ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕರಾವಳಿ ಹಾಗೂ ರಾಜ್ಯದ ಇತರ ಕಡೆಗಳಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ 7 ರಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ತುರ್ತು ಅಗತ್ಯವಿರುವ ಅಂಬುಲೆನ್ಸ್ ಮತ್ತು ಆಕ್ಸಿಜನ್ ಸಾಗಾಟ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಹಗಲಲ್ಲಿ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರೋಡ್ ನ ದೋಣಿಗಲ್ ಬಳಿ ರಸ್ತೆ ಕುಸಿದಿದ್ದು, ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿ ಚಾರ್ಮಾಡಿ ರಸ್ತೆಯ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಶಿರಾಡಿ ಮೂಲಕ ಲಘು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿರುವ ಮಾಹಿತಿಯಿದೆ. ಶಿರಾಡಿ ಘಾಟ್ ರಸ್ತೆಯೂ ಅಪಾಯಕಾರಿಯಾಗಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಇನ್ನು ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಸಂಭವ ಇರುವುದರಿಂದ ಚಾರ್ಮಾಡಿ ಘಾಟ್ ನಲ್ಲೂ ಕುಸಿತದ ಭೀತಿ ಎದುರಾಗಿದೆ. ರಾತ್ರಿ ಸಮಯದಲ್ಲಿ ಸಂಚಾರ ಬಹಳ ಅಪಾಯಕಾರಿಯಾಗಿದೆ.
ಈ ಹಿಂದೆ 2018ರಲ್ಲಿ ರಾತ್ರಿ ಗುಡ್ಡ ಕುಸಿದ ಪರಿಣಾಮ ಪ್ರಯಾಣಿಕರು ಸುಮಾರು ರಾತ್ರಿಯಿಡೀ ಘಾಟಿಯಲ್ಲಿ ಮಳೆಯ ನಡುವೆ ಪ್ರಾಣ ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿತ್ತು. ಇದೀಗ ಮುಂಜಾಗ್ರತಾ ಕ್ರಮವಾಗಿ ಜು. 23ರಿಂದಲೇ ಅನ್ವಯವಾಗುವಂತೆ ಸಂಜೆ 7ರಿಂದ ಬೆಳಗ್ಗೆ 6 ರವರೆಗೆ ಅಂಬುಲೆನ್ಸ್ ಮತ್ತು ಆಕ್ಸಿಜನ್ ವಾಹನ ಹೊರತು ಪಡಿಸಿ ಉಳಿದ ವಾಹನ ಸಂಚಾರ ಮುಂದಿನ ಆದೇಶದವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಹಗಲಲ್ಲೂ ಕಾರು, ಜೀಪು ಸೇರಿದಂತೆ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.