ಶಾಸಕಾಂಗ ಸಭೆ ದಿಢೀರ್ ರದ್ದುಗೊಳಿಸಿದ ಸಿ.ಎಂ. ಯಡಿಯೂರಪ್ಪ! ಕುತೂಹಲ ಮೂಡಿಸಿದ ಮುಖ್ಯಮಂತ್ರಿಗಳ ನಡೆ

ಬೆಂಗಳೂರು : ಶಾಸಕಾಂಗ ಪಕ್ಷದ ಸಭೆ ಕರೆದಿದ್ದ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ತಮ್ಮ ನಿರ್ಧಾರವನ್ನು ದಿಢೀರ್‌ ಎಂದು ಬದಲಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯನ್ನು ರದ್ದುಪಡಿಸಿದ್ದಾರೆ. ಯಡಿಯೂರಪ್ಪ ಅವರ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ನವದೆಹಲಿಯಲ್ಲಿ ವರಿಷ್ಠರ ಭೇಟಿ ವೇಳೆ ಶಾಸಕಾಂಗ ಪಕ್ಷದ ಸಭೆ ನಡೆಸಲು ಸೂಚಿಸಲಾಗಿತ್ತು. ಅದರಂತೆ ಬೆಂಗಳೂರಿಗೆ ಬರುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದರು.ಜುಲೈ 25ರಂದು ಬೆಳಗ್ಗೆ 11.30ಕ್ಕೆ ನಗರದ ಖಾಸಗಿ ತಾರಾ ಹೋಟೆಲ್​​ನಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನ ನಿಗದಿಪಡಿಸಿ, ಶಾಸಕರಿಗೆ ಆಹ್ವಾನವನ್ನೂ ಕಳಿಸಿದ್ದರು. ಆದರೆ, ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳು ದಿನಕ್ಕೊಂದು ತಿರುವು ಪಡೆಯುತ್ತಿರುವ ಸನ್ನಿವೇಶದಲ್ಲಿ ದಿಢೀರ್ ಶಾಸಕಾಂಗ ಪಕ್ಷದ ಸಭೆಯನ್ನು ಸಿಎಂ ರದ್ದುಪಡಿಸಿದ್ದಾರೆ.ರಾಜ್ಯ ಸರ್ಕಾರಕ್ಕೆ ಜುಲೈ 26ರಂದು ಎರಡು ವರ್ಷ ಪೂರ್ಣವಾಗುತ್ತಿದೆ. ಪಕ್ಷದ ಶಾಸಕರಿಗೆ ಜುಲೈ 25ರಂದು ರಾತ್ರಿ ಸಿಎಂ ಯಡಿಯೂರಪ್ಪ ಭೋಜನಕೂಟ ಏರ್ಪಡಿಸಿದ್ದಾರೆ. ಅಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ ರಾತ್ರಿ ಭೋಜನಕೂಟ ನಡೆಸುವ ನಿರ್ಧಾರ ಮಾಡಲಾಗಿತ್ತು. ಆದರೆ, ಈಗ ಶಾಸಕಾಂಗ ಸಭೆ ರದ್ದುಗೊಳಿಸಿದ್ದು ಕೇವಲ ಭೋಜನಕೂಟ ಮಾತ್ರ ಆಯೋಜನೆ ಮಾಡುತ್ತಿದ್ದಾರೆ. ಪಕ್ಷದ ಶಾಸಕರು, ಪರಿಷತ್ ಸದಸ್ಯರು ಭೋಜನಕೂಟದಲ್ಲಿ ಭಾಗಿಯಾಗಲಿದ್ದಾರೆ.

ಹೈಕಮಾಂಡ್ ಸೂಚನೆ ನೀಡಿದ ನಂತರವೇ ಶಾಸಕಾಂಗ ಪಕ್ಷದ ಸಭೆ ಕರೆಸಿದ್ದ ಯಡಿಯೂರಪ್ಪ, ಈಗ ಏಕಾಏಕಿ ಸಭೆ ರದ್ದು ಮಾಡಿದ್ದು ಯಾಕೆ? ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ವಿದಾಯದ ಭಾಷಣ ಮಾಡಲಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.ಆದರೆ, ಈಗ ನಾಯಕತ್ವ ಬದಲಾವಣೆ ಮಾಡದಂತೆ ವೀರಶೈವ ಲಿಂಗಾಯತ ಸಮುದಾಯ ಬಹಿರಂಗವಾಗಿ ಹೇಳಿಕೆ ನೀಡಿ ಯಡಿಯೂರಪ್ಪಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮಠಾಧೀಶರು, ಸಮುದಾಯದ ನಾಯಕರು ಭೇಷರತ್ ಬೆಂಬಲ ವ್ಯಕ್ತಪಡಿಸಿ ಬಿಎಸ್‌ವೈ ಬೆನ್ನಿಗೆ ನಿಂತಿದ್ದಾರೆ. ಇದರಿಂದ ಯಡಿಯೂರಪ್ಪ ರಾಜೀನಾಮೆ ನಿರ್ಧಾರ ಬದಲಿಸಿದರಾ? ಎನ್ನುವ ಅನುಮಾನ ಮೂಡುತ್ತಿದೆ.

error: Content is protected !!