ಎಚ್ಚೆತ್ತುಕೊಳ್ಳಬೇಕಿದೆ ‌ಜಿಲ್ಲಾಡಳಿತ!: ‘ನಿಯಮ’ವಿದ್ದರೂ‌ ಪಾಲನೆ ಮಾಡದ ಜನತೆ!: ಪ್ರಾಮಾಣಿಕರಿಗೂ ಹೆಚ್ಚುವರಿ ಎರಡು ವಾರ ಲಾಕ್ ಡೌನ್ ಶಿಕ್ಷೆ!: ಬೆಳ್ತಂಗಡಿಯಲ್ಲಿ ಶುಕ್ರವಾರ ಭರ್ಜರಿ ಜನ ಸಂಚಾರ!: ಕಠಿಣ ಕ್ರಮಕೈಗೊಳ್ಳಬೇಕಿದೆ ಆರಕ್ಷಕರು, ಸಡಿಲಿಕೆ ಸಮಯದಲ್ಲೂ ಗಸ್ತು ಅವಶ್ಯ: ಒಂದು ವಾರ ಮೊದಲೇ ದ.ಕ. ಲಾಕ್,  ನಿರ್ಲಕ್ಷ್ಯದಿಂದ ಇಳಿಯದ ಪಾಸಿಟಿವ್ ‌ಕೇಸ್!: ಬೆಳ್ತಂಗಡಿಗೆ ಅನಿವಾರ್ಯವೇ ಕಂಪ್ಲೀಟ್ ಲಾಕ್ ಡೌನ್…?

ಬೆಳ್ತಂಗಡಿ: ಇಡೀ ರಾಜ್ಯ ಲಾಕ್ ಡೌನ್ ಮಾಡುವ ಒಂದು ವಾರ ಮುಂಚಿತವಾಗಿ ದ.ಕ. ಜಿಲ್ಲೆಯಲ್ಲಿ ‌ಲಾಕ್ ಡೌನ್ ಮಾಡಲಾಗಿತ್ತು. ಬೆಳಗ್ಗೆ 6ರಿಂದ 10ರವರೆಗೆ ನಿಯಮ ‌ಸಡಿಲಿಕೆ ಮಾಡಲಾಗಿತ್ತು. ಇದೀಗ ರಾಜ್ಯವನ್ನು ಹೆಚ್ಚುವರಿ ಒಂದುವಾರ ಲಾಕ್ ಮಾಡಿಯೂ ರಾಜ್ಯದ ಹಲವು ಜಿಲ್ಲೆಗಳು ಅನ್ ಲಾಕ್ ಆದರೂ‌ ದ.ಕ. ಜಿಲ್ಲೆಗೆ ಮಾತ್ರ ಇನ್ನೂ‌ ಒಂದು ವಾರ ಹೆಚ್ಚುವರಿ ಲಾಕ್ ಡೌನ್ ವಿಧಿಸಲಾಗಿದೆ. ಎಷ್ಟು ದಿನ ಲಾಕ್ ಮಾಡಿದರೂ ‌ಬೆಳಗ್ಗಿನ ನಿಯಮ ಸಡಿಲಿಕೆ ಅವಧಿ ಹಾಗೂ ಇತರ ಸಂದರ್ಭದಲ್ಲಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಬರೀ ಒಂದು ವಾರವಲ್ಲ, ಒಂದು ತಿಂಗಳು ಹೆಚ್ಚುವರಿ ಲಾಕ್ ಡೌನ್ ವಿಧಿಸಿದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಯಾರೋ ಅನಗತ್ಯ ಓಡಾಟ ನಡೆಸಿ ನಿಯಮ ಉಲ್ಲಂಘಿಸುವವರಿಂದಾಗಿ ಪ್ರಾಮಾಣಿಕವಾಗಿ ಮನೆಯಲ್ಲಿ ಕೂತು ಲಾಕ್ ಡೌನ್ ನಿಯಮ ಪಾಲನೆ ಮಾಡುವವರೂ ಶಿಕ್ಷೆ ಅನುಭವಿಸುವಂತಾಗಿದೆ.

ಲಾಕ್ ಡೌನ್ ವಿಧಿಸಿರುವ ಸಂದರ್ಭದಲ್ಲಿ ಜನತೆಗೆ‌ ಅನುಕೂಲವಾಗುವಂತೆ ಬೆಳಗ್ಗೆ 6ರಿಂದ 10ರವರೆಗೆ ನಿಯ‌ಮ ಸಡಿಲಿಕೆ ಮಾಡಲಾಗಿದೆ. ಆದರೆ ಈ ಸಂದರ್ಭದಲ್ಲೇ ಹೆಚ್ಚು ಜನಜಂಗುಳಿ ‌ನಿರ್ಮಾಣವಾಗುತ್ತಿದೆ‌. ಇದು ಇಷ್ಟಕ್ಕೇ ಮುಗಿದಿಲ್ಲ, 10 ಗಂಟೆ ಬಳಿಕ ಸಂಜೆ, ರಾತ್ರಿವರೆಗೂ ಗ್ರಾಮೀಣ ಭಾಗದಲ್ಲಿ ಓಡಾಟ ಬಿಂದಾಸ್ ಆಗಿ ನಡೆಯುತ್ತಿದೆ‌. ಕುಂಟು ನೆಪ‌ ಹೇಳಿಕೊಂಡು, ತಮಗೆ ಬೇಕಾದಂತೆ ಸಂಚರಿಸುತ್ತಿದ್ದಾರೆ. ಕೇವಲ ಕೆಲ ಜಾಗಗಳಲ್ಲಿ ಮಾತ್ರ ಚೆಕ್ ಪೋಸ್ಟ್ ಮಾಡಲಾಗಿದ್ದು ಇದನ್ನು ತಪ್ಪಿಸಿ ಒಳ ದಾರಿಗಳಲ್ಲಿ ಜನ ಯಾವುದೇ ಭೀತಿ ಇಲ್ಲದೆ ಓಡಾಟ ನಡೆಸುತ್ತಿದ್ದಾರೆ. ಚೆಕ್ ಪೋಸ್ಟ್ ಗಳಲ್ಲೂ ಗಂಭೀರ ರೀತಿಯಲ್ಲಿ ತಪಾಸಣೆ ನಡೆಯುತ್ತಿಲ್ಲ.

ಶುಕ್ರವಾರ ಬೆಳ್ತಂಗಡಿಯಲ್ಲಿ ಜನಜಂಗುಳಿ: 

ಗುರುವಾರ ಮುಖ್ಯಮಂತ್ರಿಗಳು‌ ದ.ಕ. ಜಿಲ್ಲೆಯಲ್ಲಿ ಕೊರೋನಾ ಸಂಖ್ಯೆ ನಿಯಂತ್ರಣ ಬಾರದ ಹಿನ್ನೆಲೆ ಲಾಕ್ ಡೌನ್ ಮುಂದುವರಿಸುವುದಾಗಿ ತಿಳಿಸಿದ್ದರು. ಆದರೆ ಗುರುವಾರ ಬೆಳಗ್ಗೆ ನಿಯಮ ಸಡಿಲಿಕೆ ಅವಧಿಯಲ್ಲಿ ತಾಲೂಕಿನ ಕೇಂದ್ರ‌ ಭಾಗವಾದ ಬಸ್ ನಿಲ್ದಾಣ, ಸಂತೆಕಟ್ಟೆ, ಗುರುವಾಯನಕೆರೆ ಮೊದಲಾದ ಪ್ರದೇಶಗಳಲ್ಲಿ ವಾಹನ ಸಂಚಾರ, ಜನಜಂಗುಳಿ ಕಂಡುಬಂತು. ಜನರ ಅನುಕೂಲಕ್ಕಾಗಿ ಮಾಡಿರುವ ಲಸಿಕೆ ಕೇಂದ್ರ, ಆರೋಗ್ಯ ಕೇಂದ್ರ, ಮೆಡಿಕಲ್, ದಿನಬಳಕೆ ವಸ್ತು ಖರೀದಿ ಮಳಿಗೆ, ಮೊದಲಾದ ತುರ್ತು ಅವಶ್ಯ ಮಳಿಗೆ ತೆರೆದಿದ್ದರೂ ಜನ ಸಂದಣಿ ಮಾತ್ರ ಹೆಚ್ಚಾಗಿತ್ತು.!

ಕಾರ್ಯೋನ್ಮುಖವಾಗಬೇಕಿದೆ ಜಿಲ್ಲಾಡಳಿತ:

ಸಾರ್ವಜನಿಕರು ಕೆಲ ಸಂದರ್ಭಗಳನ್ನು ಬಳಸಿಕೊಂಡು ಬೇಕಾಬಿಟ್ಟಿ ಅಡ್ಡಾಡುತ್ತಿದ್ದಾರೆ. ಆದರೂ ನಿರ್ದಿಷ್ಟ ಸೂಚನೆ ಇಲ್ಲದ ಕಾರಣ ಆರಕ್ಷಕರೂ ಅಸಹಾಯಕರಾದಂತೆ ಕಂಡು ಬರುತ್ತಿದೆ. ಶುಕ್ರವಾರ ಸಂಜೆಯೂ ದ.ಕ. ಜಿಲ್ಲೆಯಲ್ಲಿ 500ಕ್ಕೂ ಮಿಕ್ಕಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೀಗೇ ಆದಲ್ಲಿ ಕೊರೋನಾ ನಿಯಂತ್ರಣ ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಬೆಳ್ತಂಗಡಿ, ಸುಳ್ಯ ಜಿಲ್ಲೆಗಳಿಂದಾಗಿ ಇಡೀ ಜಿಲ್ಲೆ ಲಾಕ್ ಡೌನ್ ವಿಸ್ತರಣೆ ಶಿಕ್ಷೆ ಅನುಭವಿಸುವಂತಾಗಿದೆ.

ಪರೀಕ್ಷೆ ಹೆಚ್ಚಳ: 

ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆರಂಭವಾಗಿದ್ದು ಈ ಸಂದರ್ಭದಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ ಎಂಬ ಮಾತೂ‌ ಕೇಳಿ ಬರುತ್ತಿದೆ. ಆದರೆ ಬೆಳ್ತಂಗಡಿ ತಾಲೂಕು, ಗ್ರಾಮೀಣ ಭಾಗಗಳ ಜನತೆಯ ನಿರ್ಲಕ್ಷ್ಯದ ಕೊಡುಗೆಯೂ ಇಲ್ಲ‌ ಎನ್ನುವಂತಿಲ್ಲ.

ಆ ಎರಡು ಹಳ್ಳಿಗಳಿಂದ ಪಾಠ ಕಲಿಯಬೇಕಿದೆ!: 

ಹಿಂದೆ ‌ಕುಗ್ರಾಮ‌ ಹಣೆಪಟ್ಟಿ ಹೊತ್ತು, ಮೂಲ ಸೌಕರ್ಯದಿಂದ ವಂಚಿತವಾಗಿ ಇಂದಿಗೂ‌ ಸಂಕಷ್ಟ‌ ಪಡುತ್ತಿರುವ ಎಳನೀರು, ಬಾಂಜಾರು ಮಲೆ‌ ಜನತೆಯಿಂತ‌ ತಾಲೂಕಿನ ‌ಜನತೆ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲಿನ ಜನತೆ ಕಟ್ಟುನಿಟ್ಟಾಗಿ ನಿಯಮ ಪಾಲನೆ ‌ಮಾಡಿ, ಕೊರೋನಾ ಬಾರದಂತೆ ‌ಎರಡು ವರ್ಷಗಳ ಕಾಲ ‌ತಡೆಗಟ್ಟುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ.

ಗ್ರಾಮಗಳ‌ ಟಾಸ್ಕ್ ಫೋರ್ಸ್ ವೈಫಲ್ಯ:

ಗ್ರಾಮೀಣ ‌ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ವಾರದಲ್ಲಿ ಸಭೆ ನಡೆಸಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಆದರೆ ಬೆಳ್ತಂಗಡಿ ತಾಲೂಕಿನ ‌ಬಹುತೇಕ ಯಾವುದೇ ‌ಗ್ರಾಮಗಳಲ್ಲೂ ಸಭೆ ನಡೆಯುತ್ತಿಲ್ಲ. ಕೊರೋನಾ ತಡೆಗಟ್ಟುವಲ್ಲಿ, ಲಸಿಕೆ ಜಾಗೃತಿ ‌ಮೂಡಿಸುವಲ್ಲಿಯೂ ಈ ತಂಡ ಸಂಪೂರ್ಣ ವಿಫಲವಾಗಿದೆ. ಇನ್ನು ಗ್ರಾಮೀಣ ಕಂದಾಯಾಧಿಕಾರಿಗಳು, ಗ್ರಾ.ಪಂ.‌ಸಿಬ್ಬಂದಿ ಕಚೇರಿಯಲ್ಲೇ ಸುಮ್ಮನೆ ಸಮಯ ಕಳೆಯುವಂತೆ ಗೋಚರಿಸುತ್ತಿದೆ. ಶುಕ್ರವಾರದಿಂದ ಕೊಯ್ಯೂರು ಗ್ರಾ.ಪಂ. ಸಂಪೂರ್ಣ ಲಾಕ್ ಡೌನ್ ಮೂಲಕ ಗಮನ ಸೆಳೆದಿದೆ.

ಸ್ಥಳೀಯಡಳಿತ ಮೌನ!:

ಕಳೆದ ವರ್ಷ ಲಾಕ್ ಡೌನ್ ನಡೆದ ಸಂದರ್ಭದಲ್ಲಿ ಸ್ಥಳೀಯ ‌ಆಡಳಿತ, ಜನಪ್ರತಿನಿಧಿಗಳು ಹೆಚ್ಚವರಿ ಕಾಳಜಿ ವಹಿಸಿ ಸಂಚಾರ ನಿಯಂತ್ರಣ ಹಾಗೂ ನಿಯಮ ಪಾಲನೆಗೆ ಆದ್ಯತೆ ನೀಡಿತ್ತು. ಆದರೆ ಈ ಬಾರಿ ವಾಹನ ಓಡಾಟ ಬಗ್ಗೆ ಯಾರೂ ಕ್ಯಾರೇ ಎನ್ನುತ್ತಿಲ್ಲ. ಕೆಲವು ಭಾಗಗಳಲ್ಲಿ ನಿಯಮ ಪಾಲನೆಯೂ ಉಲ್ಲಂಘನೆಯಾದರೂ ಯಾರೂ ಚಕಾರವೆತ್ತುತ್ತಿಲ್ಲ.

ಎಚ್ಚೆತ್ತುಕೊಳ್ಳಬೇಕಿದೆ ಆರಕ್ಷಕರು: 

ಬೆಳ್ತಂಗಡಿ ತಾಲೂಕಿನ ಪೊಲೀಸ್ ವೃತ್ತದಲ್ಲಿ ಬೆಳ್ತಂಗಡಿ, ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ ಹಾಗೂ ಬೆಳ್ತಂಗಡಿ ಸಂಚಾರಿ ಠಾಣೆಗಳಿವೆ. ಆದರೆ ಎಲ್ಲೂ ಪರಿಣಾಮಕಾರಿಯಾಗಿ ತಪಾಸಣೆ ಹಾಗೂ ನಿಯಮ ಉಲ್ಲಂಘಿಸಿದ ‌ವಾಹನಗಳ‌ ವಿರುದ್ಧ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳದಿರುವುದು, ಅನವಶ್ಯಕ ಓಡಾಟಕ್ಕೆ ಪೊಲೀಸ್ ಇಲಾಖೆಯೇ ಕುಮ್ಮಕ್ಕು ನೀಡಿದಂತೆ ಆಗಿದೆ. ಗ್ರಾಮೀಣ ಭಾಗದಲ್ಲಿ ವಾಹನಗಳು‌ ಮಧ್ಯಾಹ್ನ, ಸಂಜೆ, ರಾತ್ರಿ ‌ನಿರಂತರ ಸಂಚರಿಸಿದರೂ ಯಾರೂ‌ ಕೇಳುವವರೇ ಇಲ್ಲ‌ ಎಂಬಂತಾಗಿದೆ. ತಾಲೂಕಿನ ಆರಕ್ಷಕರು ಬಾಕಿ ಉಳಿದಿರುವ 10 ದಿನಗಳ ಅವಧಿಯಲ್ಲಾದರೂ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಜಾಗೃತರಾಗಬೇಕು ಜನತೆ: 

ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವಾರ ‌ಬಹುತೇಕ ದಿನಗಳಲ್ಲಿ ಸೋಂಕಿತರ ಸಂಖ್ಯೆ 100 ದಾಟುತ್ತಿತ್ತು. ಇನ್ನೂ ಈ ಪ್ರಮಾಣ‌ಕಡಿಮೆಯಾಗಿಲ್ಲ. ದ.ಕ. ಜಿಲ್ಲೆಯಲ್ಲಿ ಇನ್ನೂ‌ 19% ಪಾಸಿಟಿವ್ ಪ್ರಕರಣಗಳಿವೆ. ಜಿಲ್ಲೆಯನ್ನು ‌ಅನ್ ಲಾಕ್ ಮಾಡಬೇಕಾದಲ್ಲಿ ಶೇ 5ಕ್ಕಿಂತ ಕಡಿಮೆ ಇರಬೇಕಿದೆ. ಆದ್ದರಿಂದ ಜನತೆ ಎಚ್ಚೆತ್ತು ನಿಯಮ ಪಾಲನೆ ಮಾಡಿ, ಇತರರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ.

ಪ್ರಾಮಾಣಿಕರಿಗೂ ಸಮಸ್ಯೆ: 

ಸರಕಾರದ ನಿಯಮ ಪಾಲನೆ ಮಾಡಿ ಮನೆಯಲ್ಲಿ ಕುಳಿತವರೂ ಹೆಚ್ಚುವರಿ ‌ಲಾಕ್ ಡೌನ್ ಶಿಕ್ಷೆ ಅನುಭವಿಸುವಂತಾಗಿದೆ. ಇನ್ನೇನು ಅನ್ ಲಾಕ್ ಎಂದು ಭಾವಿಸಿದ್ದ ದ.ಕ. ಜಿಲ್ಲೆಯ ಜನತೆಗೂ ಹೆಚ್ಚುವರಿ ಲಾಕ್ ಡೌನ್ ಶಾಕ್ ಅನುಭವಿಸುವಂತಾಗಿದೆ.

ಕಂಪ್ಲೀಟ್ ಲಾಕ್ ಡೌನ್?: 

ಒಂದು ಕಡೆ ಎರಡು ವರ್ಷಗಳಲ್ಲಿ ಕಟ್ಟುನಿಟ್ಟಾಗಿ ‌ನಿಯಮ ಪಾಲಿಸಿ ಪಾಸಿಟಿವ್ ಆಗದ 780ಕ್ಕೂ ಹೆಚ್ಚು ಮಂದಿ ಇರುವ ಎರಡು ಹಳ್ಳಿಗಳು. ಇನ್ನೊಂದೆಡೆ ಪಾಸಿಟಿವ್ ಸಂಖ್ಯೆ ಹೆಚ್ಚಾದ ಕೂಡಲೇ ಕಂಪ್ಲೀಟ್ ಲಾಕ್ ಡೌನ್ ಅಸ್ತ್ರ ಬಳಸಿ‌ ಪಾಸಿಟಿವ್ ಕೇಸ್ ಕಡಿಮೆ ಮಾಡಿದ‌ ಹಳ್ಳಿಗಳು. ಆದರೆ ಉಳಿದ ಭಾಗಗಳಲ್ಲಿ ಮಾತ್ರ ನಿಯಮ ಪಾಲನೆ ಮಾಡದೆ ಪಾಸಿಟಿವ್ ಸಂಖ್ಯೆ ಹೆಚ್ಚಿಸುವ ಕೊಡುಗೆ. ಈ ದ್ವಂದದಿಂದ ಇಂದು‌ ರಾಜ್ಯ ಮಟ್ಟದಲ್ಲಿ ಬೆಳ್ತಂಗಡಿ ತಾಲೂಕು ಸುದ್ದಿಯಲ್ಲಿದೆ. ಉಸ್ತುವಾರಿ ಸಚಿವರೇ ಬೆಳ್ತಂಗಡಿ, ಸುಳ್ಯದಲ್ಲಿ ಕೊರೋನಾ ನಿಯಂತ್ರಣ ಸಮಸ್ಯೆ ಕುರಿತೂ‌ ತಿಳಿಸಿದ್ದಾರೆ. ಹಾಗಾದರೆ ಬೆಳ್ತಂಗಡಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಉಳಿದ 10 ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ ಅನಿವಾರ್ಯವೇ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಒಟ್ಟಿನಲ್ಲಿ ‌ದ.ಕ.‌ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ‌ಕೈಗೊಂಡು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ನಿಯಮ ರೂಪಿಸಬೇಕಿದೆ.

error: Content is protected !!