ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾಶವೇಶದಲ್ಲಿ ಮಾತನಾಡಿದ ಅವರು, ತಾವು ಯಾರೂ ಅನ್ಯತಾ ಭಾವಿಸಬಾರದು, ನಾನು ನಿಮ್ಮೆಲ್ಲರ ಅಪ್ಪಣೆ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. 75 ವರ್ಷ ದಾಟಿದ ಬಳಿವೂ ನನಗೆ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ಶಬ್ದಗಳಲ್ಲಿ ಧನ್ಯವಾದ ಹೇಳಲು ಆಗುವುದಿಲ್ಲ ಎಂದರು.
ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದ ಯಾರಿಗೂ ಅಧಿಕಾರ ನಡೆಸಲು ಅವಕಾಶ ಇಲ್ಲ. ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನನ್ನ ಮೇಲಿನ ಪ್ರೀತಿ, ವಾತ್ಸಲ್ಯದಿಂದ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ್ದಾರೆ ಎಂದು ಬಿಎಸ್ವೈ ಹೇಳಿದರು.
ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲದ ಸಮಯದಲ್ಲಿ ನಾನು ಏಕಾಂಗಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದೆ. ನಾನು ಮತ್ತು ಬೆಳ್ತಂಗಡಿಯ ವಸಂತ ಬಂಗೇರ ಅವರು ವಿಧಾನಸಭೆಗೆ ಆಯ್ಕೆಯಾದಾಗ, ವಸಂತ ಬಂಗೇರ ಅವರು ಹಠಾತ್ ಪಕ್ಷಕ್ಕೆ ಕೈಕೊಟ್ಟು ಹೊರ ಹೋದರು. ಆ ವೇಳೆ ನಾನು ಎದೆಗುಂದಲಿಲ್ಲ. ಹಿಂದಿರುಗಿ ನೋಡದೆ, ಒಬ್ಬನೇ ಎಂಬುವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಏಕಾಂಗಿ ಹೋರಾಟ ಮಾಡಿದೆ. ಆ ಮೂಲಕ ಇಂದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲನಾದೆ ಎಂದು ಸಿಎಂ ಹೇಳಿದರು. ನನ್ನ ಪಕ್ಷದ ಸೇವೆ ಗಮನಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವನಾಗು ಅಂದಿದ್ದರು. ಆದರೆ, ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು ಎಂದು ಅದನ್ನು ನಿರಾಕರಿಸಿದೆ ಎಂದು ಸಿಎಂ ಭಾವುಕರಾದರು.