ಕಟ್ಟಡ ಕಾರ್ಮಿಕರ ಕಿಟ್ ಸಮಗ್ರ ವಸ್ತುಗಳೊಂದಿಗೆ ಶೀಘ್ರ ಹಂಚಿಕೆ ಮಾಡಲು ಶಾಸಕರು ಕ್ರಮಕೈಗೊಳ್ಳಬೇಕು: ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ‌ ಹೇಳಿಕೆ: ಇಂಧನ, ಅಡುಗೆ ಅನಿಲ ಸೇರಿದಂತೆ ಬೆಲೆ ಏರಿಕೆ ಖಂಡಿಸಿ ಉಜಿರೆಯಿಂದ ಬೆಳ್ತಂಗಡಿವರೆಗೆ ಸೈಕಲ್ ಜಾಥಾ, ಪಾದಯಾತ್ರೆ

ಬೆಳ್ತಂಗಡಿ: ಕಟ್ಟಡ ಕಾರ್ಮಿಕರಿಗೆ ಸರ್ಕಾರ ಆಹಾರ ಕಿಟ್ ಘೋಷಣೆ ಮಾಡಿದೆ. ಅದರಲ್ಲಿ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಅವಲಕ್ಕಿ, ಅಡುಗೆ ಎಣ್ಣೆ, ಚಾಹುಡಿ, ಕಾಫಿ ಹುಡಿ, ತೊಗರಿಬೆಳೆ, ಸಾಂಬರ್ ಹುಡಿ‌ ಮೊದಲಾದ ಆಹಾರ ಸಾಮಗ್ರಿಗಳನ್ನು ಒಳಗೊಂಡ ಸುಮಾರು ಹತ್ತು ಸಾವಿರ ಕಿಟ್ ಬೆಳ್ತಂಗಡಿಗೂ ಬಂದಿದೆ. ಇದನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತೆಗೆದಿರಿಸಿದ್ದು, ಕೇವಲ ಕೇವಲ ಸಾಬೂನು, ಸ್ಯಾನಿಟೈಸರ್, ಮಾಸ್ಕ್ ಮಾತ್ರ ಅವರ ಸೂಚನೆಯಂತೆ ಅಧಿಕಾರಿಗಳು ನೀಡಿದ್ದಾರೆ.‌ ಅದ್ದರಿಂದ ಒಂದು ವಾರದ ಒಳಗಾಗಿ ಈ ಎಲ್ಲಾ ಆಹಾರ ಕಿಟ್ ಗಳನ್ನು ವಿತರಿಸುವ ಕೆಲಸವನ್ನು ಶಾಸಕರು ಮಾಡಬೇಕು. ಇಲ್ಲದಿದ್ದರೆ ಅವರು ಕಿಟ್ ನುಂಗಿದ್ದಾರೆ ಎಂಬ ಮಾತನ್ನು ಸಾರ್ವಜನಿಕವಾಗಿ ಹೇಳಬೇಕಾದ ಪರಿಸ್ಥಿತಿ ಬರಲಿದೆ ಎಂದು‌ ಮಾಜಿ ಶಾಸಕ ವಸಂತ ಬಂಗೇರ ತಿಳಿಸಿದರು.

ಅವರು‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ‌ಬೆಳ್ತಂಗಡಿ‌ ಘಟಕ‌ ಹಮ್ಮಿಕೊಂಡಿದ್ದ‌ ಉಜಿರೆಯಿಂದ ಬೆಳ್ತಂಗಡಿವರೆಗಿನ ಸೈಕಲ್ ರಾಲಿ ಹಾಗೂ ಪಾದಯಾತ್ರೆ ಉದ್ದೇಶಿಸಿ ಮಾತನಾಡಿದರು. ‌

ಮುಖ್ಯಮಂತ್ರಿ ಯಡಿಯೂರಪ್ಪನವರು ಅನೇಕ ಕೊಡುಗೆಗಳನ್ನು ಬಡವರಿಗೆ ಘೋಷಿಸಿದ್ದಾರೆ. ಅದರೆ ಯಾವುದೇ ರೀತಿಯ ಪ್ರಯೋಜನ ಯಾರಿಗೂ ಆಗಿಲ್ಲ ಕೇವಲ ಘೋಷಣೆಯಾಗಿ ಉಳಿದಿದೆ. ಕಳೆದ ಎರಡು ವರುಷಗಳಿಂದ ಕೊರೊನಾ ಸಂದರ್ಭಗಳಲ್ಲಿ ತೀವ್ರವಾಗಿ ಸಂಕಷ್ಟಕ್ಕೊಳಗಾಗಿದ್ದ ಅಟೋ ಚಾಲಕರಿಗೆ, ಹಾಗೂ ಇತರ ಕೆಲವೊಂದು ಸಮಾಜದವರಿಗೆ ಹಣವನ್ನು ಖಾತೆಗೆ ಜಮಾ ಮಾಡಲಾಗುವುದು ಎಂಬ ಭರವಸೆ ನೀಡಿದ್ದರು ಅದರೆ ಯಾರಿಗೂ ಹಣ ಬಂದಿಲ್ಲ ಎಂದು ಆರೋಪಿಸಿದರು. ‌

60 ವರ್ಷಗಳಲ್ಲಿ ಈ ದೇಶದವನ್ನು ಆಳಿದ ಕಾಂಗ್ರೆಸ್ ಪಕ್ಷ ಈ ದೇಶದ ಅಭಿವೃದ್ಧಿಯನ್ನು ಬಹಳ ಎತ್ತರಕ್ಕೆ ಏರಿಸುವಂತಹ ಕೆಲಸ ಮಾಡಿದೆ.‌ ಬಡವರನ್ನು ಬಡತನ ರೇಖೆಗಿಂತ ಮೇಲೆತ್ತುವ ಕೆಲಸವನ್ನು ಮಾಡಿದ ಪಕ್ಷ ಉಳುವವನೇ ಭೂಮಿಯ ಒಡೆಯ ಕಾನೂನನ್ನು ತಂದ್ದು ಅದೆಷ್ಟೋ ಬಡ ಜನರನ್ನು ಧಣಿಗಳನ್ನಾಗಿಸಿದೆ ಸರ್ಕಾರಿ ಭೂಮಿಯನ್ನು ಹೊಂದಿರುವಂತಹ ಬಡವರಿಗೆ ಅಕ್ರಮ ಸಕ್ರಮ ಹೆಸರಿನಲ್ಲಿ ಸ್ಥಳವನ್ನು ಮಂಜೂರು ಮಾಡುವಂತಹ ಕೆಲಸ ಆಗಿರಬಹುದು ಅದೆಷ್ಟೋ ವರುಷಗಳ ಹಿಂದೆ ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿ ಮನೆ ಕಟ್ಟಿ ಜೀವನ ನಡೆಸುತ್ತಿದ್ದ ಬಡವರಿಗೆ ಸರ್ಕಾರಿ ಸವಲತ್ತು ಪಡೆಯಲು ಅವಕಾಶ ಇಲ್ಲದೇ ಇದ್ದಾಗ 94 ಸಿ ಕಾನೂನನ್ನು ಜಾರಿಗೆ ತಂದ್ದು ಬಡವರಿಗೆ ನೆಮ್ಮದಿಯ ಜೀವನ ನಡೆಸುವಂತೆ ಮಾಡಿದೆ.‌ ಬೆಳ್ತಂಗಡಿ ತಾಲೂಕಿನಲ್ಲೂ ಅತೀ ಹೆಚ್ಚು ಜನ 94 ಸಿ ಹಕ್ಕು ಪತ್ರದ ಮೂಲಕ ಮನೆ ಕಟ್ಟಿಕೊಂಡಿದ್ದಾರೆ ಇದೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದರು.

ಜಾಥಾದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ, ಯುವ ಕಾಂಗ್ರೆಸ್ ನ‌ ಅಭಿನಂದನ್ ಹರೀಶ್ ಕುಮಾರ್, ಪಕ್ಷದ ವಕ್ತಾರ ಮನೋಹರ್ ಕುಮಾರ್ ಇಳಂತಿಲ, ಕೇಶವ ಗೌಡ‌‌, ಪಕ್ಷದ ಮುಖಂಡರು, ಕಾರ್ಯಕರ್ತರು ರಾಲಿಯಲ್ಲಿ ಭಾಗವಹಿಸಿದ್ದರು.

error: Content is protected !!