ಬೆಳ್ತಂಗಡಿ: ಕೇರಳದ ಕಣ್ಣೂರು ಸಮೀಪ ಪೆರಿಯಾರು ಸಮೀಪ ಶುಕ್ರವಾರ ನಡೆದ ರಸ್ತೆ
ಅಪಘಾತದಲ್ಲಿ ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿ ನಿವಾಸಿ ಜಯಪ್ರಕಾಶ್ (45) ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಜಯಪ್ರಕಾಶ್ ಅವರು ಮಂಗಳೂರು ಖಾಸಗಿ ಬ್ಯಾಂಕಿನ ಎಟಿಎಂ ಹಣ ಕೊಂಡೊಯ್ಯುವ ವಾಹನ ಚಾಲಕ ಕೆಲಸ ಮಾಡುತ್ತಿದ್ದಾರೆ. ಕೇರಳ ರಾಜ್ಯದ ಎಟಿಎಂಗಳಿಗೆ ಹಣವನ್ನು ತುಂಬಿಸುವ ಸಲುವಾಗಿ ಶುಕ್ರವಾರ ಸಂಸ್ಥೆಯ ವಾಹನವನ್ನು ಚಲಾಯಿಸುತ್ತಿದ್ದ ವೇಳೆ ಕಣ್ಣೂರು ಜಿಲ್ಲೆಯ ಪೆರಿಯಾರು ಸಮೀಪ ಅತೀ ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಇವರ ವಾಹನದ ಎದುರು ಭಾಗ ಜಖಂಗೊಂಡಿದ್ದು, ಜಯಪ್ರಕಾಶ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಯಪ್ರಕಾಶ್ ಅವರ ಪತ್ನಿ ಪ್ರತಿಭಾ ಅವರು ತನ್ನ ತಾಯಿಗೆ ಅಸೌಖ್ಯದ ಕಾರಣ ತವರು ಮನೆ ವಿಟ್ಲಕ್ಕೆ ತೆರಳಿದ್ದರು. ಶುಕ್ರವಾರ ಮಧ್ಯಾಹ್ನ ಪತಿಗೆ ಪೋನಾಯಿಸಿದ್ದರು. ಬಳಿಕ ಸಂಜೆ ಕರೆ ಮಾಡಿದಾಗ ಆ ಕಡೆಯಿಂದ ಯಾವುದೇ ಸ್ಪಂದನೆ ಇರಲಿಲ್ಲ. ಅಪಘಾತ ನಡೆದ ಬಳಿಕ ಜಯಪ್ರಕಾಶ್ ಕೆಲಸ ಮಾಡುವ ಸಂಸ್ಥೆಯವರು ಮನೆಯವರಿಗೆ ಮಾಹಿತಿ ನೀಡಿದ್ದರು. ಆದರೆ ಪ್ರತಿಭಾ ಅವರಿಗೆ ಪತಿ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದಿರಲಿಲ್ಲ. ಮನೆಯವರು ಕೇರಳಕ್ಕೆ ತೆರಳಿದ್ದು, ಶನಿವಾರ ಸಂಜೆ ಕೇರಳದಿಂದ ಮೃತದೇಹವನ್ನು ಊರಿಗೆ ತರುತ್ತಿದ್ದಾರೆ.
ಜಯಪ್ರಕಾಶ್ ಮೂಲತಃ ಪುತ್ತೂರು ತಾಲೂಕಿನವರಾಗಿದ್ದು, ಇವರ ತಂದೆ ಕೃಷ್ಣ ಮೂಲ್ಯವರು ಕಳೆದ 12 ವರ್ಷಗಳ ಹಿಂದೆ ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿ ಎಂಬಲ್ಲಿ ಜಾಗ ಖರೀದಿಸಿ ವ್ಯಾಸ್ತವ್ಯವಿದ್ದಾರೆ. ಕೃಷ್ಣ ಮೂಲ್ಯ ಅವರಿಗೆ 4 ಮಕ್ಕಳು. ಎರಡು ಗಂಡು, ಎರಡು ಹೆಣ್ಣು ಮಕ್ಕಳು. ಜಯಪ್ರಕಾಶ್ ಹಿರಿಯವರು. ಜಯಪ್ರಕಾಶ್ ವಿವಾಹಿತರಾಗಿದ್ದು, ಪತ್ನಿ ಪ್ರತಿಭಾ ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಒಂದು ಗಂಡು, ಒಂದು ಹೆಣ್ಣು ಮಗುವಿದೆ.