ವ್ಯಾಕ್ಸಿನ್ ಕೇಂದ್ರದಲ್ಲಿ ಕೊರೋನಾ ನುಸುಳಲೂ ಜಾಗವಿಲ್ಲ…!?: ಪದ್ಮುಂಜದಲ್ಲಿ ಟೋಕನ್ ಪಡೆಯಲು ಪರದಾಡಿದ ಜನತೆ: ವ್ಯವಸ್ಥಿತವಾಗಿ ಕಾರ್ಯನಿರ್ವಹಿಸದೆ ಸಮಸ್ಯೆ: ಸ್ಪಂದಿಸಿದ ಅಧಿಕಾರಿಗಳು, ವ್ಯವಸ್ಥಿತ ವಿತರಣೆ ಕುರಿತು ಭರವಸೆ

 

ಪದ್ಮುಂಜ: ಕೋವಿಡ್ ವ್ಯಾಕ್ಸಿನ್ ಪಡೆಯಲು ಪದ್ಮುಂಜ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಲಸಿಕಾ ಕೇಂದ್ರಕ್ಕೆ ಬಂದ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಪರದಾಡುವಂತಾಗಿತ್ತು.

ಕಣಿಯೂರು ಗ್ರಾಮದ ಪದ್ಮುಂಜ ಆಸ್ಪತ್ರೆಯಲ್ಲಿ ನೀಡಲು ಶುಕ್ರವಾರ ನಿಗದಿಪಡಿಸಲಾಗಿತ್ತು. ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಡಿದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿದ್ದಾರೆ. 100 ಮಂದಿ 45 ವರ್ಷ ಮೇಲ್ಪಟ್ಟವರಿಗೆ, 100 ಮಂದಿ 18ರಿಂದ 45 ವರ್ಷದವರಿಗೆ ಸೇರಿ ಒಟ್ಟು 200 ಮಂದಿಗೆ ಲಸಿಕೆ ನೀಡುವ ಕುರಿತು ಮಾಹಿತಿ ನೀಡಲಾಗಿತ್ತು. 9 ಗಂಟೆಗೆ ಟೋಕನ್ ನೀಡಲು ಸಮಯ ನಿಗದಿಪಡಿಸಲಾಗಿತ್ತು. ಈ ಲಸಿಕಾ ಕೇಂದ್ರವನ್ನು ಕಣಿಯೂರು, ಉರುವಾಲು ಗ್ರಾಮಗಳ ಜನತೆ ಸೇರಿದಂತೆ ಸ್ಥಳೀಯ ಹಲವು ಗ್ರಾಮಗಳ‌ ಜನತೆ ಅವಲಂಬಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿದ ಕಾರಣ ಆಸ್ಪತ್ರೆಯ ಒಳಗೆ, ಆವರಣದಲ್ಲಿ ಹಾಗೂ ಸಾರ್ವಜನಿಕ ರಸ್ತೆಯಲ್ಲೂ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು‌. ವಯೋಮಾನದಂತೆ ಎರಡೂ ವಿಭಾಗಗಳ ಜನತೆಗೆ ಪ್ರತ್ಯೇಕ ಸರತಿ ಸಾಲು ಮಾಡಿರುವ ಕುರಿತು ಸಮರ್ಪಕ ಮಾಹಿತಿ ಲಭಿಸಲಿಲ್ಲ. ವ್ಯವಸ್ಥಿತವಾಗಿ ಟೋಕನ್ ನೀಡದ ಕಾರಣ ಗೊಂದಲ ಉಂಟಾಗಿ ಆಸ್ಪತ್ರೆ ಹಾಗೂ ಆವರಣದಲ್ಲಿ ಜನಜಂಗುಳಿ ಉಂಟಾಗಿದ್ದು, ನಿಯಂತ್ರಣಕ್ಕೆ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಯಿತು.

ಮುಖ್ಯವಾಗಿ ಕೋವಿಡ್ ಅನ್‌ಲಾಕ್ ಹಂತ ಹಂತವಾಗಿ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರಿಗೆ, ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಕಡ್ಡಾಯಗೊಳಿಸಿರುವ ಹಿನ್ನೆಲೆ, ಬೆಳ್ತಂಗಡಿ ತಾಲೂಕಿನ ಜನರು ಕೊರೊನಾ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಆದ್ರೆ ಜಿಲ್ಲೆಯಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಇಳಿಮುಖ ಕಂಡಿದೆ.

ಐದು ಗ್ರಾಮಗಳಿಗೆ ಒಂದೇ ಸರ್ಕಾರಿ ಆಸ್ಪತ್ರೆಯಾಗಿರುವ ಪದ್ಮುಂಜ ಲಸಿಕಾ ಕೇಂದ್ರದಲ್ಲಿ ವ್ಯಾಕ್ಸಿನ್‌ಗೆ ಬೇಡಿಕೆಯಿದೆ. ಇತ್ತ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತ ಸಾರ್ವಜನಿಕರು‌ ಕಾದರೂ ಲಸಿಕೆ ಸಿಗದೆ ಇದ್ದಾಗ ತಾಳ್ಮೆಯ ಕಟ್ಟೆಯೊಡೆದು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಕೆಲ ಪ್ರಬುದ್ಧ ಜನತೆ ಅವ್ಯವಸ್ಥೆ ಕಂಡು ಲಸಿಕೆ ಸಿಗದಿದ್ದರೂ ಪರವಾಗಿಲ್ಲ, ಅನಾರೋಗ್ಯದಂತಹಾ ಅನಗತ್ಯ ಸಮಸ್ಯೆಗೆ ಸಿಲುಕಿ ಕೊಳ್ಳುವುದು ಬೇಡ ಎಂಬ ಉದ್ದೇಶದಿಂದ ಹಿಂತಿರುಗಿ ಹೋಗಿದ್ದಾರೆ.

ಪದ್ಮುಂಜದಲ್ಲಿ ಜನಜಂಗುಳಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, “ಇಂಚ ಜನ ಇತ್ತ್ಂಡ ಲಸಿಕೆ ದಾಯೆ, ಕೊರೋನಾಗ್ಲಾ ಪೊಗ್ಗರ ಜಾಗ ಬೋಡತಾ?” ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ ಸಂದರ್ಭ ಕಂಡುಬಂತು.

ಸ್ಥಳೀಯ ಐದು ಗ್ರಾಮಗಳ ಜನತೆ ಒಂದೇ ಕೇಂದ್ರವನ್ನು ಅವಲಂಬಿಸಿದ್ದು, ಲಸಿಕೆ ಪೂರೈಕೆ ಹೆಚ್ಚು ಮಾಡುವ ಜೊತೆಗೆ ಆಯಾ ಗ್ರಾಮಗಳ ಜನತೆಗೆ ಅನುಕೂಲವಾಗುವಂತೆ ವಿತರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಉದಾಹರಣೆಗೆ ಕಣಿಯೂರು, ಉರುವಾಲು ಸ್ಥಳೀಯ ಗ್ರಾಮಗಳ ಜನತೆಗೆ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿ ಬಳಿ ಇರುವ ಪಿಲಿಗೂಡು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಸಬಹುದಾಗಿದೆ. ಉಳಿದಂತೆ ಎರಡು ಗ್ರಾಮಗಳಿಗೆ ಸಮೀಪವಾಗುವ ವ್ಯವಸ್ಥಿತ ಸ್ಥಳ ಗುರುತಿಸಿ, ಲಸಿಕೆ ಸಮರ್ಪಕ ವಿತರಣೆಗೆ ಕ್ರಮಕೈಗೊಂಡಲ್ಲಿ ಸಾರ್ವಜನಿಕರು ಕೊಂಚ ನಿರಾಳರಾಗಬಹುದು.

ಸಮಸ್ಯೆ ಬಗ್ಗೆ ‌’ಪ್ರಜಾಪ್ರಕಾಶ ನ್ಯೂಸ್’ ತಂಡ ಲಸಿಕೆ ಹಂಚಿಕೆ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಪಂದಿಸಿದ್ದಾರೆ. ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

error: Content is protected !!