ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಾಜೆ ಕಂಟೋನ್ಮೆಂಟ್ ವಲಯದ ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಕಳೆದ ಒಂದು ವಾರದಲ್ಲಿ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಾಜೆಯ ಬಡಾವಣೆಯೊಂದರಲ್ಲಿ 23 ಮನೆಗಳಲ್ಲಿ 39 ಮಂದಿಗೆ ಕೊರೊನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಡಾವಣೆಯನ್ನು ಕಂಟೋನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿತ್ತು. ಈ ಪರಿಸರದಲ್ಲಿ ಸುಮಾರು 60 ಮನೆಗಳಿದ್ದು ಹೆಚ್ಚಿನ ಮನೆಯವರು ದಿನಗೂಲಿ ಸಂಬಳಕ್ಕೆ ದುಡಿಯುವವರಾಗಿದ್ದಾರೆ ಈ ಬಗ್ಗೆ ಮಾಹಿತಿ ಪಡೆದುಕೊಂಡ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಹೈಕೊರ್ಟ್ ವಕೀಲ ರಕ್ಷಿತ್ ಶಿವರಾಂ ಸಮಸ್ಯೆಯಲ್ಲಿ ಇರುವ ಸುಮಾರು 45 ಮನೆಗಳಿಗೆ ಆಹಾರ ಕಿಟ್ ವ್ಯವಸ್ಥೆಯನ್ನು ಮಾಡಿದ್ದಲ್ಲದೆ ಇಂದು ಖುದ್ಧಾಗಿ ಭೇಟಿ ನೀಡಿ ಅವರೆಲ್ಲರ ಆರೋಗ್ಯ ವಿಚಾರಿಸಿ ಆಹಾರ ಕಿಟ್ ವಿತರಿಸಿದರು.
ಈಗಾಗಲೇ ತಾಲೂಕಿನ ಹಳ್ಳಿ ಹಳ್ಳಿಗೆ ಆರ್ಥಿಕವಾಗಿ ಸಮಸ್ಯೆಯಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಆಹಾರ ಕಿಟ್ ವಿತರಿಸುತ್ತಿರುವ ಇವರ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಿಟ್ ವಿತರಿಸುವ ಸಂದರ್ಭದಲ್ಲಿ, ಯುವ ಕಾಂಗ್ರೆಸ್ ಬೆಳ್ತಂಗಡಿ ನಗರ ಅಧ್ಯಕ್ಷ ಅನಿಲ್ ಪೈ, ಯುವ ಇಂಟೆಕ್ ನಗರ ಅಧ್ಯಕ್ಷ ನವೀನ್ ಗೌಡ, ಬೆಳ್ತಂಗಡಿ ಸೇವಾದಳ ಸಾಮಾಜಿಕ ಜಾಲತಾಣದ ಗಣೇಶ್ ಕಣಿಯೂರು, ಅಜಯ್ ಮಟ್ಲಾ, ಪ್ರಜ್ವಲ್ ಜೈನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.