ಬೆಳ್ತಂಗಡಿ: ಇತ್ತೀಚೆಗೆ ಸರಕಾರ ಘೋಷಿಸಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣಾ ಮೀಸಲಾತಿ ತೀರ ಅವೈಜ್ಞಾನಿಕವಾಗಿದ್ದು ಇದರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇರವಾಗಿ ಶಾಮಿಲಾಗಿರುವುದು ಕಂಡು ಬರುತ್ತಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದರು.
ಅವರು ನಾರಾಯಣ ಗುರು ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೀಸಲಾತಿ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿ ಸಂಬಂಧಪಟ್ಟ ಅಧಿಕಾರಿಗಳು ಶಾಸಕರ ಆಣತಿಯಂತೆ ಅವರಿಗೆ ಬೇಕಾದಂತೆ ಮೀಸಲಾತಿ ಪಟ್ಟಿ ತಯಾರಿಸಿರುವುದು ಕಂಡು ಬರುತ್ತಿದೆ. ಬೆಳ್ತಂಗಡಿಯ ಇತಿಹಾಸದಲ್ಲಿ ಜಿ.ಪಂ. ಚುನಾವಣೆಯಲ್ಲಿ ಪ.ಜಾತಿ, ಪ.ಪಂಗಡಕ್ಕೆ ಒಂದೇ ಒಂದು ಕ್ಷೇತ್ರವನ್ನು ಮೀಸಲಿಡದೆ ಇರುವುದು ಆ ಸಮುದಾಯಗಳಿಗೆ ಶಾಸಕರು ಮಾಡಿದ ದ್ರೋಹವಾಗಿದೆ. ಇದು ಸಂವಿಧಾನದ ಅನುಚ್ಛೇದ 243( ಡಿ)ಯ ಉಲ್ಲಂಘನೆಯಾಗಿದೆ. ತಾಲೂಕಿನಲ್ಲಿ ಪ.ಜಾತಿ, ಪ.ಪಂಗಡದ ಒಟ್ಟು ಜನಸಂಖ್ಯೆ 40,958ಕ್ಕಿಂತ ಹೆಚ್ಚು ಇದ್ದರೂ ಇದೇ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪ.ಜಾತಿ, ಪ. ಪಂಗಡದವರಿಗೆ ಮೀಸಲಾತಿ ನೀಡಲಾಗಿಲ್ಲ. ತಾಲೂಕಿನ ಕೆಲವೊಂದು ಕಡೆ ಜಿ.ಪಂ. ಮತ್ತು ತಾ.ಪಂ. ಎರಡೂ ಕ್ಷೇತ್ರವನ್ನು ಸಾಮಾನ್ಯ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಧರ್ಮಸ್ಥಳ ತಾ.ಪಂ. ಕ್ಷೇತ್ರದಲ್ಲಿ ಈ ಹಿಂದೆಯೂ ಹಿಂದುಳಿದ ವರ್ಗ (ಎ) ಮೀಸಲಾತಿ ಇದ್ದಿದ್ದು ಈ ಬಾರಿ ಮತ್ತೊಮ್ಮೆ ಅದೇ ಮೀಸಲಾತಿ ಪುನರಾವರ್ತನೆಯಾಗಿದೆ. ತಾಲೂಕಿನ ರೆಖ್ಯಾ, ತೋಟತ್ತಾಡಿ, ಚಿಬಿದ್ರೆ ಗ್ರಾಮಗಳನ್ನು ಯಾವ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮೀಸಲಿರಿಸಿದ್ದಾರೆ ಎಂಬ ವಿವರಣೆ ಮೀಸಲಾತಿ ಪಟ್ಟಿಯಲ್ಲಿ ಇಲ್ಲ,ಈ ಪಟ್ಟಿಯನ್ನು ತಕ್ಷಣವೇ ರದ್ದು ಪಡಿಸಿ ಪರಿಷ್ಕ್ರತ ಮೀಸಲಾತಿ ಪಟ್ಟಿಯನ್ನು ಸರಕಾರ ಪ್ರಕಟಿಸಬೇಕೆಂದು ಒತ್ತಾಯ ಮಾಡುತಿದ್ದೇವೆ ಎಂದರು.
ನಾಳೆ ತೈಲ ಬೆಲೆ ಏರಿಕೆ ವಿರುದ್ಧ ಬೃಹತ್ ಸೈಕಲ್ ಜಾಥಾ:
ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ವತಿಯಿಂದ ಬುಧವಾರ ಬ್ರಹತ್ ಸೈಕಲ್ ಜಾಥಾ ಮತ್ತು ಪಾದಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಉಜಿರೆಯ ಪಿ.ಸಿ. ಪೈ ಪೆಟ್ರೋಲ್ ಬಂಕ್ ಬಳಿಯಿಂದ ಜಾಥಾ ಮತ್ತು ಪಾದಾಯಾತ್ರೆ ಪ್ರಾರಂಭಿಸಿ ಬೆಳ್ತಂಗಡಿಯ ಹಳೆಕೋಟೆ ಮಹಾವೀರ ಸರ್ವೀಸ್ ಸ್ಷೇಷನ್ ವರೆಗೆ ನಡೆಸಲಾಗುವುದು. ಜಾಥಾದ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮತ್ತು ಮಾಜಿ ಸಚಿವ ಗಂಗಾದರ ಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜು. 11ರಂದು ಬೃಹತ್ ರಕ್ತದಾನ ಶಿಬಿರ:
ಜುಲೈ 11 ರಂದು ಬೆಳಗ್ಗೆ 9-30 ರಿಂದ ಮಧ್ಯಾಹ್ನದವರೆಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕ ಮತ್ತು ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಗೌಡ, ನಗರ ವಕ್ತಾರ ಮನೋಹರ್ ಇಳಂತಿಲ, ಗ್ರಾಮೀಣ ವಕ್ತಾರ ಕೇಶವ .ಪಿ. ಬೆಳಾಲ್, ಎಸ್.ಸಿ. ನಗರ ಘಟಕದ ಅಧ್ಯಕ್ಷ ಬಿ.ಕೆ. ವಸಂತ, ಪ್ರಮುಖರಾದ ಚಂದು ಎಲ್, ಪ್ರಭಾಕರ್ ಶಾಂತಿಕೋಡಿ, ಮಾಲಾಡಿ ಗ್ರಾ.ಪಂ. ಸದಸ್ಯ ಬೇಬಿ ಸುವರ್ಣ ಉಪಸ್ಥಿತರಿದ್ದರು.