ಬೆಳ್ತಂಗಡಿ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರವಾರು ಮೀಸಲಾತಿ ವಿಂಗಡಿಸಿ ಕರಡು ಪ್ರತಿಯನ್ನು ಪ್ರಕಟಿಸಿದ್ದು, ದ.ಕ. ಜಿಲ್ಲಾ ಪಂಚಾಯತ್‌ಗೆ ಪ್ರಕಟಿಸಿರುವ ಮೀಸಲಾತಿ ಪಟ್ಟಿ ಅಸಮರ್ಪಕವಾಗಿದೆ ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಅಧ್ಯಕ್ಷ ಶೇಖರ್ ಧರ್ಮಸ್ಥಳ ತಿಳಿಸಿದರು.
ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನೊಳಗೊಂಡ ಬೆಳ್ತಂಗಡಿ ತಾಲೂಕಿಗೆ ಒಂದೇ ಒಂದು ಕ್ಷೇತ್ರವನ್ನೂ ಪ.ಜಾತಿ/ ಪಂಗಡದವರಿಗೆ ಮೀಸಲಿರಿಸದೆ ಪ.ಜಾತಿ/ಪಂಗಡದವರನ್ನು ಅವಕಾಶ ವಂಚಿತರನ್ನಾಗಿಸಿದೆ. ಈ ಪಟ್ಟಿಯನ್ನು ರದ್ದುಗೊಳಿಸಬೇಕು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೆ 42 ಕ್ಷೇತ್ರಗಳಿರುತ್ತವೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿವೆ. ಆದರೆ ಈ ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರವನ್ನೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಮೀಸಲಾಗಿರಿಸಿಲ್ಲ. ಇದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 162ರ ಪ್ರಕಾರ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳನ್ನು ಆಯಾ ವರ್ಗದ ಜನಸಂಖ್ಯೆಯ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬೆಳ್ತಂಗಡಿ ತಾಲೂಕಿನಲ್ಲಿ ಈ ವರ್ಗಕ್ಕೆ ಸೇರಿದ ಜನಸಂಖ್ಯೆ ಅತ್ಯಧಿಕವಾಗಿದೆ. ಭೌಗೋಳಿಕವಾಗಿ 81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳು ಮೂಲ ಸೌಕರ್ಯಗಳಿಂದ ಇನ್ನೂ ವಂಚಿತವಾಗಿವೆ. ತಾಲೂಕಿನ ಹಲವು ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಈ ವರ್ಗದ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಒದಗಿಸಬೇಕಾಗಿ ಈ ಮನವಿಯಲ್ಲಿ ವಿನಂತಿಸುತ್ತಿದ್ದೇವೆ. ಈ ಹಿಂದಿನ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದಾಗ ಮತ್ತು 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಾಗಿ ಪುನರ್ ವಿಂಗಡಣೆಗೊಂಡಾಗಲೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಮೀಸಲಿರಿಸಲಾಗಿತ್ತು. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಸ್ತುತ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಕನಿಷ್ಟ ಒಂದೂ ಕ್ಷೇತ್ರವನ್ನೂ ಮೀಸಲಾಗಿರಿಸಿಲ್ಲ. ಆದ್ದರಿಂದ ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಕರಡು ಅಧಿಸೂಚನೆಯಂತೆ ಜುಲೈ 01 ಕ್ಕೆ ನಾವು ಈ ಮೂಲಕ ಆಕ್ಷೇಪಣೆಯನ್ನು ಸಲ್ಲಿಸುತ್ತಿದ್ದೇವೆ. ಬೆಳ್ತಂಗಡಿ ತಾಲೂಕಿನ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕನಿಷ್ಠ 2 ಸ್ಥಾನಗಳನ್ನು ಅನುಸೂಚಿತ ಜಾತಿ/ ಪಂಗಡಕ್ಕೆ ಮೀಸಲಾಗಿರಿಸಿ ಪಟ್ಟಿಯನ್ನು ಪರಿಷೃತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಪಂಚಾಯತ್ ರಾಜ್ ಅಧಿನಿಯಮ ಕಲಂ 162(2)ರ ಪ್ರಕಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶೇಕಡಾ 50 ರಷ್ಟು ಮೀರದಂತೆ ಕ್ಷೇತ್ರಗಳನ್ನು ನಿಗದಿಪಡಿಸಬೇಕಾಗಿದ್ದು, ಈ ಕರಡು ಅಧಿನಿಯಮದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 42 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳನ್ನು ಈ ವರ್ಗಗಳಿಗೆ ಮೀಸಲಿರಿಸಬಹುದಾಗಿದೆ. ಆದರೆ ಈಗ 19 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಮೀಸಲಿರಿಸಿರುವುದರಿಂದ ಕನಿಷ್ಠ 2 ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನಾದರೂ ಅನುಸೂಚಿತ ಜಾತಿ/ಪಂಗಡದವರಿಗೆ ಮೀಸಲಿರಿಸಬೇಕಾಗಿ ಈ ಮೂಲಕ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಲಕ್ಷಣ್ ಜಿ. ಎಸ್.ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಾಮು ಪಡಂಗಡಿ, ರಾಘವ ಕಲ್ಮಂಜ ಉಪಸ್ಥಿತರಿದ್ದರು.