ರಾಜ್ಯದ 140 ಕೆರೆಗಳ ಸುತ್ತ ಅರಣ್ಯೀಕರಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿನೂತನ ಕಾರ್ಯ: ಕೆರೆಯಂಗಳದಲ್ಲಿ 17 ಸಾವಿರ ಸಸಿನಾಟಿ, ಸುಮಾರು 356 ಕೆರೆಗಳಿಗೆ ಕಾಯಕಲ್ಪ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯಾದ್ಯಂತ ಕೆರೆಗಳ ಪುನಃಶ್ಚೇತನ ಕಾರ್ಯ ನಡೆಸಲಾಗುತ್ತಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಮೂಲಕ ಸುಮಾರು 293 ಕೆರೆಗಳನ್ನು ಪುನಃಶ್ಚೇತನಗೊಳಿಸಲಾಗಿದೆ. ಸಂಸ್ಥೆಯ ಸಹಯೋಗದೊಂದಿಗೆ ಸರಕಾರದ ಕೆರೆ ಸಂಜೀವಿನಿ ಕಾರ್ಯಕ್ರಮದಂತೆ 63 ಕೆರೆಗಳನ್ನು ಪುನಃಶ್ಚೇತನಗೊಳಿಸಿದ್ದು, ಹೀಗೆ ಸುಮಾರು 356 ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ.

ಪುನಃಶ್ಚೇತನಗೊಂಡ ಕೆರೆಗಳ ಸಂರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವುದು ಅತೀ ಅನಿವಾರ‍್ಯವಾಗಿದೆ.

ಮುಖ್ಯವಾಗಿ ಅತಿಕ್ರಮಣ ತಡೆಗಟ್ಟುವುದು, ಕೆರೆಯ ಸುತ್ತ ಅರಣ್ಯೀಕರಣ, ಹೊಸದಾಗಿ ರಚನೆಗೊಂಡ ಏರಿಗಳು ಹಸಿರು ಹೊದಿಕೆ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿಯೇ ಯೋಜನೆಯು ಜುಲೈ ತಿಂಗಳಲ್ಲಿ ಕೆರೆಯಂಗಳದಲ್ಲಿ ಗಿಡನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ನಿಟ್ಟಿನಲ್ಲಿ 17 ಸಾವಿರ ಸಸಿಗಳ ನಾಟಿ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ಹೊಸದಾಗಿ ಪುನಃಶ್ಚೇತನಗೊಂಡ 140 ಕೆರೆಗಳ ಸುತ್ತ ಗಿಡನಾಟಿ ಕಾರ್ಯಕ್ರಮವು ನಡೆಯಲಿದೆ. ಮುಖ್ಯವಾಗಿ ಪ್ರಾಣಿ-ಪಕ್ಷಿಗಳಿಗೆ, ಜನ-ಜಾನುವಾರುಗಳಿಗೆ, ಹಣ್ಣು, ಹೂವು, ಮೇವು, ನೆರಳು ಕೊಡುವ ಗಿಡಗಳನ್ನು, ಕೆರೆ ಸಮಿತಿಗೆ ಆದಾಯ ತಂದುಕೊಡಬಹುದಾದ ವಿವಿಧ ಹಣ್ಣಿನ ಗಿಡಗಳ ನಾಟಿಗೆ ಆದ್ಯತೆ ನೀಡಲಾಗಿದೆ.ಅದೇ ರೀತಿ ನೂತನವಾಗಿ ನಿರ್ಮಿಸಿರುವ ಕೆರೆಯ ಏರಿ ಜರಿಯದಂತೆ ಏರಿಯ ಸುತ್ತ ಹುಲ್ಲು ಬೆಳೆಯುವ ಬೀಜಗಳ ಬಿತ್ತನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್‌ಗಳ ಸಹಕಾರ ಕೋರಲಾಯಿತು. ಹಾಗೂ ಗಿಡಗಳಿಗಾಗಿ ಸಾಮಾಜಿಕ ಅರಣ್ಯ ಇಲಾಖೆಯ ನೆರವನ್ನೂ ಪಡೆಯಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿಗಳು, ಜನಪ್ರತಿನಿಧಿಗಳು, ಗಣ್ಯರು, ಸ್ಥಳೀಯರು ಸೇರಿ 5 ಸಾವಿರ ಜನ ಭಾಗವಹಿಸಿ ಯಶಸ್ವಿಗೊಳಿಸಲಿದ್ದಾರೆ.

ನಾಟಿ ಮಾಡುವ ಪ್ರತೀ ಗಿಡಕ್ಕೆ ಬೇಲಿ ರಚಿಸಿ ನೀರು, ಗೊಬ್ಬರ ಹಾಕಿ ಪೋಷಿಸಿ ಸಂರಕ್ಷಿಸುವ ಜವಾಬ್ದಾರಿಯನ್ನು ಕೆರೆ ಅಭಿವೃದ್ಧಿ ಸಮಿತಿಯವರು ನಿರ್ವಹಿಸಲಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.

error: Content is protected !!