ಬೆಳ್ತಂಗಡಿ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾ.ಪಂಚಾಯತ್‌ಗೆ ಒಳಪಟ್ಟ ಕುದ್ರಡ್ಕ ಎಂಬಲ್ಲಿ ಮನೆಯೊಂದರ ಹಿಂಬಾಗಿಲ ಚಿಲಕ ಮುರಿದು ಒಳಹೊಕ್ಕ ಕಳ್ಳರು ಮನೆಯವರೆಲ್ಲರೂ ಮಲಗಿ ನಿದ್ರಿಸುತ್ತಿದ್ದಂತೆಯೇ ಗೃಹಿಣಿಯೊಬ್ಬರ ಕಾಲ್ಚೈನನ್ನೇ ತುಂಡರಿಸಿ ಕಳ್ಳತನವೆಸಗಿದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಇದರ ಜೊತೆಗೆ ಕಪಾಟಿನಲ್ಲಿಟ್ಟಿದ್ದ 20 ಸಾವಿರ ರೂ.ನಗದು ಕೂಡ ಕಳ್ಳರು ಹೊತ್ತೊಯ್ದಿದ್ದಾರೆ.
ಈ ಬಗ್ಗೆ ನವಾಝ್ ಕುದ್ರಡ್ಕ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ಶನಿವಾರ ತಡ ರಾತ್ರಿ ಮನೆಯ ಹಿಂಬಾಗಿಲಿನ ಚಿಲಕ ಮುರಿದ ಕಳ್ಳರು ಒಳ ಪ್ರವೇಶಿದ್ದರು. ಬಳಿಕ ಬೀಗ ಹಾಕದೇ ಇದ್ದ ಕಪಾಟು ಜಾಲಾಡಿ ಅದರಲ್ಲಿದ್ದ 20 ಸಾವಿರ ರೂ.ನಗದು ಕದ್ದೊಯ್ದಿದ್ದಾರೆ. ಅಲ್ಲೆ ಪಕ್ಕದಲ್ಲಿ ಮಲಗಿದ್ದ ನವಾಝ್ ಅವರ ಸಹೋದರಿಯು ಧರಿಸಿದ್ದ 16 ಗ್ರಾಂ. ಅಂದಾಜು ತೂಕದ ಚಿನ್ನದ ಕಾಲು ಚೈನ ನ್ನು ಕತ್ತರಿಸಿ ಕೊಂಡೋಗಿದ್ದಾರೆ.ಈ ವೇಳೆ ಮನೆಯಲ್ಲಿ ನವಾಝ್ ಅವರ ತಂದೆ ತಾಯಿ, ಒಂದು ರೂಮಿನಲ್ಲಿ ಅಣ್ಣ ರಿಯಾಝ್ ಅವರ ಪತ್ನಿ ಮಲಗಿದ್ದರು. ಎಲ್ಲರೂ ಅವರ ಪಾಡಿಗೆ ನಿದ್ರಿಸುತ್ತಿದ್ದಂತೆ ಈ ಕಳ್ಳತನ ಕೃತ್ಯ ನಡೆದಿರುವುದು ಆಶ್ಚರ್ಯ ಮೂಡಿಸಿದೆ.
ಬೆಳಿಗ್ಗೆ ಯಾವತ್ತೂ 5 ಗಂಟೆ ಸುಮಾರಿಗೆ ಮನೆಮಂದಿ ಎಚ್ಚರಗೊಳ್ಳುತ್ತಿದ್ದರಾದರೂ ಘಟನೆ ದಿನ ಎಲ್ಲರೂ ತಡವಾಗಿ, ಅಂದರೆ 6.45 ಕ್ಕೆ ಎಚ್ಚರಗೊಂಡಿದ್ದರು.ಆದ್ದರಿಂದ ಕಳ್ಳರೇನಾದರೂ ಮತ್ತು ಬರುವ ಸಾಧನವೇನಾದರೂ ಬಳಕೆ ಮಾಡಿದ್ದಾರೆಯೇ ಎಂಬ ಅನುಮಾನ ಕಾಡಿದೆ.
ಮನೆಯ ಹಿಂದಿನ ಬಾಗಿಲು ಸಾಮಾನ್ಯ ಸ್ವರೂಪದ್ದಾಗಿದ್ದು, ಅದರ ಚಿಲಕ ಕೂಡ ಅಷ್ಟಕ್ಕಷ್ಟೇ ಸಾಮರ್ಥ್ಯದ್ದು ಎಂದು ತಿಳಿದುಬಂದಿದೆ. ಕಳ್ಳರು ಇದನ್ನು ಅತ್ಯಂತ ಸರಳ ರೀತಿಯಲ್ಲೇ ಮುರಿದು ಒಳಪ್ರವೇಶಿದ್ದಾರೆ. ಕೃತ್ಯವೆಸಗಿ ಸಲೀಸಾಗಿ ಮರಳಿದ್ದಾರೆ.
ಘಟನಾ ಸ್ಥಳಕ್ಕೆ ಎಡಿಷನಲ್ ಎಸ್ಪಿ ಭಾಸ್ಕರ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಪುಂಜಾಲಕಟ್ಟೆ ಠಾಣಾ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕುಟ್ಟಿ ಎಂ.ಕೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರೂ ಆಗಮಿಸಿ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ. ಕಳ್ಳತನವಾದ ಚಿನ್ನ ಹಾಗೂ ನಗದು ಸೇರಿ ಸೊತ್ತಿನ ಒಟ್ಟು ಮೌಲ್ಯ 1 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.