₹ 840 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ: ಸಂಶಯ ಪಿಶಾಚಿಗಳಾದ ಕಾಂಗ್ರೆಸ್ಸಿಗರಿಂದ ಲಸಿಕೆ, ಸೈನಿಕರ ವಿರುದ್ಧ ಅಪಪ್ರಚಾರ ಮೂಲಕ ಜನರ ದಾರಿ ತಪ್ಪಿಸುವ ಕೆಲಸ: ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ಹೇಳಿಕೆ: ಬಿಜೆಪಿ ಬೆಳ್ತಂಗಡಿ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆ

 

:    ಬೆಳ್ತಂಗಡಿ: ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ 840 ಕೋ.ರೂ. ಅಲ್ಲ, ಒಂದು ಸಾವಿರ ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ ತಾಲೂಕಿನ 81 ಗ್ರಾಮಗಳ 241 ಬೂತುಗಳಲ್ಲಿ ಅಭಿವೃದ್ಧಿ ಮಾಡಲು ಅವಕಾಶ ನೀಡಿದ ಕ್ಷೇತ್ರದ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬೆಳ್ತಂಗಡಿ ಶ್ರೀಮಂಜುನಾಥ ಸ್ವಾಮಿ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿತ್ವ ಹಾಗೂ ದಿಟ್ಟತನದ ನಿರ್ಧಾರದಿಂದ ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಎದುರಿಸಿ ಗೆದ್ದಿದ್ದೇವೆ. ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ಸಹಕಾರ ನೀಡಿವೆ. ದೇಶದಲ್ಲಿ ಮೋದಿ ಸರಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಜನಸ್ಪಂದನ ಯೋಜನೆಗಳ ಮೂಲಕ ದೇಶದ ಅಭಿವೃದ್ದಿಯ ಕ್ರಾಂತಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಲಸಿಕೆ, ಸೈನಿಕರ ವಿರುದ್ಧ ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಕಾಂಗ್ರೆಸ್ಸಿಗರು ಸಂಶಯ ಪಿಶಾಚಿಗಳು ಎಂದರು.
ಕ್ಷೇತ್ರದ ರೈತರಿಗೆ ಅನುಕೂಲವಾಗಲು ನೀರಾವರಿಗೆ ಒತ್ತು ಕೊಟ್ಟು ನಮ್ಮ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಬೃಹತ್ ನೀರಾವರಿ ಇಲಾಖೆಯಿಂದ 240 ಕೋ. ರೂ. ಅನುದಾನ ಬೆಳ್ತಂಗಡಿ ಏತ ನೀರಾವರಿ ಯೋಜನೆಗೆ ಘೋಷಣೆಯಾಗಿದೆ. ಜಿಲ್ಲೆಯಲ್ಲಿ ಹಲವಾರು ಹೋರಾಟಗಳು ನಡೆದಿದೆ. ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ನಡೆಸಿದ ಎತ್ತಿನಹೊಳೆ ಯೋಜನೆ ವಿರುದ್ದ ಹೋರಾಟದ ಪ್ರತಿಫಲವಾಗಿ ಸರಕಾರ ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಕಳೆದ ಬಜೆಟ್ಟಿನಲ್ಲಿ ಯಡಿಯೂರಪ್ಪ ಸರಕಾರ ಈ ಯೋಜನೆಗೆ ಸುಮಾರು 4 ಸಾವಿರ ಕೋ. ರೂ.ಗಳ ಅನುದಾನದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಿಗೆ ಸುಮಾರು 1400 ಕಿಂಡಿ ಆಣೆಕಟ್ಟು ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.
ಮುಗೇರಡ್ಕ ಹಾಗೂ ಗುರುವಾಯನಕೆರೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ಜತೆಗೆ ಸೇತುವೆ, 9 ಗ್ರಾಮಗಳಿಗೆ ನೀರಾವರಿ ವ್ಯವಸ್ಥೆ ಈ ಯೋಜನೆಯ ಮೂಲಕ ಮಾಡಲಾಗುವುದು. ರಸ್ತೆ ಅಭಿವೃದ್ದಿ ಜತೆಗೆ ವಿದ್ಯುತ್ ಸಮಸ್ಯೆ ನಿವಾರಣೆ ದೃಷ್ಟಿಯಿಂದ ಮುಖ್ಯಮಂತ್ರಿ 32 ಕೋ.ರೂ. ಬಿಡುಗಡೆ ಮಾಡಿ 560 ಟ್ರಾನ್ಸ್‌ಫಾರ್ಮರ್‌ಗಳನ್ನು ನೀಡಿದ್ದಾರೆ ಎಂದರು.
ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕೆಲಸಗಳು ತಳಮಟ್ಟದ ಕಾರ್ಯಕರ್ತರ ಮೂಲಕ ಮನೆಮನೆ ತಲುಪುವ ಕೆಲಸ ಆಗಬೇಕು. ಇಲ್ಲಿನ ಶಾಸಕರ ಕಾರ್ಯ ವೈಖರಿಯಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಜನ ಗುರುತಿಸುವ ಅಭಿವೃದ್ಧಿ ಕಾರ್ಯ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ , ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಯ ಮೂಲಕ ಪಕ್ಷದ ಕಾರ್ಯಕರ್ತರು ಶ್ರಮದಿಂದ ಚುನಾವಣೆಗಳಲ್ಲಿ ಗೆಲುವನ್ನು ಸಾಧಿಸಿದ್ದೇವೆ. ಶಾಸಕರ ಮುತುವರ್ಜಿಯಿಂದ ಸರಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದು, ಅಭಿವೃದ್ಧಿ ಕೆಲಸಗಳು ಬೆಳ್ತಂಗಡಿ ಕ್ಷೇತ್ರದಲ್ಲಿ ಆಗುತ್ತಿದೆ. ಮುಂಬರುವ ಚುನಾವಣೆಯಲ್ಲೂ ಪಕ್ಷದಲ್ಲಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ಸಿಗಲಿದೆ ಎಂದರು.
ಇದೇ ಸಂದರ್ಭ ಇತ್ತೀಚೆಗೆ ನಿಧನರಾದ ಹಿರಿಯ ಸಹಕಾರಿ ಎನ್.ಎಸ್. ಗೋಖಲೆ, ಕಾರ್ಯಕರ್ತ ವಿಖ್ಯಾತ ಆಚಾರ್ಯ ಹಾಗೂ ತಾಲೂಕಿನಲ್ಲಿ ಕೋವಿಡ್ ನಿಂದ ನಿಧನರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ರಾಜ್ಯಾಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಉಪಾಧ್ಯಕ್ಷರಾದ ಸೀತಾರಾಮ ಬೆಳಾಲು ಇದ್ದರು.
ಮಂಡಲ ಉಪಾಧ್ಯಕ್ಷ ಹರೀಶ್ ಸಾಲಿಯಾನ್ ಸ್ವಾಗತಿಸಿ, ಮಂಡಲ ಪ್ರ. ಕಾರ್ಯದರ್ಶಿ ಶ್ರೀನಿವಾಸ ರಾವ್ ಹಾಗೂ ಸಹಕಾರ ಭಾರತಿ ಪ್ರ. ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು. ಮಂಡಲ ಪ್ರ. ಕಾರ್ಯದರ್ಶಿ ಗಣೇಶ್ ಗೌಡ ವಂದಿಸಿದರು.

error: Content is protected !!