ಬ್ಯಾರಿಕೇಡ್ ತೊಳೆದು ಸ್ವಚ್ಛತೆ, ‘ಲಾಯಿಲ ಕೊರೊನಾ ವಾರಿಯರ್ಸ್‌’ ಮಾದರಿ ಕಾರ್ಯ: ಸರಕಾರಿ‌ ಕೆಲಸ, ವಸ್ತುಗಳ ನಿರ್ಲಕ್ಷ್ಯ ‌ಮಾಡುವವರು ಒಮ್ಮೆ ಇತ್ತ ನೋಡಿ

ಬೆಳ್ತಂಗಡಿ: ಸರ್ಕಾರಿ ಸ್ವತ್ತುಗಳೆಂದರೆ ಕೆಲವರಿಗೆ ಅದೆನೋ ನಿರ್ಲಕ್ಷ್ಯ ಭಾವನೆ ಅದನ್ನು ರಕ್ಷಿಸುವುದಕ್ಕಿಂತಲೂ ಅದನ್ನು ಹಾಳು ಮಾಡುವವರೇ ಹೆಚ್ಚು ಅದರಲ್ಲೂ ಜನರ ಹಾಗೂ ವಾಹನ ನಿಯಂತ್ರಣಕ್ಕಾಗಿ ಪೊಲೀಸರು ಹಾಕುವಂತಹ ಬ್ಯಾರಿಕೇಡ್ ನೋಡಿದ ಕೂಡಲೇ ಕೋಪದಿಂದ ಗರ್ಜಿಸುವವರೇ ಹೆಚ್ಚು, ಇಲ್ಲ ನಿರ್ಲಕ್ಷ್ಯ ದಿಂದ ಮುಂದೆ ಸಾಗುವವರೇ ಹೆಚ್ಚು. ಅದರೆ ‘ಲಾಯಿಲ ಕೊರೋನಾ ವಾರಿಯರ್ಸ್’ ಸರ್ಕಾರದ ಸ್ವತ್ತನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬಂತೆ ಬ್ಯಾರಿಕೇಡ್ ಗಳನ್ನು ತೊಳೆದು ಶುಚಿಗೊಳಿಸುವ ಮೂಲಕ ಎಲ್ಲರಿಗೂ ಒಂದು ಉತ್ತಮ ಸಂದೇಶ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಬೆಳ್ತಂಗಡಿ ತಾಲೂಕಿನ ಕೆಲವೊಂದು ಗ್ರಾಮಗಳನ್ನು ಒಂದು ವಾರಗಳ ಕಾಲ ಸೀಲ್ ಡೌನ್ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಸೀಲ್ ಡೌನ್ ಮಾಡಲಾಗಿದೆ. ಗ್ರಾಮ ಸಂಪರ್ಕಿಸುವ ರಸ್ತೆಗಳಿಗೆ ಸಂಚಾರ ನಿರ್ಬಂಧಿಸಲು ಬ್ಯಾರಿಕೇಡ್ ಅಳವಡಿಸಿ ಕೋವಿಡ್ ವಾರಿಯರ್ಸ್‌ ಗಳನ್ನು ನಿಯೋಜನೆ ಮಾಡಲಾಗಿದೆ. ಇದೇ ರೀತಿ ಮುಖ್ಯ ರಸ್ತೆಯಿಂದ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವೇಕಾನಂದ ನಗರವನ್ನು ಸಂಪರ್ಕಿಸುವ ರಸ್ತೆಯಲ್ಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಅದರೆ ಇಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಹೇಶ್ ಕುಲಾಲ್ ಮತ್ತು ಹರೀಶ್ ಕುಲಾಲ್ ಇವರ ಸಹಕಾರದಲ್ಲಿ ಕೋವಿಡ್ ವಾರಿಯರ್ಸ್‌ಗಳಾದ ಸುನಿಲ್ ಕುಮಾರ್, ಸಂತೋಷ್ ಎಸ್, ವಿನೋಧರ ಕುಂಬಾರ ಅವರು ಸಂಚಾರ ನಿಷೇಧಿಸುವ ಜೊತೆಗೆ ಲಭ್ಯ ಸಮಯದಲ್ಲಿ ಬ್ಯಾರಿಕೇಡ್ ಗಳನ್ನು ತೊಳೆದು ಸ್ವಚ್ಛಗೊಳಿಸಿ ಸರ್ಕಾರದ ಸ್ವತ್ತುಗಳನ್ನು ಹಾಳುಮಾಡದೆ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಸಂದೇಶವನ್ನು ನೀಡಿದ್ದಾರೆ.

ಈ ಮೂಲಕ ಸರಕಾರಿ‌ ಕೆಲಸ, ಸರಕಾರಿ ವಸ್ತುಗಳ ನಿರ್ಲಕ್ಷ್ಯ ‌ಮಾಡುವ ಮಂದಿಗೆ ಮಾದರಿಯಾಗಿದ್ದಾರೆ.

ಕೋವಿಡ್ ವಾರಿಯರ್ಸ್‌ ಗಳಿಂದ ಶ್ರಮದಾನ

ಲಾಯಿಲ ನಡ ಗ್ರಾಮದ ಗಡಿ ಭಾಗದ ಕುತ್ರೊಟ್ಟು ಎಂಬಲ್ಲಿ ಲಾಯಿಲ ಗ್ರಾಮವನ್ನು ಸೀಲ್ ಡೌನ್ ಮಾಡಿರುವುದರಿಂದ ಕೋವಿಡ್ ವಾರಿಯರ್ಸ್‌ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮಳೆಯ ನೀರು ರಸ್ತೆಯಲ್ಲಿ ನಿಂತಿರುವುದನ್ನು ಗಮನಿಸಿ ಗ್ರಾ.ಪಂ ಸದಸ್ಯ ದಿನೇಶ್ ಶೆಟ್ಟಿಯವರ ಸಹಕಾರದಲ್ಲಿ ಶ್ರಮದಾನದ ಮೂಲಕ ಸಮೀಪದ ಚರಂಡಿಗೆ ನೀರು ಹರಿದು ಹೋಗುವಂತೆ ಮಾಡಿದರು.

error: Content is protected !!