ಚಹಾ, ತಿಂಡಿ, ಊಟ, ವಾಹನ‌ ಭತ್ಯೆ ಖರ್ಚು ಸೇರಿಸಿ ಶಾಸಕ ಹರೀಶ್ ಪೂಂಜರಿಂದ ಕೋಟಿ ರೂಪಾಯಿ ಲೆಕ್ಕ!: ರಾಜ್ಯ ಯೋಜನೆ, ಉದ್ಯೋಗ ಖಾತ್ರಿ, ಜಿ.ಪಂ., ತಾ.ಪಂ. ಅನುದಾನಗಳೂ ಸೇರಿವೆ ಪಟ್ಟಿಯಲ್ಲಿ!: ಸುಳ್ಳು ಲೆಕ್ಕದ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧ, ಇಲ್ಲವಾದಲ್ಲಿ ಶಾಸಕರು ಬಹಿರಂಗ ಕ್ಷಮೆಕೇಳಲಿ ಮಾಜಿ ಶಾಸಕ ವಸಂತ ಬಂಗೇರ ಸವಾಲು:

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು 3 ವರ್ಷಗಳಲ್ಲಿ ಕ್ಷೇತ್ರಕ್ಕೆ 833.69 ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳಿದ್ದರು, ಈ ಬಗ್ಗೆ ದಾಖಲೆ ನೀಡಿದರೆ ಸಾರ್ವಜನಿಕವಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದ್ದೆ. ಆದರೆ ಶಾಸಕರು ಸ್ಥಳೀಯ ಪತ್ರಿಕೆಯೊಂದರಲ್ಲಿ 20 ಇಲಾಖೆಗಳ ಮುಖ್ಯಸ್ಥರು ಅನುದಾನದ ಬಗ್ಗೆ ನೀಡಿದ ಕವರಿಂಗ್ ಲೆಟರ್ ಪ್ರಕಟಿಸಿದ್ದರು. ಆದರೆ ಎಲ್ಲಾ ದಾಖಲೆ ಪರಿಶೀಲಿಸಿದಾಗ ಶಾಸಕರು ಕೊಟ್ಟಿರುವ 20 ಇಲಾಖೆಗಳ ಲೆಕ್ಕದಲ್ಲಿ ಹೆಚ್ಚಿನ ಅನುದಾನಗಳು ಶಾಸಕರ ವಿಶೇಷ ಅನುದಾನವಲ್ಲ. ವಾರ್ಷಿಕವಾಗಿ ಇಲಾಖೆಗಳಿಗೆ ಸರಕಾರದಿಂದ ಬರುವ ನಿಯತ ಅನುದಾನಗಳು. ಕೆಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸಂಬಳ, ಗ್ರಾಮ ಪಂಚಾಯತ್‌ಗಳು ಅನುಷ್ಠಾನಗೊಳಿಸಿದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಪಾವತಿಯ ಲೆಕ್ಕ, ಕೆಲವೊಂದು ಇಲಾಖೆಗಳಲ್ಲಿ ವ್ಯಯಿಸಿದ ವಾಹನ ಭತ್ಯೆ, ಮೀಟಿಂಗ್ ಸಂದರ್ಭದಲ್ಲಿ ತರಿಸಿದ ಚಹಾ, ತಿಂಡಿ, ಊಟ, ಉಪಹಾರದ ಖರ್ಚು ವೆಚ್ಚಗಳೂ ಈ ಲೆಕ್ಕದಲ್ಲಿ ಸೇರಿವೆ. ಉದಾಹರಣೆಗೆ ತೋಟಗಾರಿಕೆ, ಕೃಷಿ ಇಲಾಖೆಯ ಲೆಕ್ಕದಲ್ಲಿ ಅಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸಂಬಳ ಸೇರಿದೆ. ರೈತರಿಗೆ ತರಬೇತಿ ನೀಡಿದ ಬಾಬ್ತು ಉಪಹಾರ, ರೈತರ ಅಧ್ಯಯನ ಪ್ರವಾಸದ ಖರ್ಚು ವೆಚ್ಚವನ್ನೂ ಈ ಲೆಕ್ಕದಲ್ಲಿ ಸೇರಿಸಿರುವುದು ಹಾಸ್ಯಾಸ್ಪದ. ಪತ್ರಕರ್ತರ ಸಮಕ್ಷಮ ಶಾಸಕರು ನಿಗದಿಗೊಳಿಸಿದ ದಿನ ಅಧಿಕಾರಿಗಳೊಂದಿಗೆ ಎಲ್ಲಿಗೆ ಚರ್ಚೆಗೆ ಆಹ್ವಾನಿಸಿದರೂ ಸಮರ್ಪಕ ದಾಖಲಾತಿಗಳೊಂದಿಗೆ ಚರ್ಚೆಗೆ ಹಾಜರಾಗಲು ನಾನು ಸಿದ್ಧ. ಸುಳ್ಳು ಲೆಕ್ಕ ನೀಡಿದ್ದು ಒಪ್ಪಿಕೊಂಡಿದ್ದೇ ಆದಲ್ಲಿ, ಶಾಸಕ ಹರೀಶ್ ಪೂಂಜ ಬಹಿರಂಗ ಕ್ಷಮೆಕೇಳಲಿ ಎಂದು ಮಾಜಿ ಶಾಸಕ ವಸಂತ ಬಂಗೇರ ಸವಾಲು ಹಾಕಿದರು.

ಅವರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕರು ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅನುದಾನಗಳ ಕುರಿತು ದಾಖಲಾತಿಗಳೊಂದಿಗೆ ಸಮಗ್ರ ವಿವರ ನೀಡಿದರು.
ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ನಾನು ಶಾಸಕನಾಗಿದ್ದ ಸಂದರ್ಭ ಮಂಜೂರಾದ ಕಾಮಗಾರಿಗಳ ಮೊತ್ತವೂ ಸೇರಿದೆ. ಶಾಸಕರು ಕೊಟ್ಟ ಲೆಕ್ಕದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಹಾಲಿ ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್‌ಕುಮಾರ್ ಅವರ ಅನುದಾನಗಳೂ ಸೇರಿವೆ. ಕೆಲ ಲೆಕ್ಕವನ್ನು ಎರಡೆರಡು ಇಲಾಖೆಗಳ ಕಾಮಗಾರಿಗಳ ಪಟ್ಟಿಯಲ್ಲಿ ತೋರಿಸಿ ಜನತೆಗೆ ತಪ್ಪು ಮಾಹಿತಿ ನೀಡಲಾಗಿದೆ. ಪಟ್ಟಣ ಪಂಚಾಯತ್‌ಗೆ ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾದ 10 ಕೋಟಿ ರೂ. ಅನುದಾನವನ್ನು ಕೆ.ಆರ್.ಐ.ಡಿ.ಎಲ್. ಲೆಕ್ಕದಲ್ಲೂ ತೋರಿಸಲಾಗಿದೆ, ಸಮಾಜ ಕಲ್ಯಾಣ ಇಲಾಖೆಗೆ ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾದ 5 ಕೋಟಿ ರೂ. ಅನುದಾನ ಕೆ.ಆರ್.ಐ.ಡಿ.ಎಲ್. ಲೆಕ್ಕದಲ್ಲೂ ತೋರಿಸಲಾಗಿದೆ. ಕಂದಾಯ ಇಲಾಖೆಗೆ ಈ ಭಾರಿ ಮಂಜೂರಾದ 35 ಲಕ್ಷ ರೂ. ಅನುದಾನವನ್ನು ನಿರ್ಮಿತಿ ಕೇಂದ್ರದ ಲೆಕ್ಕದಲ್ಲೂ ತೋರಿಸಲಾಗಿದೆ. ದಾಖಲೆಗಳು ನನ್ನ ಬಳಿ ಇದ್ದು ಶಾಸಕ ಹರೀಶ್ ಪೂಂಜ ಅಪೇಕ್ಷಿಸಿದಲ್ಲಿ ಪ್ರತಿಗಳನ್ನು ಅವರ ಕಛೇರಿಗೆ ತಲುಪಿಸಲು ಹಾಗೂ ಸಾರ್ವಜನಿಕರು ಅಪೇಕ್ಷಿಸಿದಲ್ಲಿ ನಕಲು ಪ್ರತಿ ನೀಡಲು ಬದ್ಧನಾಗಿದ್ದೇನೆ. ಒಂದು ವೇಳೆ‌ 833.69 ಕೋಟಿ ರೂ.ಗಳ ಅನುದಾನ ಅವರೇ ತರಿಸಿದ್ದು ಎನ್ನುವ ಬಗ್ಗೆ ದಾಖಲೆಗಳನ್ನು ನೀಡಿದಲ್ಲಿ ಅಲ್ಲಿಯೇ ಅವರನ್ನು ಅಭಿನಂದಿಸಲು ಬದ್ದನಾಗಿದ್ದೇನೆ ಎಂದರು.

ಶಾಸಕರು ಒಟ್ಟು 833.69 ಕೋಟಿ ರೂ. ಅನುದಾನ ತಮ್ಮ ಮೂಲಕ ತಾಲೂಕಿಗೆ ಬಂದಿದೆ ಎನ್ನುತ್ತಿದ್ದಾರೆ. ಆದರೆ  ಇದರಲ್ಲಿ 168.17 ಕೋಟಿ ರೂ. ನಾನು ಶಾಸಕನಾಗಿದ್ದ ಸಂದರ್ಭ ಮಂಜೂರುಗೊಂಡ ಅನುದಾನಗಳು. ಉಳಿದಂತೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರು, ಮಳೆ ಹಾನಿ ದುರಸ್ಥಿ, ತಾಲೂಕು ಪಂಚಾಯತ್, ಜಿಲ್ಲಾಪಂಚಾಯತ್, ಪಟ್ಟಣಪಂಚಾಯತ್ ಶಾಸನಬದ್ಧ ಅನುದಾನ, ವಾರ್ಷಿಕವಾಗಿ ಸರಕಾರಿ ಇಲಾಖೆಗಳಿಗೆ ಬಿಡುಗಡೆಯಾಗುವ ಮೊತ್ತ ಸೇರಿ ಒಟ್ಟು 200.41 ಕೋಟಿ ರೂ. ಇತರ ಮೊತ್ತಗಳು ಇವೆ. ಕೆಲವು ಕಡೆ ಎರಡೆರಡು ಬಾರಿ ಲೆಕ್ಕ ನಮೂದಿಸಲಾಗಿದೆ. ಆದ್ದರಿಂದ ಕೇವಲ 455.76 ಕೋಟಿ ರೂ.ಗಳು ಮಾತ್ರ ಶಾಸಕರು ತಾಲೂಕಿಗೆ ತರಿಸಿರುವ ಅನುದಾನವಾಗಿದೆ ಎಂದರು.
ಇಲಾಖಾವಾರು ಪ್ರತ್ಯೇಕ ವಿವರಗಳನ್ನು ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ ಹಾಗೂ ನ್ಯಾಯವಾದಿ ಮನೋಹರ ಕುಮಾರ್ ಮಂಡಿಸಿದ್ದು, ವಿವರಣೆ ಇಂತಿದೆ.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 156.50 ಕೋಟಿ ರೂ. ಬಿಡುಗಡೆಯಾಗಿರುವುದಾಗಿ ತಿಳಿಸಲಾಗಿದೆ. ಇದರಲ್ಲಿ ಸುಮಾರು 42.62 ಕೋಟಿ ರೂ. ಅನುದಾನ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಶಾಸಕತ್ವದ ಅವಧಿಯಲ್ಲಿ ಮಂಜೂರಾಗಿದೆ. ಇದರ ವಿವರಣೆಯು ಲೋಕೋಪಯೋಗಿ ಇಲಾಖೆಯವರು ನೀಡಿದ ನಮೂನೆ-3 ರಲ್ಲಿ ಇದ್ದು, 113.88 ಕೋಟಿ ರೂ. ಅನುದಾನ ಶಾಸಕ ಹರೀಶ್ ಪೂಂಜಾ ಅವರ ಅವಧಿಯಲ್ಲಿ ಮಂಜೂರಾಗಿದೆ ಇದರಲ್ಲಿ ಮಳೆಹಾನಿ ಅನುದಾನವೂ ಸೇರಿದೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಸಂಬಂಧಿಸಿದ 57 ಕೋಟಿ ರೂ. ಲೆಕ್ಕದಲಿ, 11 ಕೋಟಿ ರೂ. ಅನುದಾನ ಶಾಸಕ ಹರೀಶ್ ಪೂಂಜಾ ಅವರು ಬಿಡುಗಡೆಗೊಳಿಸಿದ್ದು. ಉಳಿದ 46 ಕೋಟಿ ರೂ. ಅನುದಾನ ಜಿ.ಪಂ/ತಾ.ಪಂ. ಆಡಳಿತ ಮಂಡಳಿಗೆ ನಿಯತವಾಗಿ ಬರುವ ಅನುದಾನವಾಗಿದೆ.

ಜಾಹೀರಾತಿನಲ್ಲಿ ಪ್ರಕಟಿಸಿದ ಕೆ.ಆರ್.ಆರ್,ಡಿ.ಎ. ಪಿ. ಎಂ. ಜಿ. ಎಸ್ ವೈ) ಇಲಾಖೆಗೆ ಸಂಬಂಧಿಸಿದ‌ 118.65 ಕೋಟಿ ರೂ. ಅನುದಾನದಲ್ಲಿ ಸುಮಾರು 23.29 ಕೊಟಿ ರೂ. ಮಾಜಿ ಶಾಸಕ ಕೆ. ವಸಂತ ಬಂಗೇರ ಶಾಸಕತ್ವದ ಅವಧಿಯಲ್ಲಿ ಮಂಜೂರಾದ ಅನುದಾನವಾಗಿದೆ. ಮಂಗಳೂರು ಯೋಜನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿದ ಕಾಮಗಾರಿಗಳ ವಿವರ ಇಂತಿವೆ. ಕೆ.ಎಸ್ 11-58 ಪಾಂಗಳದಿಂದ ಎಕ್ಕ ವರೆಗೆ ಸೇತುವೆ ನಿರ್ಮಾಣ 3.30 ಕೋಟಿ ರೂ., ಕೆ.ಎಸ್. 11-59 ಅಂಗರಕರಿಯ ಆರಂಬೋಡಿಯಿಂದ ಮುಡ್ಡಾಡಿ ವರೆಗೆ ರಸ್ತೆ ಅಭಿವೃದ್ಧಿ 4 ಕೋಟಿ ರೂ., ಕೆ.ಎಸ್. 11-59 ಕುದ್ರಡ್ಕದಿಂದ ಪಾಲೇದುವರೆಗೆ ರಸ್ತೆ ಅಭಿವೃದ್ಧಿ 4 ಕೋಟಿ ರೂ., ಕೆ.ಎಸ್. 11-60 ಪೊಯ್ಯದಿಂದ ಉಳಿವರೆಗೆ ರಸ್ತೆ ಅಭಿವೃದ್ಧಿ 3 ಕೋಟಿ ರೂ., ಕೆ.ಎಸ್. 11-60 ಮೈರೊಲ್‌ತ್ತಡ್ಕದಿಂದ ಪುನರಡ್ಕವರೆಗೆ ರಸ್ತೆ ಅಭಿವೃದ್ಧಿ 2 ಕೋಟಿ ರೂ., ಕೆ.ಎಸ್. 11-62 ಕಡೆಕಾರಿನಿಂದ ಬೊಲ್ಲಕುಮೇರು ಅರಸುಕಟ್ಟೆವರೆಗೆ ರಸ್ತೆ ಅಭಿವೃದ್ಧಿ 4.99 ಕೋಟಿ ರೂ., ಕೆ.ಎಸ್. 11-66 ಕಡೆಕಾರು ದಿಂದ ಬೊಲ್ಲಕುಮೇರು ಅರಸುಕಟ್ಟೆವರೆಗೆ ರಸ್ತೆ ಅಭಿವೃದ್ಧಿ- 2 ಕೊಟಿ ರೂ.. ಮಂಜೂರಾಗಿದೆ. 65.56 ಕೋಟಿ ರೂ. ಅನುದಾನ ಶಾಸಕ ಹರೀಶ್ ಪೂಂಜಾ ಅವರ ಅವಧಿಯಲ್ಲಿ ಮಂಜೂರಾಗಿದೆ. 29.89 ಕೋಟಿ ರೂ. ಅನುದಾನ ಮಳೆ ಹಾನಿ ದುರಸ್ತಿ ಹಾಗೂ ಅಭಿವೃಧ್ದಿ ಕಾಮಗಾರಿಯ ಅನುದಾನಗಳಾಗಿದ್ದು, ನಿಯತ ಅನುದಾನವಾಗಿವೆ.

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದ 29.11 ಕೋಟಿ ರೂ. ಲೆಕ್ಕದಲ್ಲಿ 28.47 ಕೋಟಿ ರೂ. ಜಿಲ್ಲಾ ಪಂಚಾಯತ್ ಆಡಳಿತ ಮಂಡಳಿಗೆ ಸರಕಾರದಿಂದ ನಿಯತವಾಗಿ ಬರುವ ಅನುದಾನವಾಗಿದೆ.‌ 63.50 ಲಕ್ಷ ರೂ. ಅನುದಾನ ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿಗೆ ಬಂದ ಅನುದಾನವಾಗಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಗೆ ಸಂಬಂಧಿಸಿದ 129.10 ಕೋಟಿ ರೂ. ಅನುದಾನ ಶಾಸಕ ಹರೀಶ್ ಪೂಂಜಾ ಅವರು ತರಿಸಿದ ಅನುದಾನವಾಗಿದೆ.

ನಿರ್ಮಿತಿ ಕೇಂದ್ರ ಎಂಬ ಏಜೆನ್ಸಿಗೆ ಸಂಬಂಧಿಸಿದ 11.67 ಕೋಟಿ ರೂ. ಅನುದಾನ ಶಾಸಕರ ಅವಧಿಯದಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಕಂದಾಯ ಇಲಾಖೆಯ ಲೆಕ್ಕದಲ್ಲಿ ನೀಡಿದ 35 ಲಕ್ಷ ರೂ. ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಲೆಕ್ಕದಲ್ಲಿ ನೀಡಿದ 6.80 ಕೋಟಿ ರೂ. ಅನುದಾನ ಮತ್ತೊಮ್ಮೆ ಲೆಕ್ಕದಲ್ಲಿ ಸೇರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಭಾಗಶಃ ಕಾಮಗಾರಿಗಳು ಇದರಲ್ಲಿ ಸೇರಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ ಭಾಗಶಃ ಅನುದಾನ ಇದರಲ್ಲಿ ಸೇರಿರುತ್ತವೆ.

ಕೆ.ಆರ್.ಐ.ಡಿ.ಎಲ್ ಏಜೆನ್ಸಿಯ‌ 75.18 ಕೋಟಿ ರೂ. ಲೆಕ್ಕದಲ್ಲಿ ಸುಮಾರು 37.68 ಕೋಟಿ ರೂ. ಅನುದಾನ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಅವಧಿಯಲ್ಲಿ ಮಂಜೂರಾಗಿದೆ. ಇದರಲ್ಲಿ ಸುಮಾರು 1 ಕೋಟಿ 1 ಲಕ್ಷದ 50 ಸಾವಿರ ರೂಪಾಯಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಅನುದಾನ, ಸುಮಾರು 30.50 ಲಕ್ಷ ರೂ. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ಅನುದಾನವಾಗಿದೆ. 36.18 ಕೋಟಿ ರೂ. ಶಾಸಕ ಹರೀಶ್ ಪೂಂಜಾ ಅವರ ಅನುದಾನವಾಗಿದೆ.
ಕೆ.ಆರ್.ಐ.ಡಿ.ಎಲ್. ಮಾಜಿ ಶಾಸಕ ವಸಂತ ಬಂಗೇರರ ಅವಧಿಯ ಗರ್ಡಾಡಿ, ಮಾಲಾಡಿ, ಕುಕ್ಕೇಡಿ, ಪಿಲ್ಯ, ತೆಕ್ಕಾರು, ಹೊಸಂಗಡಿ, ಬಳಂಜ, ನಾಲ್ಕೂರು, ಪಡಂಗಡಿ ಮತ್ತು ಶಿಶಿಲ ಗ್ರಾಮಗಳಿಗೆ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ ಕಾಮಗಾರಿಗಳೂ ಇವೆ. ನಬಾರ್ಡ್ ಅನುದಾನದಲ್ಲಿ ಕೈಗೊತ್ತಿಕೊಂಡ ಬಹುತೇಕ ಕಾಮಗಾರಿಗಳು ಮಾಜಿ ಶಾಸಕರ ಅವಧಿಯಲ್ಲಿ ಮಂಜೂರಾದ ಅನುದಾನಗಳು. ಸಮಾಜ ಕಲ್ಯಾಣ ಇಲಾಖೆಯ ಭಾಗಶಃ ಕಾಮಗಾರಿಗಳು ಇದರಲ್ಲಿ ಸೇರಿವೆ. ಸಮಾಜ ಕಲ್ಯಾಣ ಇಲಾಖೆಯ 5 ಕೋಟಿ ರೂ. ಅನುದಾನವೂ ಕೆ.ಆರ್.ಐ.ಡಿ.ಎಲ್. ಲೆಕ್ಕ ಶೀರ್ಷಿಕೆಯಲ್ಲಿ ಸೇರಿದೆ. ಕರಾವಳಿ ಅಭಿವೃಧ್ದಿ ಪ್ರಾಧಿಕಾರಕ್ಕೆ ಸಂಬಂಧಿಸಿದ 2017ಕ್ಕಿಂತ ಹಿಂದಿನ ಸಾಲಿನ ಅನುದಾನವೂ ಇದರಲ್ಲಿ ಸೇರಿದೆ.

15.57 ಕೋಟಿ ರೂ. ಲೆಕ್ಕ ನೀಡಲಾಗಿದ್ದು, ಇದರಲ್ಲಿ ಕೇವಲ 5 ಲಕ್ಷ ರೂ. ಶಾಸಕ ಹರೀಶ್ ಪೂಂಜಾ ಅವರ ಶಿಫಾರಸ್ಸಿನ ಮೇರೆಗೆ ಎಂ. ಆರ್. ಪಿ. ಎಲ್ ಸಂಸ್ಥೆ ವಿಶೇಷ ಅನುದಾನ
ಬಿಡುಗಡೆಗೊಳಿಸಿದ್ದಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಆಡಳಿತ ಮಂಡಳಿಗೆ ಬರುವ ಅನುದಾನಗಳೂ ಸೇರಿವೆ. ರಾಜ್ಯಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಪಂಚಾಯತ್ ಮಟ್ಟದ ಶಾಲೆಗಳ ಆವರಣ ಗೋಡೆ ಕಾಮಗಾರಿಗಳ ಬಾಬ್ತು ಪಾವತಿಸಿದ ದಿನಗೂಲಿ ಮೊತ್ತವನ್ನೂ ಸೇರಿಸಲಾಗಿದೆ. ಇದು ಶಾಸಕರಿಂದ ಮಂಜೂರಾದ ಅನುದಾನವಲ್ಲ, ಬದಲಾಗಿ ಸರಾಕರದಿಂದ ನಿಯತವಾಗಿ ಬರುವ ಅನುದಾನಗಳಾವೆ.

ಪೌರಾಡಳಿತ ಇಲಾಖೆಗೆ ಸಂಬಂಧಿಸಿದ 23.89 ಕೋಟಿ ರೂ. ವೆಚ್ಚದ ಲೆಕ್ಕದಲ್ಲಿ ಸುಮಾರು 10 ಕೋಟಿ ರೂ. ಅನುದಾನ ಮಾಜಿ ಶಾಸಕ ವಸಂತ ಬಂಗೇರ ಅವರ ಅವಧಿಯಲ್ಲಿ ಎಫ್.ಎಸ್.ಸಿ ವಿಶೇಷ ಯೋಜನೆಯಡಿ ಮಂಜೂರಾದ ಅನುದಾನವಾಗಿದೆ. ಕಾಮಗಾರಿಗಳು ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ 2017-18ನೇ ಸಾಲಿನ ಸಾಮಾನ್ಯ ಸಭೆಯ ನಿರ್ಣಯದಂತೆ ಕಾಮಗಾರಿಗಳಾಗಿವೆ. ಉಳಿದ 13.89 ಕೋಟಿ ರೂ. ಅನುದಾನ ಸರಕಾರದಿಂದ ಪಟ್ಟಣ ಪಂಚಾಯತ್ ಆಡಳಿತ ಮಂಡಳಿಗೆ ಬರುವ ನಿಯತ ಅನುದಾನಗಳು. ಅಂದರೆ ಪಟ್ಟಣ ಪಂಚಾಯತ್ ಆಡಳಿತ ಮಂಡಳಿಯ ವಿವೇಚನೆಯಂತೆ ವಿನಿಯೋಗಿಸಬಹುದಾದ ಅನುದಾನವಾಗಿದೆ. ಇದು ಅನುದಾನವು ಹಾಲಿ ಶಾಸಕ ಹರೀಶ್ ಪೂಂಜ ಅವರು ತರಿಸಿದ ವಿಶೇಷ ಅನುದಾನವಲ್ಲ.

ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ 79.15 ಕೋಟಿ ರೂ. ಲೆಕ್ಕದಲ್ಲಿ ರೂ. 34.10 ಕೋಟಿ ರೂ. ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿ ತಾಲೂಕಿನಾದ್ಯಂತ ವಿದ್ಯುತ್ ಪರಿವರ್ತಕಗಳ ಪರಿಕರಗಳಿಗಾಗಿ ತರಿಸಿದ ಅನುದಾನವಾಗಿದೆ. 45.5 ಕೋಟಿ ರೂ. ಮೆಸ್ಕಾಂ ಇಲಾಖೆಯಲ್ಲಿ ಗಾಳಿ, ಮಳೆಗೆ ಕಂಬ ತಂತಿಗಳು ಉರುಳಿದಲ್ಲಿ ತುರ್ತು ಕಾಮಗಾರಿಗಳಿಗಾಗಿ, ವಿವಿಧ ಅಭಿವೃಧ್ದಿ ನಿಗಮದಿಂದ ಮಂಜೂರಾದ ವೈಯುಕ್ತಿಕ ಫಲಾನುಭವಿಗಳಿಗೆ ಆದ್ಯತೆ ನೆಲೆಯಲ್ಲಿ ಕೃಷಿ ನೀರಾವರಿ ಪಂಪ್ ಸೆಟ್‌ಗಳಿಗಾಗಿ ಬರುವ ನಿಯತ ಅನುದಾನವಾಗಿದೆ. ಇದು ಶಾಸಕರ ಮುತುವರ್ಜಿಯಿಂದ ಮಂಜೂರಾದ ಅನುದಾನವಲ್ಲ.

ತೋಟಗಾರಿಕಾ ಇಲಾಖೆಗೆ ಸಂಧಿಸಿದ 6.11 ಕೋಟಿ ರೂ. ಅನುದಾನದಲ್ಲಿ 1.10 ಕೋಟಿ ರೂ. ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಅವಧಿಯಲ್ಲಿ ಬಿಡುಗಡೆಯಾದ ಅನುದಾನವಾಗಿದೆ. ಉಳಿದ ಅನುದಾನ ರೈತರಿಗೆ ಜೇನು ಸಾಕಾಣಿಕೆ ಮೊದಲಾದ ತರಬೇತಿ ಸಂಧರ್ಭದಲ್ಲಿ ನೀಡುವ ಚಾ, ತಿಂಡಿ, ಮತ್ತು ಊಟದ ಲೆಕ್ಕವೂ ಸೇರಿದೆ. ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸಂಬಳ, ಹನಿ ನೀರಾವರಿ ಯೋಜನೆಗಳಿಗೆ ನೀಡುವ ಸಹಾಯಧನ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ದಿನಗೂಲಿಯೂ ಇದರಲ್ಲಿ ಸೇರಿದೆ. ಇದು ಶಾಸಕರು ತಾನು ತರಿಸಿದ ಅನುದಾನ ಎಂದು ಹೇಳಿಕೊಳ್ಳುವುದು ತೀರಾ ಹಾಸ್ಯಾಸ್ಪದ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಜಿ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ದಿವ್ಯಜ್ಯೋತಿ, ಮಾಜಿ ಸದಸ್ಯರಾದ ಪ್ರವೀಣ್ ಗೌಡ, ಜಯರಾಮ್, ಓಬಯ್ಯ, ಸುಶೀಲಾ, ಕಿಸಾನ್ ಘಟಕದ ಸತೀಶ್ ಶೆಟ್ಟಿ, ಅಭಿನಂದನ್ ಹರೀಶ್ ಕುಮಾರ್, ಅಬ್ದುಲ್ ರಹಿಮಾನ್ ಪಡ್ಪು, ಸಾಮಾಜಿಕ ಜಾಲತಣದ ಸಂದೀಪ್ ಅರುವ ಮೊದಲಾದವರು ಉಪಸ್ಥಿತರಿದ್ದರು.

error: Content is protected !!