ಬೆಳ್ತಂಗಡಿ: ದೇವರ ಪ್ರೀತಿ ಅರಿಯಲು ಮನುಷ್ಯನ ಮೂಲಕ ಸಾಧ್ಯ. ಕೋವಿಡ್ ನಂತಹ ಸಾಂಕ್ರಾಮಿಕ ರೋಗ ನಿಯಂತ್ರಣ ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಜನರ ಕಷ್ಟ ದುಃಖ ಅರಿತು ಸಂಘ ಸಂಸ್ಥೆಗಳು ಕೈ ಜೋಡಿಸಿದರೆ ಪಿಡುಗು ನಿವಾರಿಸಬಹುದಾಗಿದೆ. ಆ ಕೆಲಸವನ್ನು ಪ್ರಚಾರ ಬಯಸದೆ ನಮ್ಮಪ್ರಾಂತ್ಯ ಮತ್ತು ಸಹಸಂಸ್ಥೆಗಳು ಮಾಡುತ್ತಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.
ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್ , ಸಂತ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ , ಮಾತೃವೇಧಿ ಘಟಕ , ಪಿತೃವೇಧಿ ಘಟಕ , ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಇವುಗಳ ಸಂಯುಕ್ತ ಆಶ್ರಯದೊಂದಿಗೆ ಕಾರಿತಾಸ್ ಇಂಡಿಯಾ ನವದೆಹಲಿ ಹಾಗೂ ಜರ್ಮನಿ, ಕ್ಯಾಥೋಲಿಕ್ ನಿಯರ್ ಈಸ್ಟ್ ವೆಲ್ಫೇರ್ ಎಸೋಸಿಯೇಶನ್ ಹಾಗೂ ಸ್ನೇಹಸಧನ ಮಂಗಳೂರು ಇವರ ಆರ್ಥಿಕ ನೆರವಿನೊಂದಿಗೆ ಜ. 14 ರಂದು ಜ್ಞಾನ ನಿಲಯ ಬೆಳ್ತಂಗಡಿ ಯಲ್ಲಿ, ಕೋವಿಡ್ -19 ಆಹಾರ ಹಾಗೂ ಮೆಡಿಕಲ್ ಕಿಟ್ ವಿತರಣೆ, ಎರಡು ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭವನ್ನು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಹೆಚ್ ಉದ್ಘಾಟಿಸಿ ಮಾತನಾಡಿ, ಕೋವಿಡ್ ನಲ್ಲಿ ನಾವೆಲ್ಲರೂ ಮನೆಯೊಳಗೆ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾದರೂ ಮನಸ್ಸು ಬೇರೆಯವರಿಗಾಗಿ ತೆರೆದುಕೊಳ್ಳುವ ಅವಕಾಶ ಬಂತು. ಸಂಘ ಸಂಸ್ಥೆ ನೀಡುವ ನೆರವುಗಳ ಹಿಂದೆ ಬಡವರ ಸಂಕಷ್ಟಕ್ಕೆ ನೆರವು ಮತ್ತು ಹೋರಾಟಗಾರರಿಗೆ ಸಹಾಯ ಎಂಬ ಭಾವ ಅಡಕವಾಗಿದೆ ಎಂದರು.
ಕೆಎಸ್‌ಎಂಸಿಎ ಅಧ್ಯಕ್ಷ ಕೆ.ಕೆ ಸೆಬಾಸ್ಟಿಯನ್ ಗೃಹರಕ್ಷಕ ದಳದವರಿಗೆ ಆಹಾರದ ಕಿಟ್ ವಿತರಿಸಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಆಶಾ ಕಾರ್ಯಕರ್ತರ ಮೇಲ್ವಿಚಾರಕಿ ಹರಿಣಿ ಪುತ್ತೂರು, ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ ಶುಭಕೋರಿದರು.
ಫ್ಯಾಮಿಲಿ ಅಪೋಸ್ಟಲೇಟ್ ನಿರ್ದೇಶಕರ ವಂ.ಫಾ | ಜೋಸೆಫ್ ಚೀರನ್, ವಿನ್ಸೆಂಟ್ ಡಿ. ಪಾವ್ಲ್ ಸೊಸೈಟಿಯ ಧರ್ಮಪ್ರಾಂತೀಯ ಅಧ್ಯಕ್ಷ ಪೌಲೋಸ್ ರಾಜನ್, ಪಿತ್ರು ವೇದಿ ಅಧ್ಯಕ್ಷ ಟೈಟಸ್, ಮಾತ್ರುವೇದಿ ಅಧ್ಯಕ್ಷೆ ಶೈನಿ ಮಾಳಿಯೇಕಲ್, ಎಸ್ ವೈಎಮ್ ಅಧ್ಯಕ್ಷ ಪ್ರಮೋದ್, ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಮಂಜುಳಾ ಜಾನ್, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ತಾ.ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್, ಫಾ.ಮ್ಯಾಥ್ಯೂ ತಾಝೇಕಾಟಿಲ್, ಮ್ಯಾಥ್ಯೂ ಅಂಬಾಟ್, ಫಾ.ಜೋಸೆಫ್ ಮಾಟ್ಟಂ ಇವರು ಭಾಗಿಯಾಗಿದ್ದರು.
ಸಿಸಿಲಿಯಾ ಮತ್ತು ಮಾರ್ಕ್ ಡಿಸೋಜಾ ಪ್ರಾರ್ಥನೆ ಸಲ್ಲಿಸಿದರು. ಡಿಕೆಆರ್‌ಡಿಎಸ್ ನಿರ್ದೇಶಕ ರೆ. ಫಾ . ಬಿನೋಯಿ ಎ. ಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿರ್ದೇಶಕ ವಂ. ಫಾ ಮ್ಯಾಥ್ಯೂ ವೆಟ್ಟಂತಡತ್ತಿಲ್ ಧನ್ಯವಾದ ಸಲ್ಲಿಸಿದರು.