ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ: ಬಂದಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ್ ಅಭಿಮತ: ಪದ್ಮುಂಜ ಕಲ್ಕುಡ ಮಾಡ ದೈವಸ್ಥಾನ ವಠಾರದಲ್ಲಿ ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದಿಂದ ಪರಿಸರ ಸಂರಕ್ಷಣಾ ಕಾರ್ಯಕ್ರಮ

ಕಣಿಯೂರು: ಪದ್ಮುಂಜ ಕಲ್ಕುಡ ಮಾಡ ದೈವಸ್ಥಾನದ ವಠಾರದಲ್ಲಿ ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ವತಿಯಿಂದ ಪರಿಸರ ಸಂರಕ್ಷಣಾ ಕಾರ್ಯಕ್ರಮ ನಡೆಯಿತು.

ಗಿಡ ನಾಟಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಂದಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಉದಯ್ ಬಿ.ಕೆ‌. ಬಂದಾರು ಮಾತನಾಡಿ, ನಾವು ಪರಿಸರ ನಾಶ ಮಾಡಿದರೆ ಮುಂದೊಂದು ದಿನ ನಮಗೆ ಉಸಿರಾಟಕ್ಕೆ ಆಮ್ಲಜನಕವನ್ನು ಬೇರೆ ದೇಶದಿಂದ ತರುವ ಪರಿಸ್ಥಿತಿ ಬಂದರೂ ಬರಬಹುದು ಇದು ಕೊರೋನಾ ನಮಗೆ ಕಲಿಸಿದ ಪಾಠವೆಂದು ಭಾವಿಸಬೇಕು. ಆದ್ದರಿಂದ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಯ ಉಳಿವಿಗಾಗಿ ಪರಿಸರ ಸಂರಕ್ಷಣೆ ಅವಶ್ಯಕ. ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದಿಂದ ಇಂತಹ ಸಾಮಾಜಿಕ ಕಾರ್ಯ ನಡೆಯುತ್ತಿರುವುದು ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಅಧ್ಯಕ್ಷ ಉಮೇಶ್ ಪಿಲಿಗೂಡು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆದ್ದರಿಂದ ಎಲ್ಲ ಸಂಘ-ಸಂಸ್ಥೆಗಳು ಇದೇ ರೀತಿ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅರಣ್ಯ ಇಲಾಖೆಯಿಂದ ನಾಟಿಗೆ 70 ಗಿಡಗಳನ್ನು ನೀಡಲಾಗಿದ್ದು, ಸಹಕರಿಸಿದ ಪಂಚಾಯತ್ ಸದಸ್ಯ ಯಶೋಧರ ಶೆಟ್ಟಿ ಸಹಕಾರ ಸ್ಮರಿಸಲಾಯಿತು. ಕಾರ್ಯಕ್ರಮ ಸಂಯೋಜಕ ಅಶೋಕ್ ಬರಂಬು ಉಪಸ್ಥಿತರಿದ್ದರು.
ಸುರೇಶ್ ನಾಣಿಲು ಸ್ವಾಗತಿಸಿ, ದಿನೇಶ್ ಅಂತರ ವಂದಿಸಿದರು. ಸುಧೀರ್ ಕೆ. ಎನ್ ಹಲೇಜಿ ನಿರೂಪಿಸಿದರು.

error: Content is protected !!