ದಾರಿ ಯಾವುದಯ್ಯ ಕರಾವಳಿ ತಲುಪಲು…!?: ಲಘು ವಾಹನಗಳಿಗಷ್ಟೇ ಶಿರಾಡಿ ಘಾಟ್ ಪ್ರಯಾಣಕ್ಕೆ ಅವಕಾಶ: ಅಪಾಯದಲ್ಲಿವೆ ಚಾರ್ಮಾಡಿ ಘಾಟ್, ಬಿಸಲೆ ಘಾಟ್, ಮಡಿಕೇರಿ ರಸ್ತೆ!: ಬೃಹತ್ ಯೋಜನೆಯಿಂದ ಸಕಲರ ಸಂಚಾರಕ್ಕೆ ಸಂಚಕಾರ…?

ಬೆಳ್ತಂಗಡಿ: ಕಳೆದ 4 ವರ್ಷಗಳಿಂದ ಕರಾವಳಿಯ ಹವಾಮಾನದಲ್ಲಿ ವಿಪರೀತ ಬದಲಾವಣೆಗಳಾಗುತ್ತಿವೆ… ಮೈ ಸುಡುವಾ ಬಿಸಿಲು, ಮಳೆಗಾಲದಲ್ಲಿ ಭಾರೀ ಮಳೆಯೊಂದಿಗೆ ನೆರೆ ಸದೃಶ ಪರಿಸ್ಥಿತಿ, ಬೇಸಗೆಯಲ್ಲೂ ಅಕಾಲಿಕ ಮಳೆ… ಸಾಲು ಸಾಲು ವಾಯುಭಾರ ಕುಸಿತದಿಂದ ಮಳೆ ಹಾಗೂ ಚಂಡಮಾರುತಗಳ ಹೊಡೆತ.. ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಚಳಿ… ಬಯಲುಸೀಮೆಯಲ್ಲಿ ಬೀಸುವಂತೆ ಚಳಿ ಗಾಳಿ… ಹೀಗೆ ಭಾರೀ ಬದಾವಣೆಗಳಾಗುತ್ತಿವೆ. ಹೀಗೇ ಮುಂದುವರಿದಲ್ಲಿ ಬದುಕುವುದು ಹೇಗೆ..? ತಿಂಗಳುಗಟ್ಟಲೆ ರಸ್ತೆಗಳು ಬಂದ್ ಆದಲ್ಲಿ ಪ್ರಯಾಣ ಹೇಗೆ…? ಇದು ಕರಾವಳಿಯಲ್ಲಿ ಕೇಳಿ ಬರುತ್ತಿರುವ ಸಧ್ಯದ ಪರಿಸ್ಥಿತಿಯ ಮಾತು.

ಬೃಹತ್ ಯೊಜನೆಯೊಂದರ ಕಾಮಗಾರಿ ಆರಂಭವಾದ ಬಳಿಕ ಹವಾಮಾನ ವೈಪರಿತ್ಯ, ಪ್ರಕೃತಿ ವಿಕೋಪಗಳು ಕರಾವಳಿಯಲ್ಲಿ ಹೆಚ್ಚಾಗಿವೆ ಎಂಬ ಮಾತು ಕೇಳಿ ಬರುತ್ತಿದೆ.
ಪ್ರಕೃತಿ ವಿಕೋಪದಿಂದ ಕಳೆದ ಮೂರು ವರ್ಷಗಳಲ್ಲಿ ಬಯಲುಸೀಮೆ ಹಾಗೂ ಕರಾವಳಿ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸಂಚಾರವನ್ನೇ ಸ್ಥಗಿತಗೊಳಿಸಲಾಗಿತ್ತು. ಶಿರಾಡಿ ಘಾಟ್, ಚಾರ್ಮಾಡಿ ಘಾಟ್, ಬಿಸಲೆಘಾಟ್ ಪ್ರಮುಖವಾಗಿದ್ದು, ಸುಳ್ಯ, ಸಂಪಾಜೆ ಮೂಲಕ ಮಡಿಕೇರಿ- ಮೈಸೂರು ಸಂಪರ್ಕಿಸುವ ಹೆದ್ದಾರಿಯಲ್ಲೂ ದೊಡ್ಡ ಮಟ್ಟದ ಭೂ ಕುಸಿತ ಉಂಟಾಗಿತ್ತು. ಈ ಬಾರಿ ಮಳೆ ಇನ್ನೂ ಹೆಚ್ಚಾದಲ್ಲಿ ಯಾವುದೇ ಪ್ರತೀಕೂಲ ಪರಿಣಾಮ, ಸವಾಲುಗಳನ್ನು ಎದುರಿಸಬೇಕಾದೀತು.

ಶಿರಾಡಿ ಘಾಟ್ ರಸ್ತೆ ಬಂದ್:
ಈ ಬಾರಿ ಸುರಿಯುತ್ತಿರುವ ಮಳೆಗೆ ಈಗಾಗಲೇ ಶಿರಾಡಿ ಘಾಟ್ ಮೂಲಕ ಸಕಲೇಶಪುರ ಸಂಪರ್ಕಿಸುವ ದೋಣಿಗಲ್ ಬಳಿ ದೊಡ್ಡ ಮಟ್ಟದ ಕುಸಿತ ಉಂಟಾಗಿದ್ದು, ಪ್ರಯಾಣಕ್ಕೆ ನಿರ್ಭಂಧ ಹೇರಲಾಗಿತ್ತು. ಸಧ್ಯ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಕುಸಿತದ ತೀವ್ರತೆ ಗಮನಿಸಿದಲ್ಲಿ ಸಧ್ಯಕ್ಕಂತೂ ಘನ ವಾಹನಗಳ ಓಡಾಟ ಅನುಮಾನವೆಂಬಂತೆ ಕಂಡುಬರುತ್ತಿದೆ. ಲಘು ವಾಹನಗಳು ಓಡಾಟ ನಡೆಸಬಹುದಾದರೂ ಜೋರಾಗಿ ಮಳೆ ಸುರಿದಲ್ಲಿ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಚಾರ್ಮಾಡಿ ಪ್ರಯಾಣವೂ ಡೋಲಾಯಮಾನ:
ಚಾರ್ಮಾಡಿ ಘಾಟಿಯಲ್ಲಿ ಮಳೆಗಾಲದ ಪ್ರಯಾಣ ಹಗ್ಗದ ಮೇಲಿನ ನಡಿಗೆಯಂತೆ. ಯಾವಾಗ ಎಲ್ಲಿ ಏನು ನಡೆಯಬಹುದು ಎಂದು ಊಹಿಸುವುದೂ ಅಸಾಧ್ಯ. 2018ರಲ್ಲಿ ಗುಡ್ಡ ಕುಸಿದು ವಾಹನ ಸವಾರರು ಸತತ 16 ಗಂಟೆಗಳ ಕಾಲ ಘಾಟಿಯಲ್ಲಿ ಸಿಲುಕಿಕೊಂಡದ್ದೇ ಇದಕ್ಕೆ ಸಾಕ್ಷಿ. ಎರಡು ವರ್ಷಗಳ ಹಿಂದೆ ಉಂಟಾದ ಕುಸಿತದಿಂದಾಗಿ ಬಸ್ ಸಂಚಾರ ಸೇರಿದಂತೆ ಘನ ವಾಹನಗಳ ಓಡಾಟಕ್ಕೆ ತಡೆ ನೀಡಲಾಗಿದ್ದು, ಕೆಲ ತಿಂಗಳುಗಳ ಹಿಂದೆಯಷ್ಟೇ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಮುಂಜಾಗ್ರತಾ ಕ್ರಮವಾಗಿ ರಾತ್ರಿ ಸಂಚಾರಕ್ಕೆ ನಿರ್ಭಂಧ ಹೇರಿದ್ದು, ಹಗಲು ಲಘು ವಾಹನಗಳ ಓಡಾಟಕ್ಕಷ್ಟೇ ಅವಕಾಶ ನೀಡಲಾಗಿದೆ. ರಾತ್ರಿ ವೇಳೆ ಆನೆಗಳ ಓಡಾಟ ಸೇರಿದಂತೆ ವನ್ಯ ಜೀವಿಗಳ ಓಡಾಟವಿದ್ದು, ರಾತ್ರಿ ಪ್ರಯಾಣ ಅಪಾಯಕಾರಿಯಾಗಿದೆ. ಕಳೆದ ಬಾರಿ ಕುಸಿತ ಉಂಟಾಗಿದ್ದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಕಾರ್ಯವೇನೋ ನಡೆದಿದೆ, ಆದರೆ ಪ್ರತೀ ಬಾರಿ ಬೇರೆ ಬೇರೆ ಪ್ರದೇಶಗಳಲ್ಲಿ ಕುಸಿತ ಉಂಟಾಗುತ್ತಿದೆ.

ಮಡಿಕೇರಿ ರಸ್ತೆಯೂ ಸುರಕ್ಷಿತವಲ್ಲ:
ಎರಡು ವರ್ಷಗಳ ಹಿಂದೆ ಉಂಟಾದ ಪ್ರವಾಹದಿಂದ ಸುಳ್ಯ-ಸಂಪಾಜೆ- ಮೂಲಕ ಮಡಿಕೇರಿ ಸಂಪರ್ಕಿಸುತ್ತಿರುವ ರಸ್ತೆಯೇ ಕೊಚ್ಚಿ ಹೋಗಿದ್ದು ಬಳಿಕ ತಕ್ಕಮಟ್ಟಿಗೆ ಸರಿಪಡಿಸಲಾಗಿತ್ತು. ಈ ರಸ್ತೆಯೂ ಕೆಲವೆಡೆ ಕಿರಿದಾಗಿದ್ದು, ವಾಹನಗಳು ಸರಾಗವಾಗಿ ಸಾಗಲು ಸಾಧ್ಯವಿಲ್ಲ. ಸತತ ಮಳೆ ಸುರಿದಲ್ಲಿ ಮತ್ತೆ ಈ ಭಾಗದಲ್ಲಿ ಗುಡ್ಡ, ರಸ್ತೆ ಕುಸಿದು ಸಂಚಾರಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆಯೂ ಇದೆ. ಸಧ್ಯ ಶಿರಾಡಿ ಘಾಟಿ ಮೂಲಕ ಆಗಮಿಸುತ್ತಿದ್ದ ಘನ ವಾಹನಗಳು ಈ ದಾರಿಯನ್ನು ಅವಲಂಬಿಸಬೇಕಾಗಿದೆ.

ಬಿಸಲೆ ಘಾಟ್ ಪ್ರಯಾಣ ಎಚ್ಚರ:
ಬಿಸಲೆ ಘಾಟ್ ಸಧ್ಯದ ಮಟ್ಟಿಗೆ ಸುರಕ್ಷಿತ ಪ್ರಯಾಣ ಸಾಧ್ಯವಾದರೂ, ಎಚ್ಚರಿಕೆ ಅತ್ಯವಶ್ಯಕ. ಅಗಲ ಕಿರಿದಾದ ರಸ್ತೆಗಳಿದ್ದು, ದಟ್ಟಡವಿಯ ನಡುವೆ ಸಾಗಬೇಕಾಗಿರುವುದರಿಂದ ತೀವ್ರವಾಗಿ ಮಳೆ ಸುರಿದಲ್ಲಿ, ರಸ್ತೆಗೆ ಮರ ಉರುಳುವ ಅಥವಾ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆ ಅಧಿಕವಾಗಿರುವದರಿಂದ ಹಾಗೂ ರಸ್ತೆಯಲ್ಲೇ ಕಾಡು ಪ್ರಾಣಿಗಳು ತಿರುಗಾಡುವುದರಿಂದ ನಿಶ್ಚಿಂತೆಯಿಂದ ಸಾಗುವಂತಿಲ್ಲ.

ಆಗುಂಬೆ ಘಾಟ್:
ಶಿವಮೊಗ್ಗ, ತೀರ್ಥಹಳ್ಳಿ ಮೂಲಕ ಕರಾವಳಿಗೆ ಆಗಮಿಸುವವರಿಗೆ ಆಗುಂಬೆ ಘಾಟ್ ಮೂಲಕ ಆಗಮಿಸಬಹುದು. ಸಧ್ಯಕ್ಕೆ ಯಾವುದೇ ರೀತಿಯ ‌ಸಮಸ್ಯೆ ಎದುರಾಗಿರುವ ಬಗ್ಗೆ‌ ಮಾಹಿತಿ‌ ಲಭಿಸಿಲ್ಲ.

ದಾರಿ ಯಾವುದು…?:
ಹಸಿರ ಸಿರಿಯನ್ನು ಆಸ್ವಾದಿಸಿಕೊಂಡು‌‌ ನೆಮ್ಮದಿಯಿಂದ ಕರಾವಳಿ ತಲುಪಲು ಸಧ್ಯ ಕಳಸ, ಕುದುರೆಮುಖ ಅಥವಾ ಶಿವಮೊಗ್ಗ ಶೃಂಗೇರಿ ಮೂಲಕ ಎಸ್. ಕೆ.ಬಾರ್ಡರ್ ದಾಟಿ, ಬಜಗೋಳಿ ಮೂಲಕ ‌ಕರಾವಳಿ ತಲುಪಬಹುದಾಗಿದೆ.

ಮಾಹಿತಿಯೊಂದಿಗೆ ಪ್ರಯಾಣ ಬೆಳೆಸಿ:
ಕರಾವಳಿ ತಲುಪಲು ಜನತೆ ಸುತ್ತುಬಳಸಿ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ದೂರದ ಊರುಗಳಿಂದ ಕರಾವಳಿಗೆ ಆಗಮಿಸುವವರು ಸಾಧ್ಯವಾದಲ್ಲಿ ಕೆಲದಿನಗಳ ಮಟ್ಟಿಗೆ ಪ್ರಯಾಣ ಮುಂದೂಡುವುದು ಒಳಿತು. ಇಲ್ಲವಾದಲ್ಲಿ ಪರಿಚಿತರಿಂದ ಖಚಿತವಾದ ಮಾಹಿತಿ ಪಡೆದುಕೊಂಡ ಬಳಿಕವಷ್ಟೇ ಪ್ರಯಾಣ ಆರಂಭಿಸುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮ.

ಪಶ್ಚಿಮ ಘಟ್ಟ ಎಷ್ಟು ಸುರಕ್ಷಿತ..?:

ಅವೈಜ್ಞಾನಿಕ ಯೋಜನೆಗಳನ್ನು ಪಶ್ಚಿಮ ಘಟ್ಟಗಳಲ್ಲಿ ಅನುಷ್ಠಾನ ಮಾಡಬಾರದು ಎಂದು ಹಲವು ಪ್ರತಿಭಟನೆಗಳೇ ನಡೆದು ಹೋದವು. ಆದರೆ ಪರಿಣಾಮ ಏನೂ ಉಂಟಾಗಲಿಲ್ಲ. ಯೋಜನೆ ಅನುಷ್ಠಾನಗೊಂಡು ಎಕರೆಗಟ್ಟಲೆ ಅರಣ್ಯ ನಾಶ ನಡೆದು, ಬೃಹತ್ ಯಂತ್ರಗಳ ಮೂಲಕ ಕೆಲಸ ನಡೆಸಲಾಗುತ್ತಿದೆ. ಸ್ಪೋಟಕಗಳನ್ನು ಬಳಸಿ ದೊಡ್ಡ ಬಂಡೆಗಳನ್ನು ಪುಡಿ ಮಾಡುತ್ತಿರುವುದೂ ಈ ಭೂ ಕುಸಿತಕ್ಕೆ ಕಾರಣಗಳೂ ಆಗಿರಬಹುದು. ಅರಣ್ಯ ನಾಶದಿಂದಲೂ ಈ ಪ್ರಕೃತಿ ವಿಕೋಪ ಮತ್ತು ಹವಾಮಾನ ಬದಲಾವಣೆಗೆ ಕಾರಣಗಳಾಗಿರಬಹುದು ಎಂದು ಪರಿಸರವಾದಿಗಳ ಹಾಗೂ ಸಾರ್ವತ್ರಿಕ ಚರ್ಚೆ ನಡೆಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಕರಾವಳಿ ಜನತೆ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭ ಎದುರಾಗಬಹುದೇ ಎಂಬ ಚಿಂತೆಯೂ ಜನಸಾಮಾನ್ಯರನ್ನು ಕಾಡುತ್ತಿದೆ.

error: Content is protected !!