ಕೋವಿಡ್-19 ಹಿನ್ನೆಲೆ, ಎಲ್ಲಾ ಉತ್ಸವಗಳನ್ನು ಕಳೆದ ವರ್ಷದ ಮಾದರಿಯಲ್ಲಿ ಒಂದೇ ದಿನಕ್ಕೆ ಸೀಮಿತ: ಶಾಸಕ ಹರೀಶ್ ಪೂಂಜ ಹೇಳಿಕೆ: ಬೆಳ್ತಂಗಡಿಯಲ್ಲಿ ವರಮಹಾಲಕ್ಷ್ಮೀ ವೃತಾಚರಣೆ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀಗಣೇಶೋತ್ಸವ ಸಮಿತಿ, ಶಾರದಾ ಪೂಜಾ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಗಳ ಸಮಾಲೋಚನಾ ಸಭೆ

 

ಬೆಳ್ತಂಗಡಿ: ಗಣೇಶೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶಾರದೋತ್ಸವ, ವರಮಹಾಲಕ್ಷ್ಮೀ ವೃತ ಮೊದಲಾದ ಹಿಂದೂ ಉತ್ಸವಗಳನ್ನು ಈ ವರ್ಷ ಕೋವಿಡ್ 19 ಕಾರಣದಿಂದ ಒಂದೇ ದಿನಕ್ಕೆ ಸೀಮಿತಗೊಳಿಸುವುದು ಉತ್ತಮ. ಪೆಂಡಾಲ್ ಬಳಸದೆ, ನಿಯಮಿತ ಸಂಖ್ಯೆ ಜನತೆ ಪಾಲ್ಗೊಂಡು ಜಿಲ್ಲಾಧಿಕಾರಿಗಳು ಸೂಚಿಸುವ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬೆಳ್ತಂಗಡಿ ಎಸ್.ಡಿ.ಎಂ. ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಅವರ ವರಮಹಾಲಕ್ಷ್ಮೀ ವೃತಾಚರಣೆ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀಗಣೇಶೋತ್ಸವ ಸಮಿತಿ, ಶಾರದಾ ಪೂಜಾ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಗಳ ಜೊತೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕೊರೋನಾ ತಡೆಗಟ್ಟುವ ಉದ್ದೇಶದಿಂದ ಎಲ್ಲಾ ಉತ್ಸವಗಳನ್ನು ಕಳೆದ ವರ್ಷದ ಮಾದರಿಯಲ್ಲಿಯೇ ಒಂದೇ ದಿನಕ್ಕೆ ಸೀಮಿತಗೊಳಿಸಲಾಗುವುದು. ಪೂಜೆಗೆ ಮಾತ್ರ ಅವಕಾಶ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ಮೆರವಣಿಗೆಗೆ, ಪೆಂಡಾಲ್ ಹಾಕಲು ಅವಕಾಶ ಇಲ್ಲ. ಅನ್ನ ಸಂತರ್ಪಣೆ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಲಿದೆ. ಕೊರೋನಾ ಇರಲಿ, ಇಲ್ಲದಿರಲಿ ಪ್ರತಿ ವರ್ಷ ಇದೇ ರೀತಿಯ ಸಭೆಗಳನ್ನು ನಡೆಸುತ್ತಾ ಬಂದಲ್ಲಿ ಎಲ್ಲಾ ಉತ್ಸವಗಳನ್ನು ಶಿಸ್ತಿನಲ್ಲಿ, ಏಕರೂಪದಲ್ಲಿ ನಡೆಸಲು ಸಾಧ್ಯವಾಗಲಿದೆ ಎಂದರು.

ಹಿಂದು ಸಮಾಜದ ಶ್ರದ್ಧಾ ಕಾರ್ಯ, ಧಾರ್ಮಿಕ ಪದ್ಧತಿ, ನಂಬಿಕೆಗಳನ್ನು ಉಳಿಸಿಕೊಂಡು ಸಂಪ್ರದಾಯ ನಿಲ್ಲದ ರೀತಿ, ಕೊರೊನಾ ನಿಯಮಕ್ಕೂ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಂಡು ಹೋಗುವ ಅನಿವಾರ್ಯತೆ ಇದೆ. ತಾಲೂಕಿನಲ್ಲಿ ಈ ರೀತಿ ಅಚ್ಚುಕಟ್ಟಾಗಿ ನಡೆಯಬೇಕೆಂದು ಸಾರ್ವಜನಿಕ ಅಭಿಪ್ರಾಯದ ಮೂಲಕ ಆಚರಣೆಗಳು ನಡೆಸುವ ಉದ್ದೇಶ ಇದಾಗಿದೆ. ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ನಿರ್ಣಯ ಕೈಗೊಳ್ಳೋಣ ಎಂದರು.

ಕೊರೋನಾ ಮಹಾಮಾರಿಯ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬರುವ ಉತ್ಸವಗಳನ್ನು ಜನತೆಯ ಆರೋಗ್ಯದ ಹಾಗೂ ಸರಕಾರದ ನಿಯಮಾವಳಿಗಳಂತೆ ನಡೆಸಬೇಕಾದ ‌ಅನಿವಾರ್ಯತೆಯಿದೆ ಎಂದರು.

ಕಡಿಮೆ ಜನಸಂಖ್ಯೆಯಲ್ಲಿ ಕಾರ್ಯಕ್ರಮ ಆಯೋಜನೆ, ವಿಗ್ರಹ ಇಡದೇ ಗಣಹೋಮ ಸಹಿತ ಧಾರ್ಮಿಕ ಕಾರ್ಯಕ್ರಮ, ಕೆಲವೆಡೆ ವಿಗ್ರಹ ಇರಿಸಿ ಸರಳ ರೀತಿಯಲ್ಲಿ ಧಾರ್ಮಿಕ‌ ಕಾರ್ಯಕ್ರಮ, ಮೆರವಣಿಗೆ ನಡೆಸದೇ ವಿಸರ್ಜನೆ, ಸರಕಾರ ಕೋವಿಡ್ ಮಾರ್ಗಸೂಚಿಯಂತೆ ಸೀಮಿತ ಜನಕ್ಕೆ ಅವಕಾಶ, ಧಾರ್ಮಿಕ ಹಾಗೂ ಪರಂಪರೆಗೆ ಧಕ್ಕೆ ಬಾರದಂತೆ ಕಾರ್ಯಕ್ರಮ ಆಯೋಜನೆ ಮೊದಲಾದ ವಿಚಾರಗಳ ಕುರಿತು ಆಗಮಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿ.ಹಿಂ.ಪ. ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರ. ಕಾರ್ಯದರ್ಶಿ ಶ್ರೀನಿವಾಸ ಧರ್ಮಸ್ಥಳ, ಸಹಕಾರ ಭಾರತಿ ಪ್ರ. ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಹಾಗೂ 81 ಗ್ರಾಮಗಳಿಂದ ಆಗಮಿಸಿದ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!