯನ ಸ್ಪರ್ಧೆ ಆಗಿರುವುದು ಹೆಮ್ಮೆಯ ವಿಚಾರ. ಶಾಸಕ ಹರೀಶ್ ಪೂಂಜ ಅವರು ತನ್ನ ಹೆಸರನ್ನು ಮುನ್ನೆಲೆಗೆ ಹಾಗೂ ಪ್ರಚಾರಕ್ಕೆ ತರದೆ ಸಾರ್ವಜನಿಕ ಹೆಸರಲ್ಲಿ ಸ್ಪರ್ಧೆಯನ್ನು ನಡೆಸಿರುವುದು ನನಗೆ ಹೃದಯತುಂಬಿ ಬಂದಿದೆ. ಮೂರುಸಾವಿರಕ್ಕೂ ಹೆಚ್ಚು ವಿಡಿಯೋಗಳು ಬಂದಿರುವುದರಿಂದ ನಮ್ಮ ಗುರಿ ಸಾಧಿಸಿದಂತಾಗಿದೆ. ನಾವು ಬೆಳೆಯುವ ಜತೆಗೆ ನಮ್ಮವರನ್ನು ಬೆಳೆಸುವ ದೊಡ್ಡ ಗುಣ ಹೊಂದಿರುವ ಯೋಗ್ಯ ಹಾಗು ಚುರುಕಿನ ಡೈನಾಮಿಕ್ ನಾಯಕತ್ವ ಸಿಕ್ಕಿರುವುದು ಬೆಳ್ತಂಗಡಿಯ ಭಾಗ್ಯವಾಗಿದೆ. ಶಾಸಕರ ದೃಷ್ಟಿಕೋನ ಪ್ರಶಂಸನೀಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆನ್‌ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಗೆ ತಾಲೂಕಿನ ಜನರ ಸಹಿತ ರಾಜ್ಯ, ಹೊರ ರಾಜ್ಯದಿಂದ ಹಾಗೂ ವಿದೇಶದಿಂದ ಸ್ಪಂದನೆ ಸಿಕ್ಕಿದೆ. ಇದಕ್ಕಾಗಿ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿದ್ದು ತಾಲೂಕಿನ ಮಹಾಜನತೆಗೆ ಸಿಕ್ಕಿದ ಗೌರವವಾಗಿದೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ. ಇತಿಹಾಸಕ್ಕೆ ಸಾಕ್ಷಿಯಾದ ಎಲ್ಲಾ ಸ್ಪರ್ಧಿಗಳಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮದ ಸಂಯೋಜಕ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಸಿನೆಮಾ ನಿರ್ದೇಶಕ ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ವೇಣೂರು ವಂದಿಸಿದರು.
- ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 5000 ಕ್ಕೂ ಮಿಕ್ಕಿ ಜನರು ಸ್ಪರ್ಧಿಸಿದ್ದರು. ತಾಲೂಕಿನವರೇ ಆದ ಬೇರೆ ಬೇರೆ ಜಿಲ್ಲೆಗಳ, ರಾಜ್ಯಗಳ ಹಾಗೂ ವಿದೇಶದಿಂದ ಆನ್ ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಬೆಳಗಾವಿ, ಬೀದರ್, ಬೆಂಗಳೂರು, ಮೈಸೂರು ಮೊದಲಾದ ಜಿಲ್ಲೆಗಳಿಂದ, ಕಾಸರಗೋಡು, ಮಹರಾಷ್ಟ್ರ, ದೆಹಲಿ ಮೊದಲಾದ ಹೊರ ರಾಜ್ಯಗಳಿಂದ ಹಾಗೂ ವಿದೇಶದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
- ಬೆಳ್ತಂಗಡಿ ತಾಲೂಕಿನ 3500 ಜನರು ಅವರವರ ಮನೆಯಲ್ಲಿ ಆನ್ಲೈನ್ ಮೂಲಕ ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ವಿಶ್ವದಾಖಲೆಯ ಮನ್ನಣೆ ಪಡೆದಿದೆ.
- ವಯೋಮಿತಿಯ ಆಧಾರದಲ್ಲಿ ಐದು ಸ್ಪರ್ಧಾ ವಿಭಾಗವನ್ನು ಮಾಡಲಾಗಿದ್ದು, ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ವಿಭಾಗವನ್ನು ಆಯೋಜಿಸಲಾಗಿತ್ತು.
- ಆಗಸ್ಟ್ 25 ರಂದು ಸ್ಪರ್ಧೆಯ ಫಲಿತಾಂಶ ಪ್ರಕಟ. ಪ್ರಥಮ, ದ್ವಿತೀಯ ಬಹುಮಾನದ ಜತೆಗೆ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳನ್ನು ಗೌರವಿಸಲಾಗುವುದು.